ADVERTISEMENT

ವಿಜಯಪುರ | ಕನ್ನಡಾಭಿಮಾನ ಮೆರೆದ ‘ಹಿಟ್ಟಿನಹಳ್ಳಿ’ಗರು

ವಿಜಯಪುರ ತಾಲ್ಲೂಕು ಎಂಟನೇ ಸಾಹಿತ್ಯ ಸಮ್ಮೇಳನ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 2:06 IST
Last Updated 21 ಜನವರಿ 2026, 2:06 IST
ವಿಜಯಪುರ ತಾಲ್ಲೂಕಿನ ಹಿಟ್ಟಿನಹಳ್ಳಿಯಲ್ಲಿ ಮಂಗಳವಾರ ಆರಂಭವಾದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶಾಸಕ ವಿಠಲ ಕಟಕದೋಂಡ ಉದ್ಘಾಟಿಸಿದರು –ಪ್ರಜಾವಾಣಿ ಚಿತ್ರ/ ಸಂಜೀವ ಅಕ್ಕಿ
ವಿಜಯಪುರ ತಾಲ್ಲೂಕಿನ ಹಿಟ್ಟಿನಹಳ್ಳಿಯಲ್ಲಿ ಮಂಗಳವಾರ ಆರಂಭವಾದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶಾಸಕ ವಿಠಲ ಕಟಕದೋಂಡ ಉದ್ಘಾಟಿಸಿದರು –ಪ್ರಜಾವಾಣಿ ಚಿತ್ರ/ ಸಂಜೀವ ಅಕ್ಕಿ   

ವಿಜಯಪುರ: ಹಿಟ್ಟಿನಹಳ್ಳಿಯಲ್ಲಿ ಮಂಗಳವಾರ ಆರಂಭವಾದ ವಿಜಯಪುರ ತಾಲ್ಲೂಕು ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಳ್ಳಿಯ ಪ್ರತಿ ಮನೆಯ ಜನರು ಉತ್ಸಾಹದಿಂದ ಪಾಲ್ಗೊಂಡು ಕನ್ನಡಾಭಿಮಾನ ಮೆರೆದರು.

ಗ್ರಾಮದ ಮಾರುತೇಶ್ವರ ದೇವಾಲಯದಿಂದ ಶಿವಮೂರ್ತಿ ಸ್ವಾಮಿ ಚರಂತಿಮಠ ಪ್ರೌಢಶಾಲೆ ಆವರಣದವರೆಗೆ ನಡೆದ ಮೆರವಣಿಗೆಯಲ್ಲಿ ಒಂದು ಸಾವಿರಕ್ಕೂ ಅಧಿಕ ಮಹಿಳೆಯರು ಪೂರ್ಣಕುಂಭ ಹೊತ್ತು ಭಾಗಿಯಾದರು.

ಹಳ್ಳಿಯ ಹತ್ತಾರು ರೈತರು ತಮ್ಮ ಎತ್ತಿನ ಬಂಡಿಯನ್ನು ಅಲಂಕರಿಸಿ, ಅದರಲ್ಲಿ ಜ್ಞಾನಪೀಠ ಪುರಸ್ಕೃತ ಕನ್ನಡ ಸಾಹಿತಿಗಳು, ನಾಡಪ್ರೇಮಿಗಳ ಚಿತ್ರಗಳನ್ನು ಇಟ್ಟು ಅಭಿಮಾನದಿಂದ ಮೆರವಣಿಗೆ ಮಾಡಿದರು. ವಿವಿಧ ಮಹಾಪುರುಷರ ವೇಷದಲ್ಲಿ ಚಿಣ್ಣರು ಗಮನಸೆಳೆದರು. ಡೊಳ್ಳು, ಕೋಲಾಟ, ಲೆಜಿಮ್‌, ಗೊಂಬೆ ಕುಣಿತ ಕಲಾವಿದರು ಮೆರವಣಿಗೆಗೆ ಮೆರುಗು ನೀಡಿದರು.

