ADVERTISEMENT

ಬೈಕಿನಲ್ಲೇ ಭಾರತ ಸುತ್ತಿದ ಹಾವೇರಿಯ ‘ಸಾಹಸಿ’ ಕೋಮಲಾ

ಬಸವರಾಜ ಸಂಪಳ್ಳಿ
Published 26 ಮಾರ್ಚ್ 2022, 15:02 IST
Last Updated 26 ಮಾರ್ಚ್ 2022, 15:02 IST
ಕೋಮಲ ಪಾಟೀಲ
ಕೋಮಲ ಪಾಟೀಲ   

ವಿಜಯಪುರ: ಧರ್ಮ, ಜಾತಿ ಜನರ ನಡುವೆ ಭಿನ್ನಭಾವ ಮೂಡಿಸುತ್ತಿರುವ ಈ ಹೊತ್ತಿನಲ್ಲಿ ‘ಒಂದೇ ದೇಶ, ಒಂದೇ ಜನ, ನಾವೆಲ್ಲ ಒಂದೇ’ ಎಂಬ ಭಾವೈಕ್ಯ ಸಾರುವ, ಜಾಗೃತಿ ಮೂಡಿಸುವ ಸದುದ್ದೇಶದೊಂದಿಗೆ ಹಾವೇರಿ ಜಿಲ್ಲೆ ರಾಣಿಬೆನ್ನೂರಿನ ಕುವರಿ ಕೋಮಲ ಪಾಟೀಲ (19) ಕೈಗೊಂಡಿರುವ ಭಾರತ ಪರ್ಯಟನೆ ಶನಿವಾರ ‘ಗುಮ್ಮಟನಗರಿ’ ವಿಜಯಪುರ ತಲುಪಿತು.

ವಿಶ್ವ ಮಹಿಳಾ ದಿನದಂದು (ಮಾರ್ಚ್‌ 8) ಕೆಟಿಎಂ ಬೈಕಿನ ಬೆನ್ನೇರಿ ಏಕಾಂಗಿಯಾಗಿ ಪರ್ಯಟನೆ ಆರಂಭಿಸಿದ ಕೋಮಲ ಅವರುಈಗಾಗಲೇ ಹುಬ್ಬಳ್ಳಿ, ಪುಣೆ, ಮುಂಬೈ, ವಡೋದರ, ಉದಯಪುರ, ಜೈಪುರ, ಅಮೃತಸರ, ವಾಘಾ ಬಾರ್ಡರ್‌, ಶ್ರೀನಗರ, ಲೂದಿಯಾನ, ಹರಿಯಾಣ, ದೆಹಲಿ, ಆಗ್ರಾ, ಇಂದೋರ್‌, ಔರಂಗಬಾದ್‌, ಸೋಲಾಪುರ ಮಾರ್ಗವಾಗಿ ವಿಜಯಪುರಕ್ಕೆ ತಲುಪಿದ್ದಾರೆ. ಇನ್ನೆರಡು ದಿನಗಳಲ್ಲಿ(ಮಾರ್ಚ್‌ 28) ಈ ಜಾಗೃತಿ ಜಾಥಾವು ಬಾಗಲಕೋಟೆ, ಗದಗ ಮಾರ್ಗವಾಗಿ ರಾಣೆಬೆನ್ನೂರು ತಲುಪಲಿದೆ.

