
ಸಿಂದಗಿ: ‘ಸಂತಶ್ರೇಷ್ಠ ಕನಕದಾಸರ ಕೀರ್ತನೆಗಳು ಪ್ರಸ್ತುತವಾಗಿವೆ. ಕನಕದಾಸರ ಆದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಜೀವನ ಸಾರ್ಥಕತೆ ಗೊಳಿಸಿಕೊಳ್ಳಬೇಕು’ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.
ಪಟ್ಟಣದ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ತಾಲ್ಲೂಕು ಕುರುಬರ ಸಂಘದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ದಾಸಶ್ರೇಷ್ಠ ಕನಕದಾಸರ ಜಯಂತ್ಯುತ್ಸವ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಕನಕದಾಸರ ಕೀರ್ತನೆಗಳು ಇಡೀ ಮನುಕುಲದ ಉದ್ಧಾರಕ್ಕಾಗಿರುವ ಸಂದೇಶಗಳಾಗಿವೆ. ಕನಕದಾಸರ ಜಯಂತಿ ಒಂದು ದಿನಕ್ಕೆ ವೇದಿಕೆಗೆ ಮಾತ್ರ ಸೀಮಿತವಾಗಿರದೇ ನಿತ್ಯವೂ ಮಕ್ಕಳಿಗೆ ಕನಕದಾಸರ ಆದರ್ಶದ ಪಾಠ ಮುಂದುವರಿಯಬೇಕು’ ಎಂದು ತಿಳಿಸಿದರು.
‘ಹಾಲುಮತ ಸಮುದಾಯ ಹಾಲಿನಷ್ಟೇ ಪರಿಶುದ್ಧವಾದುದು. ಈ ಸಮುದಾಯದ ಹಿರಿಯರು ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು’ ಎಂದು ಕೇಳಿಕೊಂಡರು.
ಪ್ರೊ.ಅರವಿಂದ ಮನಗೂಳಿ ಸಮಾವೇಶವನ್ನು ಉದ್ಘಾಟಿಸಿದರು. ಇಂಡಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ.ಡಿ.ಪಾಟೀಲ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಲ್ಲಣ್ಣ ಸಾಲಿ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷೆ ಶಿಲ್ಪಾ ಕುದರಗೊಂಡ, ಬಿಜೆಪಿ ಮುಖಂಡ ರವಿ ನಾಯ್ಕೋಡಿ, ಶ್ರೀಶೈಲ ಕವಲಗಿ ಮಾತನಾಡಿದರು.
ನಾಗಪ್ಪ ಶಿವೂರ, ಸಿದ್ದು ಬುಳ್ಳಾ, ರಮೇಶ ಬಂಟನೂರ, ರವಿಕಾಂತ ನಾಯ್ಕೋಡಿ ಇವರು ವೇದಿಕೆಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು.
ಸುಕ್ಷೇತ್ರ ಹುಲಜಂತಿಯ ಮಾಳಿಂಗರಾಯ ಮಹಾರಾಜರು, ಗುಬ್ಬೇವಾಡ ಕನ್ನಯ್ಯ ಮಹಾರಾಜರು, ಬಳಗಾನೂರ ಸೋಮರಾಯ ಬೇವಿನಗಿಡದ, ಸಿಂದಗಿ ಹೆಗ್ಗೇರೇಶ್ವರ ದೇವಸ್ಥಾನದ ಧರ್ಮಧರ್ಶಿ ಸೋಮಣ್ಣ ಪೂಜಾರಿ ಸಮಾವೇಶದ ಸಾನ್ನಿಧ್ಯ ವಹಿಸಿದ್ದರು.
ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ನಿಂಗಣ್ಣ ಬುಳ್ಳಾ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.
ಸಿಂದಗಿ ಮತಕ್ಷೇತ್ರದಲ್ಲಿ ಕುರುಬ ಸಮುದಾಯದ ಕಡೆಗಣನೆ ಮಾಡಲಾಗುತ್ತಿದೆ. ಒಡೆದು ಆಳುವ ನೀತಿ ಅನುಸರಿಸಲಾಗುತ್ತಿದೆ. ಸಮುದಾಯದ ಜನರು ಸಂಘಟಿತರಾಗಬೇಕು.ಶ್ರೀಶೈಲ ಕವಲಗಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ
ಅದ್ದೂರಿ ಮೆರವಣಿಗೆ ಸಾರೋಟನಲ್ಲಿ ಭಕ್ತ ಕನಕದಾಸರ ಭಾವಚಿತ್ರವನ್ನು ಇರಿಸಿ ಪಟ್ಟಣದಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು. ಮಾಜಿ ಶಾಸಕ ಶರಣಪ್ಪ ಸುಣಗಾರ ಇಲ್ಲಿಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ತಾಲ್ಲೂಕಿನ 15 ಗ್ರಾಮಗಳ ತಂಡಗಳ ಡೊಳ್ಳಿನ ವಾದ್ಯ ಸಾರವಾಡದ ಗೊಂಬೆಗಳು ಸಾರ್ವಜನಿಕರ ಗಮನ ಸೆಳೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.