ADVERTISEMENT

ಕಸಾಪ‌ ಭ್ರಷ್ಟಾಚಾರ ಮುಕ್ತಗೊಳಿಸಲು ಆದ್ಯತೆ: ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 12:55 IST
Last Updated 7 ಮಾರ್ಚ್ 2021, 12:55 IST
ರಾಜಶೇಖರ ಮುಲಾಲಿ
ರಾಜಶೇಖರ ಮುಲಾಲಿ   

ವಿಜಯಪುರ: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬೇರೂರಿರುವ ಭ್ರಷ್ಟಾಚಾರದ ಬೇರುಗಳನ್ನು ಸಂಪೂರ್ಣವಾಗಿ ತೊಡೆದು ಹಾಕುವ ಹಾಗೂ ನಾಡಿನ ಯುವ ಸಮುದಾಯವನ್ನು ಸಂಘಟಿಸಿ ಒಂದು ಸಶಕ್ತ ಕನ್ನಡ ಸಾಹಿತ್ಯ ಪಡೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯವ ಉದ್ದೇಶದಿಂದ ಕಸಾಪ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವುದಾಗಿ ಬಳ್ಳಾರಿಯ ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧ್ಯಕ್ಷ ಸ್ಥಾನಕ್ಕೆ ತಾವು ಆಯ್ಕೆಯಾದರೆ ಪರಿಷತ್ತಿನ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.

ಗಡಿ ತಗಾದೆ, ಅಂತರರಾಜ್ಯ ನೆಲ, ಜಲ ವಿವಾದ, ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ, ಗಡಿ ಭಾಗದ ಕನ್ನಡ ಶಾಲೆಗಳ ದುಸ್ಥಿತಿ ಸೇರಿದಂತೆ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ಕಂಡಕೊಳ್ಳುವಂತೆ ಸರ್ಕಾರವನ್ನು ಬಡಿದೆಬ್ಬೆಸುವ ಕಾರ್ಯ ಕಸಾಪದಿಂದ ಆಗಬೇಕಾಗಿದೆ. ಆದರೆ, ಕಸಾಪದ ಅಂಗಳದಲ್ಲಿ ಭ್ರಷ್ಟಾಚಾರ ಎಂಬುದು ಹೆಮ್ಮರವಾಗಿ ಬೆಳೆದಿದೆ ಎಂದು ಆರೋಪಿಸಿದರು.

ADVERTISEMENT

ಪರಿಷತ್ತನ್ನು ಡಿಜಿಟಲೀಕರಣಗೊಳಿಸಿ ನಾಡಿನ ಮೂಲೆ ಮೂಲೆಯ ಜನರಿಗೆ ಕನ್ನಡ ಸಾಹಿತ್ಯವನ್ನು ತಲುಪಿಸುವ ಯೋಜನೆ, ಗಡಿನಾಡ ಕನ್ನಡಿಗರ ರಕ್ಷಣೆಗೆ ಕಾನೂನು ನೆರವು, ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗದ ಮೀಸಲು ಜಾರಿಗೆ ಹೋರಾಟ ರೂಪಿಸಲಾಗುವುದು ಎಂದು ಹೇಳಿದರು.

ಕಸಾಪ ರಾಜ್ಯ ಮಹಿಳಾ ಘಟಕ ಪ್ರಾರಂಭಿಸಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಮಹಿಳಾ ಸಾಧಕರನ್ನು ಗುರುತಿಸಿ, ಗೌರವಿಸಲಾಗುವುದು ಎಂದು ತಿಳಿಸಿದರು.

ರಾಜ್ಯದ ಪ್ರತಿ ಜಿಲ್ಲೆ, ತಾಲ್ಲೂಕುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಸ್ವಂತ ‘ಕನ್ನಡ ಭವನ’ ನಿರ್ಮಾಣ ಮಾಡುವ ಉದ್ದೇಶವಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ಪ್ರತಿಭಾವಂತ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಉನ್ನತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿವೇತನ ನೀಡಿ ಪ್ರೋತ್ಸಾಹಿಸಲಾಗುವುದು ಎಂದು ಹೇಳಿದರು.

ಕನ್ನಡ ಸಾಹಜಿತ್ಯ ಪರಿಷತ್ತಿನ ಸರ್ವಾಂಗೀಣ ಅಭಿವೃದ್ಧಿಗಾಗಿ ವಲಯವಾರು ಗೌರವ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡುವುದು ಮತ್ತು ಕನ್ನಡ ಸಾಹಿತ್ಯ ಪುಸ್ತಕಗಳ ಮುದ್ರಣಕ್ಕೆ ಉತ್ತೇಜನ ನೀಡಲಾಗುವುದು ಎಂದರು.

ಸಿ.ತರುಣ್‌ಕುಮಾರ್‌, ಮುಸ್ತಾಕ್‌ ಮುದಾಸಿರ್‌ ನಜರ್‌, ವಿ.ಕೆ.ಏಳಗಿ, ದುರ್ಗೇಶ ಉಪ್ಪಾರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

****

ಕನ್ನಡ ಸಾಹಿತ್ಯ ಪರಿಷತ್‌ ರಾಜಕಾರಣದ ಸಂಕೋಲೆಗೆ ಸಿಲುಕಿ ಭ್ರಷ್ಟಾಚಾರ ಹಗೂ ಸ್ವಜನ ಪಕ್ಷಪಾತದಲ್ಲಿ ಮುಳುಗಿದ್ದು, ಇದರಿಂದ ಹೊರತರಲು ಆದ್ಯತೆ ನೀಡುತ್ತೇನೆ.
–ರಾಜಶೇಖರ ಮುಲಾಲಿ,ಕಸಾಪ ಅಧ್ಯಕ್ಷ ಸ್ಥಾನದ ಆಕಾಂಕ್ಷಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.