ಅಂದಾಜು 6,500 ಕಿ.ಮೀ.ದೂರವನ್ನು ಕೋಮಲ ಒಬ್ಬಂಟಿಯಾಗಿ ಕ್ರಮಿಸಿರುವುದು ಹೆಮ್ಮೆಯ ಸಂಗತಿ. ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ತಂದೆ ಪ್ರಭುಗೌಡ ಪಾಟೀಲ, ತಾಯಿ ರಾಜೇಶ್ವರಿ ಅವರ ಪ್ರೋತ್ಸಾಹದೊಂದಿಗೆ ಹಾಗೂ ಅಚಲ ವಿಶ್ವಾಸದೊಂದಿಗೆ ಕೆಟಿಎಂ ಬೈಕ್‌ ಮೂಲಕ ಭಾರತ ಯಾತ್ರೆ ಆರಂಭಿಸಿದ್ದೆ. ಯಾತ್ರೆಯಲ್ಲಿ ಯಾವುದೇ ಅಡಚಣೆ, ಸಂಕಷ್ಟವಿಲ್ಲದೇ ಪೂರ್ಣಗೊಳಿಸುತ್ತಿರುವುದು ಖುಷಿಯ ಸಂಗತಿಯಾಗಿದೆ’ ಎಂದರು.

ADVERTISEMENT

‘ಭಾರತದ ವೈವಿಧ್ಯತೆ ಅರಿಯಲು ಈ ಯಾತ್ರೆಯಿಂದ ಸಹಾಯವಾಯಿತು.ಈ ಯಾತ್ರೆಯಿಂದ ನನ್ನ ಅಂತರ್ಯವನ್ನು ನಾನು ಅರಿಯಲು ನೆರವಾಯಿತು’ ಎಂದರು.

’ಯಾರ ಸಹಾಯ, ಸಹಕಾರವಿಲ್ಲದೇ ಒಬ್ಬಳೇ ಪ್ರತಿ ದಿನ 500 ಕಿ.ಮೀ.ನಿಂದ 700 ಕಿ.ಮೀ. ವರೆಗೂ ಬೈಕಿನಲ್ಲಿ ಕ್ರಮಿಸಿರುವೆ’ ಎಂದು ಹೇಳಿದರು.

ಇತ್ತೀಚಿನ ವರ್ಷಗಳಲ್ಲಿಮಾನಸಿಕ ಖಿನ್ನತೆ ಹೆಚ್ಚಾಗಿದೆ. ಇದರಿಂದ ಪ್ರತಿದಿನ ಸಾವಿರಾರು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅನೇಕ ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುತ್ತಿವೆ. ಈ ಬಗ್ಗೆ ಜಾಗೃತಿ ಮೂಡಿಸುವುದು ಸಹ ನನ್ನ ಯಾತ್ರೆಯ ಉದ್ದೇಶವಾಗಿತ್ತು ಎನ್ನುತ್ತಾರೆ ಕೋಮಲ.

ಅಲ್ಲದೇ, ರಸ್ತೆ ಅಪಘಾತದಲ್ಲೂ ಪ್ರತಿ ವರ್ಷ ಲಕ್ಷಾಂತರ ಜನರು ಸಾವಿಗೀಡಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷತೆ ಕುರಿತು ಜನಜಾಗೃತಿ ಮೂಡಿಸುವುದು ಸಹ ನನ್ನ ಬೈಕ್‌ ಯಾತ್ರೆಯ ಉದ್ದೇಶವಾಗಿತ್ತು ಎನ್ನುತ್ತಾರೆ ಅವರು.

ಯಾತ್ರೆಯ ವೇಳೆ ನಾನೊಬ್ಬಳೇ, ಹುಡುಗಿ ಎಂಬ ಭಾವನೆ, ಅಳಕು ಎಲ್ಲಿಯೂ ನನ್ನ ಮನಸ್ಸಿಗೆ ಕಾಡಲಿಲ್ಲ. ಧೈರ್ಯವಾಗಿ ಸುತ್ತಿದೆ. ಇದರಿಂದ ಸ್ಪೂರ್ತಿ ಸಿಕ್ಕಿದ್ದು, ಮುಂದೆ ಮತ್ತೊಂದು ಯಾತ್ರೆ ಕೈಗೊಳ್ಳುವೆ ಎನ್ನುತ್ತಾರೆ ಕೋಮಲ.

ಸಾಹಸಿ ಕೋಮಲ ಅವರು ಸದ್ಯ ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬಿಇ ಮೆಕ್ಯಾನಿಕಲ್‌ ಓದುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.