ADVERTISEMENT

ತಳವಾರ ಸಮುದಾಯಕ್ಕೆ ಎಸ್.ಟಿ ಮೀಸಲಾತಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

ತಳವಾರ ಸಮುದಾಯ ಸಮಾವೇಶದಲ್ಲಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 19:15 IST
Last Updated 26 ಅಕ್ಟೋಬರ್ 2021, 19:15 IST
ಸಿಂದಗಿಯಲ್ಲಿ ಮಂಗಳವಾರ ಬಿಜೆಪಿ ಹಮ್ಮಿಕೊಂಡಿದ್ದ ತಳವಾರ ಸಮುದಾಯದ ಸಮಾವೇಶದಲ್ಲಿ ಸಮಾಜಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ತಳವಾರ ಸಮುದಾಯದ ಮುಖಂಡ, ಮಾಜಿ ಸಚಿವ ಬಾಬೂರಾವ್ ಚಿಂಚನಸೂರ, ಸಚಿವ ಗೋವಿಂದ ಕಾರಜೋಳ ಉದ್ಘಾಟಿಸಿದರು. ಶಿವಾಜಿ ಮೆಟಗಾರ, ಅಪ್ಪು ಪಟ್ಟಣಶೆಟ್ಟಿ, ರಮೇಶ ಭೂಸನೂರ, ಶರಣಪ್ಪ ಕಣ್ಮೆಶ್ವರ, ರಮೇಶ ಜಿಗಜಿಣಗಿ, ಭೀಮರಾವ್ ಸುಣಗಾರ, ಸಿ.ಸಿ.ಪಾಟೀಲ, ಡಾ.ಗೌತಮ ಚೌಧರಿ ಇದ್ದಾರೆ –ಪ್ರಜಾವಾಣಿ ಚಿತ್ರ
ಸಿಂದಗಿಯಲ್ಲಿ ಮಂಗಳವಾರ ಬಿಜೆಪಿ ಹಮ್ಮಿಕೊಂಡಿದ್ದ ತಳವಾರ ಸಮುದಾಯದ ಸಮಾವೇಶದಲ್ಲಿ ಸಮಾಜಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ತಳವಾರ ಸಮುದಾಯದ ಮುಖಂಡ, ಮಾಜಿ ಸಚಿವ ಬಾಬೂರಾವ್ ಚಿಂಚನಸೂರ, ಸಚಿವ ಗೋವಿಂದ ಕಾರಜೋಳ ಉದ್ಘಾಟಿಸಿದರು. ಶಿವಾಜಿ ಮೆಟಗಾರ, ಅಪ್ಪು ಪಟ್ಟಣಶೆಟ್ಟಿ, ರಮೇಶ ಭೂಸನೂರ, ಶರಣಪ್ಪ ಕಣ್ಮೆಶ್ವರ, ರಮೇಶ ಜಿಗಜಿಣಗಿ, ಭೀಮರಾವ್ ಸುಣಗಾರ, ಸಿ.ಸಿ.ಪಾಟೀಲ, ಡಾ.ಗೌತಮ ಚೌಧರಿ ಇದ್ದಾರೆ –ಪ್ರಜಾವಾಣಿ ಚಿತ್ರ   

ಸಿಂದಗಿ: ‘ತಳವಾರ ಸಮುದಾಯ ಬಹಳ ವರ್ಷಗಳಿಂದ ಎಸ್.ಟಿ ಮೀಸಲಾತಿ ಬೇಡಿಕೆ ಈಡೇರಿಕೆಗಾಗಿ ಹೋರಾಟ ಮಾಡುತ್ತಲೇ ಬಂದಿದ್ದು ಈಗಾಗಲೇ ಮೀಸಲಾತಿ ನೀಡಲು ಸರ್ಕಾರದಲ್ಲಿ ತೀರ್ಮಾನ ಆಗಿದೆ’ ಎಂದು ಸಮಾಜಕಲ್ಯಾಣ ಇಲಾಖೆಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಇಲ್ಲಿಯ ಮಾಂಗಲ್ಯ ಭವನದಲ್ಲಿ ಮಂಗಳವಾರ ಬಿಜೆಪಿ ಹಮ್ಮಿಕೊಂಡಿದ್ದ ತಳವಾರ ಸಮುದಾಯದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಚುನಾವಣೆ ಮುಗಿದ ನಂತರ ಎಸ್.ಟಿ ಮೀಸಲಾತಿ ಆದೇಶ ಹೊರಡಿಸಲಾಗುವುದು’ ಎಂದು ಪೂಜಾರಿ ಹೇಳಿದರು.

ADVERTISEMENT

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ‘ಮೀಸಲಾತಿ ನೀಡಲು ಮುಖ್ಯಮಂತ್ರಿ ಸಿದ್ಧರಿದ್ದಾರೆ’ ಎಂದರು. ಉಪಚುನಾವಣಾ ಉಸ್ತುವಾರಿ ಲಕ್ಷ್ಮಣ ಸವದಿ ಮಾತನಾಡಿ, ‘ಪ್ರಸ್ತುತ ಉಪಚುನಾವಣೆಯಲ್ಲಿ ತಳವಾರ ಸಮುದಾಯ ನಿರ್ಣಾಯಕ ಪಾತ್ರ ವಹಿಸಲಿದೆ’ ಎಂದರು.

‘ಚುನಾವಣೆ ಮುಗಿದ ನಂತರ ಈ ಮೀಸಲಾತಿ ಆದೇಶ ಹೊರಡಿಸಲು ವಿಳಂಬವಾದರೆ ನಾನೇ ಸದನದಲ್ಲಿ ಧರಣಿ ಮಾಡುವೆ’ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ತಳವಾರ ಸಮುದಾಯದ ಮುಖಂಡ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಮಾತನಾಡಿ,‘ನನ್ನ ಕೊನೆಯ ಆಸೆ ನಮ್ಮ ಸಮುದಾಯದ ಜನರಿಗೆ ಎಸ್.ಟಿ ಮೀಸಲಾತಿ ದೊರಕಿಸಿಕೊಡುವುದು. ಮೋದಿ ದೇಶದ ಚೌಕಿದಾರನಾದರೆ ನಾನುತಳವಾರ ಸಮುದಾಯದ ಚೌಕಿದಾರ’ ಎಂದರು.

‘ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ಧರಾಮಯ್ಯ, ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಂತೃಪ್ತಿ ಗೊಳಿಸಲು ನನಗೆ ಸಿಗಬೇಕಿದ್ದ ಸಚಿವ ಸ್ಥಾನವನ್ನು ತಪ್ಪಿಸಿ ಖರ್ಗೆ ಪುತ್ರ ಪ್ರಿಯಾಂಕ್ ಅವರಿಗೆ ನೀಡಿದರು. ಕಾಂಗ್ರೆಸ್ ಹೀನಾಯ ಸ್ಥಿತಿಯಲ್ಲಿದೆ. ಡಿ.ಕೆ.ಶಿವಕುಮಾರ-ಸಿದ್ಧರಾಮಯ್ಯ ಇಬ್ಬರೂ ಹಾವು-ಮುಂಗುಸಿ;ಎಂದೂ ಒಂದಾಗಲ್ಲ. ಜೆಡಿಎಸ್ ಪಕ್ಷ ಕಣ್ಣೀರು ಸುರಿಸುವ ಪಕ್ಷ. ಅಪ್ಪ-ಮಕ್ಕಳ ಪಕ್ಷ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.