ADVERTISEMENT

ನ್ಯಾಯ ಸಿಗದಿದ್ದರೆ ಸಿಂದಗಿ ಬಂದ್: ದಲಿತ ಸಂಘಟನೆಗಳ ಎಚ್ಚರಿಕೆ

ನಿರಾಶ್ರಿತರ ಧರಣಿ ಸತ್ಯಾಗ್ರಹ: ದಲಿತ ಸಂಘಟನೆಗಳ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 4:55 IST
Last Updated 16 ಸೆಪ್ಟೆಂಬರ್ 2025, 4:55 IST
ಸಿಂದಗಿಯ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ವಿವಿಧ ಸಂಘಟನೆಗಳ ಪ್ರಮುಖರು ಕೆಲ ಕಾಲ ರಸ್ತೆ ತಡೆ ಪ್ರತಿಭಟನೆ ನಡೆಸಿದರು
ಸಿಂದಗಿಯ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ವಿವಿಧ ಸಂಘಟನೆಗಳ ಪ್ರಮುಖರು ಕೆಲ ಕಾಲ ರಸ್ತೆ ತಡೆ ಪ್ರತಿಭಟನೆ ನಡೆಸಿದರು   

ಸಿಂದಗಿ: ಪಟ್ಟಣ ಅರಾಜಕತೆಯಿಂದ ನಲುಗುತ್ತಿದೆ. ಬಡವರು ಬೀದಿ ಪಾಲಾಗಿದ್ದಾರೆ. ಕೋರ್ಟ್ ಹೆಸರಿನಲ್ಲಿ ರಾಜಕಾರಣಿಗಳು ನುಣುಚಿಕೊಳ್ಳುತ್ತಿದ್ದಾರೆ. 10 ದಿನಗಳಾದರೂ ನಿರಾಶ್ರಿತರಿಗೆ ಸೂರು ಕೊಡುವ ಇಚ್ಛಾಶಕ್ತಿ ಇಲ್ಲದಾಗಿದೆ. ‌ನಿಮ್ಮ ರಾಜಕೀಯಕ್ಕೆ ಚ್ಯುತಿ ತರಲು ನಾವು ಬಂದಿಲ್ಲ. ಬಡವರಿಗಾದ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ನಾಗವಾರ ಬಣ) ಜಿಲ್ಲಾ ಸಂಚಾಲಕ ಚಂದ್ರಕಾಂತ ಸಿಂಗೆ ಹೇಳಿದರು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ನಡೆದ ನಿರಾಶ್ರಿತರ ಧರಣಿ ಸತ್ಯಾಗ್ರಹಕ್ಕೆ ಬೆಂಬಲಿಸಿ ಅವರು ಮಾತನಾಡಿದರು.

ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಯಾರದೋ ಕೈಗೊಂಬೆಯಾಗಿ ಕೆಲಸ ಮಾಡಿದರೆ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ. ನಿರಾಶ್ರಿತರ ತಾಳ್ಮೆ ಪರೀಕ್ಷೆ ಮಾಡಬೇಡಿ. ಅಲ್ಲಿ-ಇಲ್ಲಿ ವಾಸಕ್ಕೆ ಯೋಗ್ಯವಲ್ಲದ ಸ್ಥಳದಲ್ಲಿ ನಿವೇಶನ ಕೊಡುವುದು ಬೇಡ. ಅವರು ವಾಸವಾಗಿದ್ದ ಜಮೀನನ್ನೆ ಸ್ವಾದೀನಪಡಿಸಿಕೊಂಡು ಅಲ್ಲಿಯೇ ಸೂರು ಕಲ್ಪಿಸಿಕೊಡಬೇಕು. ಇಲ್ಲದಿದ್ದರೆ ಸಿಂದಗಿ ಬಂದ್ ಮಾಡಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ದಸಂಸ ಮುಖಂಡ ಪರುಶರಾಮ ದಿಂಡವಾರ ಮಾತನಾಡಿ, ಬಡವರಿಗಾಗುತ್ತಿರುವ ಅನ್ಯಾಯ ಸಹಿಸಿಕೊಳ್ಳುವುದಿಲ್ಲ. ನಿರಾಶ್ರಿತ ಮಕ್ಕಳು ಅಂಬೇಡ್ಕರ್ ವೃತ್ತದ ಬಳಿ ಬಯಲಲ್ಲೆ ಇದ್ದಾರೆ. ಅಲ್ಲಿಂದಲೇ ಶಾಲೆಗೆ ಹೋಗುತ್ತಿರುವುದು ನಿಜಕ್ಕೂ ನೋವಿನ ಸಂಗತಿ. ಶಾಸಕರೆ ತಾವೇನು ಮಾಡುತ್ತಿದ್ದೀರಿ ಎಂದರು.

ವಿವಿಧ ಸಂಘಟನೆಗಳಿಂದ ಕೆಲ ಕಾಲ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಯಿತು. ಶ್ರೀಶೈಲಗೌಡ ಬಿರಾದಾರ, ರಾಕೇಶ ಕಾಂಬಳೆ, ಭೀಮೂ ರತ್ನಾಕರ, ಖಾಜೂ ಬಂಕಲಗಿ, ಸಿದ್ದು ಪೂಜಾರಿ, ನೀಲಮ್ಮ ಯಡ್ರಾಮಿ ಇದ್ದರು.