ADVERTISEMENT

ಕನ್ನಡ ಬಾವುಟ, ತೋರಣ, ಸ್ವಾಗತ ಕೋರುವ ಬ್ಯಾನರ್‌ಗಳು, ಸ್ವಾಗತ ಕಮಾನುಗಳಿಂದ ಗ್ರಾಮದ ಪ್ರಮುಖ ಮಾರ್ಗಗಳು ಅಲಂಕೃತವಾಗಿದ್ದವು. ಕನ್ನಡ ತೇರಿನಲ್ಲಿ ಸಾಗಿದ ಸಮ್ಮೇಳನಾಧ್ಯಕ್ಷರಿಗೆ ಗ್ರಾಮಸ್ಥರು ಪುಷ್ಪ ನಮನದ ಮೂಲಕ ಅದ್ಧೂರಿ ಮೆರವಣಿಗೆ ಮಾಡಿದರು. ರಸ್ತೆಯ ಇಕ್ಕೆಲಗಳಲ್ಲಿ ಹಳ್ಳಿಯ ಜನರು ನಿಂತು ಮೆರವಣಿಗೆ ಕಣ್ತುಂಬಿಕೊಂಡರು.

ಸಮ್ಮೇಳನದಲ್ಲಿ ಪುಸ್ತಕ, ಖಾದಿ ವಸ್ತ್ರಗಳು, ಗೃಹ ಉತ್ಪನ್ನಗಳ ಮಾರಾಟ ಜೋರಾಗಿತ್ತು. ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಇಡೀ ಊರಲ್ಲಿ ಜಾತ್ರೆಯ ಸಂಭ್ರಮ ಮನೆ ಮಾಡಿತ್ತು. ಹಳ್ಳಿಯಲ್ಲಿ ಆಯೋಜನೆಯಾಗಿದ್ದ ತಾಲ್ಲೂಕು ಸಮ್ಮೇಳನವಾದರೂ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಮೀರಿಸುವಂತಿತ್ತು. 

ಶತಮಾನದ ಸಂತ ಸಿದ್ದೇಶ್ವರ ಸ್ವಾಮಿಗಳ ಪ್ರಧಾನ ವೇದಿಕೆಯಲ್ಲಿ ಶಾಸಕ ವಿಠ್ಠಲ ಕಟಕದೊಂಡ ಸಮ್ಮೇಳನಕ್ಕೆ ಚಾಲನೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ನಿಡಸೋಸಿ ಮಠದ ದುರದುಂಡೇಶ್ವರ ಸ್ವಾಮೀಜಿ ಮಾತನಾಡಿ, ‘ಶುದ್ಧ ಕನ್ನಡ ಉಳಿದಿಲ್ಲ. ಉರ್ದು, ತಮಿಳು, ತೆಲುಗು, ಮರಾಠಿ, ಇಂಗ್ಲಿಷ್, ಹಿಂದಿ ಪದಗಳು ಕನ್ನಡ ಭಾಷೆಯೊಳಗೆ ಮಿಶ್ರವಾಗಿದೆ. ಮನೆಯಲ್ಲೇ ಕನ್ನಡ ಬಳಕೆ ಕಡಿಮೆ ಮಾಡಿಕೊಳ್ಳುತ್ತ ಹೊರಟಿರುವುದು ಬೇಸರದ ಸಂಗತಿ’ ಎಂದರು.

‘ಹೊರಗೆ ಯಾವುದೇ ಭಾಷೆ ಮಾತನಾಡಿದರೂ ಮನೆಯಲ್ಲಿ ಕನ್ನಡವನ್ನೇ ಕಡ್ಡಾಯವಾಗಿ ಮಾತನಾಡಬೇಕು. ಮಕ್ಕಳಲ್ಲಿ ಭಾಷಾಭಿಮಾನ ಮೂಡಿಸುವ ಕಾರ್ಯ ಪಾಲಕರು, ಶಿಕ್ಷಕರು, ಸಮಾಜ ಮಾಡಬೇಕು’ ಎಂದು ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಹೊನ್ನಳ್ಳಿಯ ಶಿವಶರಣೆ ನಿಂಬೆಕ್ಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಡಿ. ಕುಮಾನಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಶೆಡಶ್ಯಾಳ, ಕೃಷಿ ವಿ.ವಿ ಪ್ರಾಧ್ಯಾಪಕ ರಾಜಕುಮಾರ ಜೊಲ್ಲೆ, ಬಸವರಾಜ ಪಡಶೆಟ್ಟಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಮಾಧವ ಎಚ್. ಗುಡಿ, ತಹಶೀಲ್ದಾರ್‌ ಪ್ರಶಾಂತ ಚನಗೊಂಡ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಆನಂದ ಕುಲಕರ್ಣಿ, ಮೋಹನ ಕಟ್ಟಿಮನಿ, ಮಹಾದೇವಿ ತೆಲಗಿ ಮಮತಾಜ್, ವಿಜಯಲಕ್ಷ್ಮಿ ಹಳಕಟ್ಟಿ ಇದ್ದರು.

