ADVERTISEMENT

ಕನೇರಿ ಶ್ರೀಗಳ ಹೇಳಿಕೆ ಖಂಡನೀಯ: ಬಿರಾದಾರ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 7:51 IST
Last Updated 1 ಜನವರಿ 2026, 7:51 IST
ಡಾ.ರವಿಕುಮಾರ ಬಿರಾದಾರ
ಡಾ.ರವಿಕುಮಾರ ಬಿರಾದಾರ   

ವಿಜಯಪುರ: ‘ಬಬಲೇಶ್ವರದಲ್ಲಿ ನಡೆದ ಬಸವಾದಿ ಶರಣರ ಹಿಂದೂ ಸಮಾವೇಶದಲ್ಲಿ ಕನೇರಿ ಮಠದ ಅದೃಶ್ಯ ಕಾದಸಿದ್ಧೇಶ್ವರ ಸ್ವಾಮಿಗಳು ತಮ್ಮ ಭಾಷಣದಲ್ಲಿ ಬಸವಾನುಯಾಯಿಗಳು, ಲಿಂಗಾಯತ ಮಠಾಧೀಶರ ಬಗ್ಗೆ ಹಗುರವಾಗಿ ಹಾಗೂ ಪ್ರಚೋದನಕಾರಿಯಾಗಿ ಮಾತನಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ’ ಎಂದು ರಾಷ್ಟ್ರೀಯ ಬಸವ ಸೇನಾ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ ಬಿರಾದಾರ ತಿಳಿಸಿದ್ದಾರೆ.

‘ನಾವು ಲಿಂಗಾಯತರು, ನಮ್ಮ ಧರ್ಮ ಲಿಂಗಾಯತ, ನಮ್ಮ ಧರ್ಮ ಗುರು ಬಸವಣ್ಣ, ನಮ್ಮ ಧರ್ಮ ಗ್ರಂಥ ಸಮಗ್ರ ವಚನ ಸಾಹಿತ್ಯ ನಾವು ಹೀಗೆ ಹೇಳುತ್ತೇವೆ. ಕನೇರಿ ಪಟಾಲಂಗಳಿಗೆ ತಾಕತ್ತಿದ್ದರೆ ತಡೆಯಲಿ’ ಎಂದು ಸವಾಲು ಹಾಕಿದ್ದಾರೆ.

‘ಬಸವಾದಿ ಶರಣರ ಬಗ್ಗೆ ಅರ್ಧಂಬರ್ಧ ಓದಿಕೊಂಡು ಸಂಘ ಪರಿವಾರದ ಗುಲಾಮಮಗಿರಿ ಮಾಡುತ್ತಾ, ಬಿಜೆಪಿ ವಕ್ತಾರರಂತೆ ವರ್ತಿಸುತ್ತಿರುವ ಕನೇರಿ ಸ್ವಾಮಿಗಳು ಈ ರೀತಿ ಬೆದರಿಕೆ ಹಾಕುತ್ತಾ ತಿರುಗಾಡಿದರೆ ಯಾರೂ ಕೇಳಲ್ಲ’ ಎಂದು ಹೇಳಿದ್ದಾರೆ.

‘ವಿಜಯಪುರದ ಲಿಂಗಾಯತ ಮಠಾಧೀಶರು ಸಮಾವೇಶವನ್ನು ಬಹಿಷ್ಕರಿಸಿದ್ದರಿಂದ ಜಿಲ್ಲೆಯ ಬೆರಳೆಣಿಕೆಯ ಬಸವ ವಿರೋಧಿ ಸ್ವಾಮಿಗಳು ಭಾಗವಹಿಸಿರಬಹುದು, ಅಲ್ಲದೆ ವೇದಿಕೆ ತುಂಬಿಸಲು ಆಯೋಜಕರು ಬೇರೆ ರಾಜ್ಯ ಹಾಗೂ ಬೇರೆ ಜಿಲ್ಲೆಗಳಿಂದ ಕೆಲ ಸಾಧುಗಳನ್ನು ಕರೆಸಿಕೊಂಡಿದ್ದರು’ ಎಂದು ಹೇಳಿದ್ದಾರೆ.