ವಿಧಾನಪರಿಷತ್ ವಿರೋದಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸೆ.16ರಂದು ಮಧ್ಯಾಹ್ನ 3 ಗಂಟೆಗೆ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

ಇಂಡಿ ಎಸಿ ಮನವೊಲಿಕೆ ವಿಫಲ: ಧರಣಿ ಸತ್ಯಾಗ್ರಹ ಮುಂದುವರೆಸಿದ 842/2*2 ಜಾಗೆಯಲ್ಲಿನ 84 ಕುಟುಂಬಗಳ ಸದಸ್ಯರ ಮನವೊಲಿಕೆಗೆ ಸೋಮವಾರ ಸ್ಥಳಕ್ಕೆ ಇಂಡಿ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಪುರಸಭೆಯ ಅಂತರಗಂಗಿ ಬಡಾವಣೆಯಲ್ಲಿ 84 ಕುಟುಂಬಗಳಿಗೆ ನಿವೇಶನ ನೀಡಲಾಗುತ್ತದೆ. ಧರಣಿ ಸತ್ಯಾಗ್ರಹ ಕೈ ಬಿಡುವಂತೆ ಉಪವಿಭಾಗಾಧಿಕಾರಿಗಳು ಧರಣಿ ನಿರತ ಮಹಿಳೆಯರಲ್ಲಿ ಕೇಳಿಕೊಂಡರು.

ಆದರೆ ಮಹಿಳೆಯರು ನಮಗೆ ಮೊದಲಿದ್ದ ಜಾಗವನ್ನೇ ಭೂ ಸ್ವಾಧೀನ ಪಡಿಸಿಕೊಂಡು ಅದೇ ಜಾಗದಲ್ಲಿ ನೀಡಬೇಕು. ಬೇರೆ ಜಾಗೆ ನಮಗೆ ಬೇಡ ಎಂದು ತಿರಸ್ಕರಿಸಿದರು. ತಹಶೀಲ್ದಾರ್‌ ಕರೆಪ್ಪ ಬೆಳ್ಳಿ, ಪುರಸಭೆ ಮುಖ್ಯಾಧಿಕಾರಿ ರಾಜಶೇಖರ ಎಸ್. ಇದ್ದರು.

ಸಿಂದಗಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಧರಣಿ ಸ್ಥಳಕ್ಕೆ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಭೇಟಿ ನೀಡಿ ನಿರಾಶ್ರಿತರ ಮನವೊಲಿಕೆಗೆ ಪ್ರಯತ್ನಿಸಿದರು
ರಸ್ತೆ ತಡೆ ಪ್ರತಿಭಟನೆ ಕಣ್ಣೀರಿಟ್ಟ ದಲಿತ ಸಂಘಟನೆ ಮುಖಂಡರು ನಮ್ಮ ಭೂಮಿ, ನಮ್ಮ ಹಕ್ಕು ಘೋಷಣೆ

ಬಡವರ ಗೋರಿ ಮೇಲೆ ಮಹಲ

ನಿರ್ಮಾಣ: ಆಕ್ರೋಶ 20 ವರ್ಷಗಳಿಂದ ವಾಸಿಸುತ್ತಿದ್ದ 84 ಕುಟುಂಬಗಳನ್ನು ಒಕ್ಕಲೆಬ್ಬಿಸಿ ಬಡವರ ಗೋರಿ ಮೇಲೆ ಮಹಲ್‌ ಕಟ್ಟುವುದು ಯಾವ ನ್ಯಾಯ? ಮಳೆ-ಗಾಳಿಯಲ್ಲಿ ಮಹಿಳೆಯರು ವೃದ್ಧಿರು ಮಕ್ಕಳು ಬಯಲಲ್ಲಿ ಕುಳಿತು ಸೂರಿಗಾಗಿ ಪ್ರತಿಭಟಿಸುತ್ತಿದ್ದಾರೆ. ತಾವು ಎಲ್ಲಿಯೋ ಕುಳಿತು ಸಭೆ ನಡೆಸಿ ಕಣ್ಣೀರು ಸುರಿಸುವುದು ಕಥೆ ಹೇಳುವುದು ಬೇಡ. ಅದೇ ಜಾಗೆಯನ್ನು ಪುರಸಭೆಯಿಂದ ಸ್ವಾಧೀನಪಡಿಸಿಕೊಂಡು ನಿರಾಶ್ರಿತ ಕುಟುಂಬಗಳಿಗೆ ಸೂರು ದೊರಕಿಸಿಕೊಡುವ ಕಾರ್ಯಕ್ಕೆ ಮುಂದಾಗಬೇಕು ಎಂದು ದಲಿತ ಸಂಘಟನೆ ಪ್ರಮುಖ ಪ್ರಕಾಶ ಗುಡಿಮನಿ ಶಾಸಕ ಅಶೋಕ ಮನಗೂಳಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.