ADVERTISEMENT

ಕೃಷ್ಣಾ, ಭೀಮಾ ಪ್ರವಾಹ ಮುಂಜಾಗ್ರತೆಗೆ ಸೂಚನೆ: ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2020, 16:54 IST
Last Updated 22 ಜುಲೈ 2020, 16:54 IST
ಆಲಮಟ್ಟಿಯಲ್ಲಿ ಬುಧವಾರ ವಿವಿಧ ಜಿಲ್ಲೆಯ ಕಂದಾಯ ಅಧಿಕಾರಿಗಳು ಹಾಗೂ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳೊಂದಿಗೆ ಪ್ರವಾಹ ನಿಯಂತ್ರಣ ಮುನ್ನೆಚ್ಚರಿಕೆ ಕ್ರಮಗಳ ಕುರಿತ ನಡೆದ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಮಾತನಾಡಿದರು
ಆಲಮಟ್ಟಿಯಲ್ಲಿ ಬುಧವಾರ ವಿವಿಧ ಜಿಲ್ಲೆಯ ಕಂದಾಯ ಅಧಿಕಾರಿಗಳು ಹಾಗೂ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳೊಂದಿಗೆ ಪ್ರವಾಹ ನಿಯಂತ್ರಣ ಮುನ್ನೆಚ್ಚರಿಕೆ ಕ್ರಮಗಳ ಕುರಿತ ನಡೆದ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಮಾತನಾಡಿದರು   

ವಿಜಯಪುರ: ಕೃಷ್ಣಾ ಮತ್ತು ಭೀಮಾ ನದಿಯ ತೀರದ ಪ್ರದೇಶಗಳಲ್ಲಿ ಪ್ರವಾಹ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸುವಂತೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಆಲಮಟ್ಟಿ ಕೆ.ಬಿ.ಜೆ.ಎನ್.ಎಲ್ ವ್ಯವಸ್ಥಾಪಕ ನಿರ್ದೇಶಕರ ಆಡಳಿತ ಕಚೇರಿ ಸಭಾಂಗಣದಲ್ಲಿ ಬುಧವಾರ ವಿವಿಧ ಜಿಲ್ಲೆಯ ಕಂದಾಯ ಅಧಿಕಾರಿಗಳು ಹಾಗೂ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳೊಂದಿಗೆ ಪ್ರವಾಹ ನಿಯಂತ್ರಣ ಮುನ್ನೆಚ್ಚರಿಕೆ ಕ್ರಮಗಳ ಕುರಿತ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ನದಿ ತೀರಗಳಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕಾಗಿ ಒಂದು ಸಮಿತಿ ರಚಿಸಬೇಕು ಹಾಗೂ ಮಹಾರಾಷ್ಟ್ರ ಜಲಾಶಯಗಳಿಂದ ಬಿಡುಗಡೆಯಾಗುವ ನೀರಿನ ಪ್ರಮಾಣ ಹೆಚ್ಚಾದಲ್ಲಿ ಮುಂಚಿತವಾಗಿ ಆಲಮಟ್ಟಿ ಜಲಾಶಯಕ್ಕೆ ತಿಳಿಸಬೇಕು. ಇದರಿಂದ ಆಲಮಟ್ಟಿ ಜಲಾಶಯದ ಹಿನ್ನೀರು ಪ್ರದೇಶದಲ್ಲಾಗುವ ಹಾನಿ ಹಾಗೂ ಮುಂದಿನ ಪ್ರದೇಶಗಳಲ್ಲಾಗುವ ಹಾನಿಯನ್ನು ನಿಯಂತ್ರಿಸಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಸಮನ್ವಯ ಸಾಧಿಸಿ ಪರಸ್ಪರ ಸಹಕಾರದಿಂದ ಕಾರ್ಯ ನಿರ್ವಹಿಸಬೇಕು ಎಂದರು.

ADVERTISEMENT

ಮಹಾರಾಷ್ಟ್ರದಿಂದ ಆಲಮಟ್ಟಿ ಜಲಾಶಯಕ್ಕೆ ಒಬ್ಬ ಎಂಜಿನಿಯರನ್ನು ನಿಯೋಜಿಸಿದ್ದು, ಆಲಮಟ್ಟಿ ಜಲಾಶಯದ ನೀರಿನ ಪ್ರಮಾಣ ಹಾಗೂ ಪ್ರತಿ ದಿನದ ವರದಿಯನ್ನು ತಿಳಿದುಕೊಳ್ಳುತ್ತಾರೆ. ಅದೇ ರೀತಿಯಲ್ಲಿ ಆಲಮಟ್ಟಿ ಜಲಾಶಯದಿಂದ ಮಹಾರಾಷ್ಟ್ರದ ಕೊಯ್ನಾ ಜಲಾಶಯಕ್ಕೆ ಒಬ್ಬರನ್ನು ನಿಯೋಜಿಸಿ ಆ ಜಲಾಶಯದ ನೀರಿನ ಪ್ರಮಾಣ ಹಾಗೂ ಪ್ರತಿದಿನದ ವರದಿಯನ್ನು ನೀಡಲಿದ್ದಾರೆ ಎಂದು ಹೇಳಿದರು.

ಈಗಾಗಲೆ ಕೊಲ್ಲಾಪುರ, ಸಾಂಗಲಿ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಭೆ ನಡೆಸಿ, ಹಲವು ವಿಷಯಗಳ ಕುರಿತು ಚರ್ಚಿಸಲಾಗಿದ್ದು, ಮುಂಬರುವ ಕೆಲವು ದಿನಗಳಲ್ಲಿ ಕೊಲ್ಲಾಪುರ, ಸಾಂಗಲಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಬೆಳಗಾವಿ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮತ್ತೊಂದು ಸಭೆ ನಡೆಸಿ, ಪ್ರವಾಹ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಸೂಚಿಸಲಾಗುವುದು ಎಂದರು.