‘ಕನೇರಿ ಸ್ವಾಮಿಗಳಿಗೆ ನೀವು ಉತ್ತಮ ಪ್ರಜೆಯಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿರುವುದು ಸರಿಯಾಗಿದೆ. ಅಲ್ಲದೆ, ಕನೇರಿ ಸ್ವಾಮಿಗಳು ಎತ್ತಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡಲು ರಾಷ್ಟ್ರೀಯ ಬಸವ ಸೇನೆ ಕಾರ್ಯಕರ್ತರು ಯಾವುದೇ ವೇದಿಕೆಯಲ್ಲಿ ಉತ್ತರ ಕೊಡಲು ತಯಾರಿದ್ದಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದರು.

ಸವಾಲ ಸ್ವೀಕರಿಸಿದ್ದೇವೆ: ಬಸವಪ್ರಭು ಸ್ವಾಮೀಜಿ

ವಿಜಯಪುರ: ‘ಬಸವ ಸಂಸ್ಕೃತಿ ಅಭಿಯಾನದ ವಿರುದ್ಧವಾಗಿ ಬಬಲೇಶ್ವರದಲ್ಲಿ ಆಯೋಜಿಸಿದ್ದ ಬಸವಾದಿ ಶರಣರ ಹಿಂದೂ ಸಮಾವೇಶದಲ್ಲಿ ಅಪ್ರಬುದ್ಧವಾಗಿ ಮಾತನಾಡಿ ಬಸವಾದಿ ಪ್ರಮಥರ ಮೂಲ ಆಶಯಗಳನ್ನು ತಪ್ಪು ತಪ್ಪಾಗಿ ಅರ್ಥೈಸಿ ಜನಗಳಿಗೆ ಮೂರ್ಖರನ್ನಾಗಿಸುವ ಕನೇರಿ ಸ್ವಾಮಿಗಳ ಪ್ರತಿಯೊಂದು ಮಾತುಗಳಿಗೆ ಉತ್ತರಿಸಲು ಸವಾಲನ್ನು ಸ್ವೀಕರಿಸಲು ನಾವು ಸದಾ ಸನ್ನದ್ಧರಾಗಿದ್ದೇವೆ’ ಎಂದು ಬಸವಕಲ್ಯಾಣದ ಗುಣತೀರ್ಥವಾಡಿ ಕಲ್ಯಾಣ ಮಹಾಮನೆ ಮಹಾಮಠ ಬಸವಪ್ರಭು ಸ್ವಾಮೀಜಿ ತಿಳಿಸಿದ್ದಾರೆ.

‘ಕನೇರಿ ಶ್ರೀಗಳಿಗೆ ವಚನಗಳಲ್ಲಿನ ತತ್ವಜ್ಞಾನ ಮತ್ತು ದಾರ್ಶನಿಕತೆಯ ಕೊರತೆ ಎದ್ದು ಕಾಣುತ್ತಿದೆ. ಅವರ ಪ್ರತಿಯೊಂದು ಮಾತುಗಳು ಪ್ರಚೋದನಾತ್ಮಕ ಮತ್ತು ದ್ವೇಷದಿಂದ ಕೂಡಿವೆ’ ಎಂದು ಹೇಳಿದ್ದಾರೆ.

‘ಇಲಿಗೆ ಹೊಡೆಯಲು ಹೋಗಿ ಗಣಪನಿಗೆ ಪೆಟ್ಟು ಕೊಟ್ಟಂತೆ’ ಸಚಿವ ಎಂ.ಬಿ. ಪಾಟೀಲ ಭಾಲ್ಕಿ ಶ್ರೀ ನಿಜಗುಣಾನಂದ ಸ್ವಾಮೀಜಿ ಮತ್ತು ಸಾಣೆಹಳ್ಳಿ ಶ್ರೀಗಳಿಗೆ ವೈಯುಕ್ತಿಕವಾಗಿ ಬೈಯಲು ಹೋಗಿ ಬಸವಣ್ಣನವರ ಜೀವನಕ್ಕೆ ಮತ್ತು ಅವರ ವಚನಗಳ ಅಂಕಿತದ ತಾತ್ವಿಕತೆಗೆ ದಕ್ಕೆಯನ್ನುಂಟು ಮಾಡುತ್ತಿರುವುದು ಅವರ ಅಜ್ಞಾನದ ಪರಮಾವಧಿಯಾಗಿದೆ’ ಎಂದು ಪ್ರಕಟಣೆಯಲ್ಲಿ ತಿರುಗೇಟು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.