ADVERTISEMENT

ಬಿಜೆಪಿಯನ್ನೇ ರಿಪೇರಿ ಮಾಡುತ್ತೇನೆ, ಹೊಸ ಪಕ್ಷ ಕಟ್ಟಲ್ಲ: ಬಸನಗೌಡ ಪಾಟೀಲ ಯತ್ನಾಳ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2025, 16:45 IST
Last Updated 15 ಮಾರ್ಚ್ 2025, 16:45 IST
<div class="paragraphs"><p>ಶಾಸಕ ಬಸನಗೌಡ ಪಾಟೀಲ ಯತ್ನಾಳ</p></div>

ಶಾಸಕ ಬಸನಗೌಡ ಪಾಟೀಲ ಯತ್ನಾಳ

   

ವಿಜಯಪುರ: ‘ನಾನು ಯಾವುದೇ ಹೊಸ ಪಕ್ಷ ಕಟ್ಟಲು ಹೊರಟಿಲ್ಲ. ನಮ್ಮ ಪಕ್ಷವನ್ನೇ ರಿಪೇರಿ ಮಾಡುತ್ತೇವೆ.  ಹಿಂದುತ್ವದಿಂದ ದೂರ ಸರಿದಿರುವ ಬಿಜೆಪಿಯನ್ನು ಮತ್ತೆ ಹಿಂದುತ್ವಕ್ಕೆ ಮರಳಿ ತರುತ್ತೇವೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಧ್ಯಪ್ರದೇಶ, ದೆಹಲಿ, ಆಸ್ಸಾಂ, ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್‌ ಸೇರಿದಂತೆ ಎಲ್ಲ ರಾಜ್ಯಗಳಲ್ಲೂ ಬಿಜೆಪಿ ಹಿಂದುತ್ವದ ಆಧಾರದ ಮೇಲೆ ಅಧಿಕಾರಕ್ಕೆ ಬಂದಿದೆ. ಮುಂದೆ ಕರ್ನಾಟಕದಲ್ಲೂ ಬಿಜೆಪಿ ಹಿಂದುತ್ವದ ಆಧಾರದ ಮೇಲೆ ಅಧಿಕಾರಕ್ಕೆ ಬರಲಿದೆ. ಹಿಂದುತ್ವದ ಪರ ಗಟ್ಟಿಯಾಗಿ ಮಾತನಾಡುವ ನಾಯಕರನ್ನು ಪಕ್ಷ ಗುರುತಿಸಬೇಕಿದೆ’ ಎಂದರು.

ADVERTISEMENT

‘ನಮಗೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮೇಲೆ ವಿಶ್ವಾಸ ಇದೆಯೇ ಹೊರತು ಯಡಿಯೂರಪ್ಪ, ವಿಜಯೇಂದ್ರ ಮೇಲೆ ಇಲ್ಲ' ಎಂದು ವಾಗ್ದಾಳಿ ನಡೆಸಿದರು.

‘ಯತ್ನಾಳ ಏನು, ವಿಜಯೇಂದ್ರ ಏನು ಎಂಬುದು ಮೇಲಿನವರಿಗೆ ಗೊತ್ತಾಗಿದೆ. ಯತ್ನಾಳನನ್ನು ಹೊರಹಾಕಲು ಆಗುವುದಿಲ್ಲ ಎಂಬುದು ವಿಜಯೇಂದ್ರ ಬಣದವರಿಗೆ ಗೊತ್ತಾಗಿದೆ. ಮುಂದೆ ಯತ್ನಾಳ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಆದರೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ರೇಣುಕಾಚಾರ್ಯ ಅವರು ನನ್ನ ಬಗ್ಗೆ ಮೃದುವಾಗಿದ್ದಾರೆ’ ಎಂದು ಲೇವಡಿ ಮಾಡಿದರು.

‘ವೀರಶೈವ ಲಿಂಗಾಯತ ಎಂದರೆ ಈ ಮೊದಲು ಪೂಜ್ಯ ತಂದೆಯವರು ಎಂಬ ಹವಾ ಸೃಷ್ಟಿಸಲಾಗಿತ್ತು. ಅಪ್ಪ, ಮಗನನ್ನು ತೆಗೆದರೆ ಬಿಜೆಪಿಗೆ ಹಿನ್ನಡೆಯಾಗುತ್ತದೆ ಎಂದು ಬಿಜೆಪಿ ವರಿಷ್ಠರು ಭಾವಿಸಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಬಿಜೆಪಿಗೆ ಈಗ ಬೇಕಿರುವುದು ಸಮಗ್ರ ಹಿಂದುತ್ವದ ನಾಯಕತ್ವವೇ ಹೊರತು ಕೇವಲ ಲಿಂಗಾಯತರಲ್ಲ. ಲಿಂಗಾಯತರು ಹಿಂದು ಧರ್ಮದ ಭಾಗವೇ ಹೊರತು ಪ್ರತ್ಯೇಕವಲ್ಲ. ಸನಾತನ ಹಿಂದು ಧರ್ಮ ಉಳಿದರೆ ಲಿಂಗಾಯತರು ಉಳಿಯುತ್ತಾರೆ, ಇಲ್ಲವಾದರೆ ಸಾಧ್ಯವಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.