ಆಲಮಟ್ಟಿ ಜಲಾಶಯದ ಬಲಭಾಗದ ವಿದ್ಯುತ್ ಉತ್ಪಾದನಾ ಕೇಂದ್ರದ (ಕೆಪಿಸಿಎಲ್) ಮೂಲಕ ಹರಿಯುತ್ತಿರುವ ಕೃಷ್ಣಾ ನದಿ ನೀರು
– ಪ್ರಜಾವಾಣಿ ಚಿತ್ರ: ಚಂದ್ರಶೇಖರ ಕೋಳೆಕರ
ವಿಜಯಪುರ: ತೆಲಂಗಾಣ ರಾಜ್ಯದ ಮನವಿ ಮೇರೆಗೆ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯದಿಂದ ಬಿರುಬೇಸಿಗೆಯನ್ನೂ ಲೆಕ್ಕಿಸದೇ 1.24 ಟಿಎಂಸಿ ಅಡಿ ನೀರನ್ನು ರಾಜ್ಯದಿಂದ ಹರಿಸಲಾಗಿದೆ.
ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯದಿಂದ ಗೂಗಲ್ ಬ್ಯಾರೇಜ್‌ಗೆ ನೀರು ಹರಿಸಿ, ಅಲ್ಲಿಂದ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಜುರಾಲಾ ಅಣೆಕಟ್ಟಿಗೆ ನೀರು ಹರಿಸಲಾಗಿದೆ. ರಾತ್ರಿ ವೇಳೆ ಕಾರ್ಯಾಚರಣೆ ನಡೆದಿದೆ.
‘ಕುಡಿಯುವ ಉದ್ದೇಶಕ್ಕಾಗಿ ನಾರಾಯಣಪುರ ಜಲಾಶಯದ ಮುಂಭಾಗಕ್ಕೆ ನೀರು ಬಿಟ್ಟಿದ್ದೇವೆ’ ಎಂದು ನಾರಾಯಣಪುರ ಜಲಾಶಯದ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ. ಫೆ.20ರಿಂದ 23ರ ಅವಧಿಯಲ್ಲಿ ತೆಲಂಗಾಣಕ್ಕೆ 1.24 ಟಿಎಂಸಿ ಅಡಿ ನೀರಿ ನೀರು ಬಿಡಲಾಗಿದೆ. ಆದರೆ, ನೀರು ಬಿಟ್ಟಿರುವ ಬಗ್ಗೆ ಎಲ್ಲಿಯೂ ಅಧಿಕಾರಿಗಳು ದಾಖಲಿಸಿಲ್ಲ.
ಅಧಿಕಾರಿಗಳ ಸಮ್ಮತಿ ಇರಲಿಲ್ಲ: ‘ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದ ಅಧಿಕಾರಿಗಳಿಗೆ ಇತ್ತೀಚೆಗೆ ಪತ್ರ ಬರೆದು, ಜಲಾಶಯಗಳಲ್ಲಿನ ನೀರಿನ ಸ್ಥಿತಿ ಹಾಗೂ ತೆಲಂಗಾಣಕ್ಕೆ ನೀರು ಬಿಡುವುದರ ಬಗ್ಗೆ ಸ್ಪಷ್ಟ ಅಭಿಪ್ರಾಯ ತಿಳಿಸಲು ಸೂಚಿಸಿದ್ದರು. ತೆಲಂಗಾಣಕ್ಕೆ ನೀರು ಬಿಟ್ಟರೆ ಬೇಸಿಗೆಯಲ್ಲಿ ತೊಂದರೆ ಆಗುತ್ತದೆ. ನೀರು ಬಿಡಬಾರದು ಎಂದು ತಿಳಿಸಿದ್ದರು. ಆದರೂ, ಜಲಸಂಪನ್ಮೂಲ ಸಚಿವರ ವಿಶೇಷ ಆಸಕ್ತಿಯ ಮೇರೆಗೆ ನೀರು ಹರಿಸಲಾಗಿದೆ’ ಎಂದು ರೈತರು ಆರೋಪಿಸಿದ್ದಾರೆ.
