ADVERTISEMENT

ಕನೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗೆ ವಿಜಯಪುರ ಜಿಲ್ಲೆ ಪ್ರವೇಶ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 2:43 IST
Last Updated 16 ಅಕ್ಟೋಬರ್ 2025, 2:43 IST
<div class="paragraphs"><p>ಕನೇರಿ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ</p></div>

ಕನೇರಿ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ

   

ವಿಜಯಪುರ: ನೆರೆಯ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ- ಕನೇರಿ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರಿಗೆ ವಿಜಯಪುರ ಜಿಲ್ಲಾ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಆನಂದ್ ಕೆ. ಆದೇಶ ಹೊರಡಿಸಿದ್ದಾರೆ.

ಸ್ವಾಮೀಜಿ ಅವರಿಗೆ ಇದೇ ಅಕ್ಟೋಬರ್‌ 16ರಿಂದ ಡಿಸೆಂಬರ್ 16ರ ವರೆಗೆ ವಿಜಯಪುರ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಬೀಳೂರಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ್ದ ಕಾಡಸಿದ್ದೇಶ್ವರ ಸ್ವಾಮೀಜಿ, 'ಮುಖ್ಯಮಂತ್ರಿ ಕೃಪಾ ಪೋಷಿತ ಲಿಂಗಾಯತ ಮಠಾಧೀಶರ ಒಕ್ಕೂಟ ಎಂಬ ನಾಟಕ ಮಂಡಳಿ ಕಲಾವಿದರು ಕರ್ನಾಟಕದಲ್ಲಿ ಒಂದು ತಿಂಗಳ ಕಾಲ ಬಸವ ಸಂಸ್ಕೃತಿ ಉತ್ಸವ ಎಂದು ತಿರುಗಾಡಿದರು. ಈ ಸಂದರ್ಭದಲ್ಲಿ ಅವರು, 'ದೇವರು ಗುಡಿಯಲ್ಲಿ ಇಲ್ಲ, ಗುಡಿಗೆ ಹೋಗಬೇಡಿ, ಮನೆಯಲ್ಲಿರುವ ದೇವರನ್ನು ಹೊಳೆಗೆ ಹಾಕಿ, ಹೋಟೆಲ್ ಗಳಿಗೆ ಹೋಗಿ ದಾರು ಕುಡಿಯಿರಿ, ಮಾಂಸ ತಿನ್ನಿರಿ, ಅರಾಮಗಿರಿ' ಎಂದು ಹೇಳಿದ್ದಾರೆ. ಅವರನ್ನು ಮುಂದೆ ಕೂರಿಸಿಕೊಂಡು ಆ ಸೂಳೆಮಕ್ಕಳಿಗೆ ನಾನೇ ಬುದ್ದಿ ಹೇಳಬೇಕು, ಹಿಡಿದು ಮೆಟ್ಟಲ್ಲಿ ಹೊಡೆಯಬೇಕು' ಎಂದು ಅವಹೇಳನಕಾರಿಯಾಗಿ ವಾಗ್ದಾಳಿ ನಡೆಸಿದ್ದರು.

ಶ್ರೀಗಳ ಹೇಳಿಕೆ ಖಂಡಿಸಿ ಲಿಂಗಾಯತ ಮಠಾಧೀಶರು, ಬಸವ ಭಕ್ತರು ವಿಜಯಪುರ ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿ, ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ನಡುವೆ ಇದೇ ಅಕ್ಟೋಬರ್ 16 ಮತ್ತು 17ರಂದು ಬಸವನ ಬಾಗೇವಾಡಿಗೆ ಕಾಡಸಿದ್ದೇಶ್ವರ ಸ್ವಾಮೀಜಿ ಬರುವ ಕಾರ್ಯಕ್ರಮ ಇತ್ತು. ಈ ವೇಳೆ ಅಹಿತಕರ ಘಟನೆ ನಡೆಯಬಹುದು, ಶಾಂತಿ, ಸುವ್ಯವಸ್ಥೆಗೆ ದಕ್ಕೆಯಾಗಬಹುದು ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರದಿ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರು ಶ್ರೀಗಳು ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.