ಪ್ರವಾಹದ ಮುಂಜಾಗೃತಾ ಕ್ರಮವಾಗಿ ಕಂದಾಯ ಹಾಗೂ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳು 24X7 ಕಾರ್ಯ ನಿರ್ವಹಿಸಲು ಸಿದ್ದರಾಗಿ ಪ್ರವಾಹದ ಮುನ್ನೆಚ್ಚರಿಕಾ ಕ್ರಮಗಳನ್ನು ಯಶಸ್ವಿಯಾಗಿ ಕೈಗೊಳ್ಳಬೇಕು ಎಂದು ಸೂಚಿಸಿದರು.

ಪ್ರವಾಹದ ಮುನ್ನೆಚ್ಚರಿಕೆಯಾಗಿ ನದಿ ತೀರದ ಪ್ರದೇಶದ ಜನರನ್ನು ಸ್ಥಳಾಂತರ ಮಾಡಲು ಸೂಕ್ತ ಸ್ಥಳಗಳನ್ನು, ಸರ್ಕಾರಿ ಸ್ಥಳಗಳನ್ನು ಗುರುತಿಸಿಕೊಳ್ಳಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿ, ಮುದ್ದೆಬಿಹಾಳ ತಾಲ್ಲೂಕಿನಲ್ಲಿಕಳೆದ ಸಾಲಿನಲ್ಲಿ ಅನೇಕ ಹಳ್ಳಿಗಳು ಜಲಾವೃತಗೊಂಡು ರೈತರ ಕೃಷಿ ಭೂಮಿಗೆ ಅಪಾರ ನಷ್ಟ ಉಂಟಾಗಿದೆ. ಈ ಬಾರಿ ಅಂತಹ ಯಾವುದೇ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಶಾಸಕ ಮಹೇಶ ಕುಮಟಳ್ಳಿ, ಬಾಗಲಕೋಟೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಬಾಯಕ್ಕ ಮೇಟಿ, ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಬೆಳಗಾವಿ, ರಾಯಚೂರು, ವಿಜಯಪುರ ಜಿಲ್ಲೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಕ್ರಮ

ವಿಜಯಪುರ: ಕೃಷ್ಣಾ ಮತ್ತು ಭೀಮಾ ನದಿ ತೀರದ ಜಿಲ್ಲೆಗಳಿಗೆ ಬೇಸಿಗೆಯಲ್ಲಿ 4 ಟಿಎಂಸಿ ಅಡಿ ಕುಡಿಯುವ ನೀರನ್ನು ರಾಜಾಪುರ ಜಲಾಶಯದಿಂದ ರಾಜ್ಯಕ್ಕೆ ಪೂರೈಕೆ ಮಾಡುವಂತೆ ಮಹಾರಾಷ್ಟ್ರ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.

ಆಲಮಟ್ಟಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅದೇ ರೀತಿ ಮಹಾರಾಷ್ಟ್ರದ ಜತ್‌ ವ್ಯಾಪ್ತಿಯ ಪ್ರದೇಶಗಳಿಗೆ ಬೇಸಿಗೆಯಲ್ಲಿ ಅಗತ್ಯವಿರುವ 2ರಿಂದ 3 ಟಿಎಂಸಿ ಅಡಿ ನೀರನ್ನು ಕುಡಚಿ–ಬಬಲೇಶ್ವರದಿಂದ ಪೂರೈಕೆ ಮಾಡುವಂತೆ ಮಹಾರಾಷ್ಟ್ರ ಬೇಡಿಕೆ ಇಟ್ಟಿದೆ. ಈ ಬಗ್ಗೆ ಚರ್ಚೆ ನಡೆದಿದ್ದು, ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದರು.

ಗೆಜೆಟ್ ಅಧಿಸೂಚನೆಗೆ ಒತ್ತಡ

ವಿಜಯಪುರ: ನ್ಯಾಯಮೂರ್ತಿ ಬ್ರಿಜೇಜ್ ಕುಮಾರ ನೇತೃತ್ವದ ಕೃಷ್ಣಾ ನ್ಯಾಯಾಧೀಕರಣದ ತೀರ್ಪಿನ ಅಧಿಸೂಚನೆಯನ್ನು ಶೀಘ್ರ ಹೊರಡಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವುದಾಗಿ ಜಾರಕಿಹೊಳಿ ಹೇಳಿದರು.

ಗೆಜೆಟ್ ನೋಟಿಫಿಕೇಷನ್‌ಗೆ ಕೃಷ್ಣಾ ನದಿನೀರು ಹಂಚಿಕೆ ಕುರಿತು ಅನೇಕ ಪ್ರಕರಣಗಳು ಸುಪ್ರಿಂಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಇರುವುದರಿಂದ ಸಾಧ್ಯವಾಗುತ್ತಿಲ್ಲ. ಕೋವಿಡ್‌ ಸಂಬಂಧ ಕೋರ್ಟ್‌ ಕಲಾಪ ನಡೆಸುತ್ತಿಲ್ಲ. ಶೀಘ್ರವೇ ಕೇಂದ್ರ ಸರ್ಕಾರ ನೋಟಿಫಿಕೇಷನ್ ಹೊರಡಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.