6.5 ಟಿಎಂಸಿ ಅಡಿ ನೀರು: ‘ತೆಲಂಗಾಣಕ್ಕೆ ನೀರು ಹರಿಸಲೆಂದೇ ಆಲಮಟ್ಟಿಯಿಂದ ಫೆಬ್ರುವರಿ 19 ರಿಂದ ಫೆಬ್ರುವರಿ 26 ರವರೆಗೆ ಆಲಮಟ್ಟಿ ಜಲಾಶಯದ ಬಲಭಾಗದ ವಿದ್ಯುತ್ ಉತ್ಪಾದನಾ ಕೇಂದ್ರ (ಕೆಪಿಸಿಎಲ್) ಮೂಲಕ 75,950 ಕ್ಯುಸೆಕ್ (6.56 ಟಿಎಂಸಿ ಅಡಿ) ನೀರನ್ನು ಹರಿಸಲಾಗಿದೆ’ ಎಂದು ಭಾರತೀಯ ಕಿಸಾನ್ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಹುಣಸಗಿಯ ರಾಘವೇಂದ್ರ ಕಾಮನಟಗಿ ದೂರಿದ್ದಾರೆ.
ಸದ್ಯ ಆಲಮಟ್ಟಿ ಜಲಾಶಯದಲ್ಲಿ 51.552 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಅದರಲ್ಲಿ 33.932 ಟಿಎಂಸಿ ಅಡಿ ನೀರು ಬಳಕೆಗೆ ಯೋಗ್ಯವಿದೆ. ಜಲಾಶಯದಿಂದ ಕೆಪಿಸಿಎಲ್‌ಗೆ 9,800 ಕ್ಯುಸೆಕ್, ನೀರಾವರಿಗಾಗಿ 1382 ಕ್ಯುಸೆಕ್ ಸೇರಿ 12,187 ಕ್ಯುಸೆಕ್ ನೀರು ಜಲಾಶಯದಿಂದ ಹೊರಹೋಗುತ್ತಿದೆ.
ತೆಲಂಗಾಣ ಸರ್ಕಾರದ ಮನವಿಗೆ ರಾಜ್ಯ ಸರ್ಕಾರ ಸ್ಪಂದಿಸಿ ನೀರು ಬಿಟ್ಟಿದೆ. ಎರಡೂ ಕಡೆ ಕಾಂಗ್ರೆಸ್ ಪಕ್ಷದ ಸರ್ಕಾರವಿದ್ದು ಅದಕ್ಕಾಗಿ ಅಲ್ಲಿಯ ರೈತರ ಅನುಕೂಲಕ್ಕಾಗಿ ನೀರು ಬಿಡಲಾಗಿದೆ.–ರಾಘವೇಂದ್ರ ಕಾಮನಟಗಿ, ಕಾರ್ಯದರ್ಶಿ ಭಾರತೀಯ ಕಿಸಾನ್ ಸಂಘ
ತೆಲಂಗಾಣಕ್ಕೆ ನೀರು ಬಿಟ್ಟಿರುವುದನ್ನು ಖಂಡಿಸಿ ಫೆ.28 ರಂದು ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಲಾಗುವುದು.–ಅರವಿಂದ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಅಖಂಡ ಕರ್ನಾಟಕ ರೈತ ಸಂಘ
ನಮ್ಮ ಜಲಾಶಯಗಳಲ್ಲಿ ಹೆಚ್ಚುವರಿ ನೀರಿದ್ದಾಗ ಕುಡಿಯಲು ಬೇರೆ ರಾಜ್ಯಗಳಿಗೆ ನೀರು ಕೊಡುವುದರಲ್ಲಿ ತಪ್ಪಿಲ್ಲ. ಈ ಹಿಂದೆ ಮಹಾರಾಷ್ಟ್ರದಿಂದ ಕುಡಿಯಲು ಕೃಷ್ಣಾ ಭೀಮಾ ನದಿಗೆ ನೀರು ಬಿಡಿಸಿಕೊಂಡಿದ್ದೇವೆ.–ಶಿವಾನಂದ ಪಾಟೀಲ, ಸಚಿವ
ಆಲಮಟ್ಟಿ ಜಲಾಶಯದ ಬಲಭಾಗದ ವಿದ್ಯುತ್ ಉತ್ಪಾದನೆಯ ಮೂಲಕ ನೀರಾವರಿಗಾಗಿ ನಾರಾಯಣಪುರ ಜಲಾಶಯಕ್ಕೆ 9800 ಕ್ಯುಸೆಕ್ ನೀರು ಬಿಡಲಾಗುತ್ತಿದೆ.–ಡಿ.ಬಸವರಾಜ, ಮುಖ್ಯ ಎಂಜಿನಿಯರ್ ಆಣೆಕಟ್ಟು ವಲಯ ಆಲಮಟ್ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.