ವಿಜಯಪುರ ತಾಲ್ಲೂಕಿನ ಹಿಟ್ಟಿನಹಳ್ಳಿಯಲ್ಲಿ ಮಂಗಳವಾರ ಆರಂಭವಾದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಗ್ರಾಮಸ್ಥರು –ಪ್ರಜಾವಾಣಿ ಚಿತ್ರ/ಸಂಜೀವ ಅಕ್ಕಿ
ವಿಜಯಪುರ ತಾಲ್ಲೂಕಿನ ಹಿಟ್ಟಿನಹಳ್ಳಿಯಲ್ಲಿ ಮಂಗಳವಾರ ಆರಂಭವಾದ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ರೈತರ ಎತ್ತಿನ ಬಂಡಿಗಳು –ಪ್ರಜಾವಾಣಿ ಚಿತ್ರ/ಸಂಜೀವ ಅಕ್ಕಿ
ವಿಜಯಪುರ ತಾಲ್ಲೂಕಿನ ಹಿಟ್ಟಿನಹಳ್ಳಿಯಲ್ಲಿ ಮಂಗಳವಾರ ಆರಂಭವಾದ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರು –ಪ್ರಜಾವಾಣಿ ಚಿತ್ರ/ಸಂಜೀವ ಅಕ್ಕಿ
ಕನ್ನಡ ಅತ್ಯಂತ ಪ್ರಾಚೀನ ಐತಿಹಾಸಿಕ ಭಾಷೆಯಾಗಿದೆ. ಕನ್ನಡ ಭಾಷೆ ನಮ್ಮೆಲ್ಲರ ಸಂಸ್ಕೃತಿ ಸಂಸ್ಕಾರದ ಪ್ರತೀಕ. ಕನ್ನಡ ಉಳಿಸಿ ಬೆಳಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ
ವಿಠ್ಠಲ ಕಟಕದೊಂಡ ಶಾಸಕ
ಹಿಟ್ಟಿನಹಳ್ಳಿ ಉತ್ನಾಳ ಹಾಗೂ ಕೃಷಿ ವಿ.ವಿಯ ಸಮಸ್ತ ಸಿಬ್ಬಂದಿ ತನು ಮನ ಧನ ಸಹಾಯ ನೀಡಿ ಸಮ್ಮೇಳನದ ಯಶಸ್ಸಿಗೆ ಸಹಕರಿಸಿದ್ದಕ್ಕೆ ಧನ್ಯವಾದಗಳು
ಹಾಸಿಂಪೀರ ವಾಲಿಕಾರ ಕಸಾಪ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ

ಊರೆಲ್ಲ ಕನ್ನಡಮಯ: ಗೆಣ್ಣೂರ ‘ಹಿಟ್ಟಿನಹಳ್ಳಿ ಊರೆಲ್ಲ ಕನ್ನಡಮಯವಾಗಿದೆ. ಈ ಸಮ್ಮೇಳನದ ಅಧ್ಯಕ್ಷತೆಯ ಗೌರವವನ್ನು ನನಗೆ ನೀಡಿದ ಇಡೀ ಹಳ್ಳಿಗೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಗೌರವ ಅರ್ಪಿಸುತ್ತೇನೆ’ ಎಂದು ಸಮ್ಮೇಳನದ ಅಧ್ಯಕ್ಷ ಸಾಹಿತಿ ಸೋಮಲಿಂಗ ಗೆಣ್ಣೂರ ಹೇಳಿದರು. ‘ವಿಜಯಪುರ ಜಿಲ್ಲೆ ಮಕ್ಕಳ ಸಾಹಿತ್ಯದ ತವರೂರಾಗಿದೆ. ಮಕ್ಕಳ ಸಾಹಿತ್ಯ ದಲಿತ ಬಂಡಾಯ ಸಾಹಿತ್ಯ ಮಹಿಳಾ ಸಾಹಿತ್ಯ ಸಂಶೋಧನಾ ಸಾಹಿತ್ಯ ಅಭಿನಂದನಾ ಸಾಹಿತ್ಯ ಕಥೆ ಮತ್ತು ಕಾದಂಬರಿ ಸೃಜನಶೀಲ ಸಾಹಿತ್ಯ ಪತ್ರಿಕಾ ಸಾಹಿತ್ಯ ರಂಗಭೂಮಿ ತತ್ವಪದಗಳ ಸಾಹಿತ್ಯ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಜಿಲ್ಲೆಯ ಸಾಹಿತಿಗಳ ಸಾಧನೆ ಹಿರಿದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.