
ಖೈನೂರ (ಸಿಂದಗಿ): ‘ಮಾನವ ಜೀವನದ ಉಜ್ವಲ ಭವಿಷ್ಯಕ್ಕೆ ಧರ್ಮಾಚರಣೆ ಮುಖ್ಯ. ಜೀವನ ಮೌಲ್ಯಗಳು ಪರಿಪಾಲಿಸಿದಾಗ ಧರ್ಮ, ಸಂಸ್ಕೃತಿ ಉಳಿಯಲು ಸಾಧ್ಯ’ ಎಂದು ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ಶ್ರೀ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಖೈನೂರ ಗ್ರಾಮದಲ್ಲಿ ಸೋಮವಾರ ಗೊಲ್ಲಾಳೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ನೂತನ ರಥದ ಉದ್ಘಾಟನೆ, ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ‘ಅಧ್ಯಾತ್ಮ ಜ್ಞಾನ ಸಂಪಾದನೆಯಿಂದ ಜೀವನದಲ್ಲಿ ಶಾಂತಿ, ನೆಮ್ಮದಿ ಪಡೆಯಬಹುದು’ ಎಂದರು.
‘ಮನುಷ್ಯ ಜೀವನದಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸಿಕೊಳ್ಳದಿದ್ದರೆ ಜೀವನ ವ್ಯರ್ಥವಾಗುತ್ತದೆ. ವ್ಯಕ್ತಿಗೆ ಬೇಕಾಗಿರುವುದು ಸಂಪತ್ತು. ಆ ಸಂಪತ್ತಿನಿಂದ ತನ್ನ ಭೌತಿಕ ಸುಖ ಸಂಪತ್ತುಗಳನ್ನು ಪಡೆಯುವುದಷ್ಟೇ ಗುರಿಯಾಗಿದೆ. ಇವುಗಳನ್ನು ಬಯಸುವ ಮನುಷ್ಯ ಮೊದಲು ಧರ್ಮವನ್ನು ಪರಿಪಾಲಿಸಿಕೊಂಡು ಬರಬೇಕಾಗುತ್ತದೆ’ ಎಂದು ತಿಳಿಸಿದರು.
‘ವೀರಶೈವ ಧರ್ಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಧರ್ಮದ ದಶವಿಧ ಸೂತ್ರಗಳನ್ನು ಬೋಧಿಸಿದ್ದಾರೆ. ಅವರು ಬೋಧಿಸಿದ ತತ್ವ ಸಿದ್ಧಾಂತಗಳು ಸಕಲರ ಹಿತ ಕಾಪಾಡುವ ಜೊತೆಗೆ ಬದುಕಿಗೆ ಬೆಳಕು ತೋರುತ್ತವೆ. ಇದೇ ದಾರಿಯಲ್ಲಿ ಶರಣರು ನಡೆದು ಜೀವನದಲ್ಲಿ ಉನ್ನತಿ ಹೊಂದಿದರು’ ಎಂದು ನುಡಿದರು.
ಗೋಲಗೇರಿಯಲ್ಲಿ ನೆಲೆನಿಂತ ಗೊಲ್ಲಾಳೇಶ್ವರ ಈ ಗ್ರಾಮದಲ್ಲಿಯೂ ನೆಲೆಗೊಂಡಿರುವುದು ತಮ್ಮೆಲ್ಲರ ಭಕ್ತಿ, ಶೃದ್ಧೆಗೆ ಕಾರಣವಾಗಿದೆ ಎಂದು ಸಂತದ ವ್ಯಕ್ತಪಡಿಸಿದರು.
ಧರ್ಮಸಭೆಗೂ ಮುನ್ನ ಶ್ರೀಗಳು ಗೊಲ್ಲಾಳೇಶ್ವರ ಲಿಂಗಕ್ಕೆ ಪೂಜೆ ಸಲ್ಲಿಸಿದರು. ಮಾಗಣಗೇರಾ ಬೃಹನ್ಮಠದ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಧರ್ಮಸಭೆ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಬೆಂಗಳೂರಿನ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷ ಪ್ರಭು ಸಾರಂಗದೇವ ಶಿವಾಚಾರ್ಯ ವಹಿಸಿದ್ದರು. ಆಲಮೇಲ, ಯಂಕಂಚಿ, ಮಾಗಣಗೇರಾ ಹಿರೇಮಠ, ಮಳ್ಳಿ, ಸಿಂದಗಿ ಆದಿಶೇಷ ಶ್ರೀಗಳು ಸಮ್ಮುಖ ವಹಿಸಿದ್ದರು. ಖೈನೂರು ಹಿರೇಮಠದ ಶಾಂತಯ್ಯಸ್ವಾಮಿ ನೇತೃತ್ವ ವಹಿಸಿದ್ದರು.
ಮಾಜಿ ಶಾಸಕ ರಮೇಶ ಭೂಸನೂರ, ಗೊಲ್ಲಾಳಪ್ಪಗೌಡ ಪಾಟೀಲ, ಶಿವಶರಣಪ್ಪ ಸೀರಿ, ಚಂದ್ರಶೇಖರ ಪುರಾಣಿಕ, ಜೇರಟಗಿ ಸಿದ್ದೇಶ್ವರ ಶಾಸ್ತ್ರೀ, ನಾಗರತ್ನಾ ಮನಗೂಳಿ ಪಾಲ್ಗೊಂಡಿದ್ದರು. ಪೂಜಾ ಹಿರೇಮಠ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಸಂಭ್ರಮದ ಅಡ್ಡಪಲ್ಲಕ್ಕಿ ಉತ್ಸವ: ಧರ್ಮಸಭೆಗೂ ಮುನ್ನ ಗ್ರಾಮದ ಹೊರಭಾಗದಿಂದ ದೇವಸ್ಥಾನದವರೆಗೂ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಸಂಭ್ರಮದಿಂದ ಜರುಗಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದರ್ಶನಾಶೀರ್ವಾದ ಪಡೆದರು.
ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಾಧಿಸಿ ಧರ್ಮದ ದಶವಿಧ ಸೂತ್ರ ಬೋಧಿಸಿದ ರೇಣುಕಾಚಾರ್ಯರು ಅಧ್ಯಾತ್ಮ ಜ್ಞಾನ ಸಂಪಾದನೆಯಿಂದ ನೆಮ್ಮದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.