ADVERTISEMENT

ವಿಜಯಪುರ: 1574 ಸಿಬ್ಬಂದಿ ಕರ್ತವ್ಯಕ್ಕೆ ಹಾಜರು, ವೇತನ ಪಾವತಿ

ಏಳು ದಿನ ಪೂರೈಸಿದ ಸಾರಿಗೆ ನೌಕರರ ಮುಷ್ಕರ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2021, 15:26 IST
Last Updated 14 ಏಪ್ರಿಲ್ 2021, 15:26 IST
ನಾರಾಯಣಪ್ಪ ಕುರುಬರ
ನಾರಾಯಣಪ್ಪ ಕುರುಬರ   

ವಿಜಯಪುರ: ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಬುಧವಾರಕ್ಕೆ ಏಳು ದಿನ ಪೂರೈಸಿದ್ದು, ಪ್ರಯಾಣಿಕರ ಸಂಚಾರಕ್ಕೆ ಅಡಚಣೆಯಾಗಿದೆ.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗ ವ್ಯಾಪ್ತಿಯಲ್ಲಿ ಮುಷ್ಕರ ಕೈಬಿಟ್ಟು ಇದುವರೆಗೆ 1574 ಜನ ಕರ್ತವ್ಯಕ್ಕೆ ಹಾಜರಾಗಿರುವುದಾಗಿ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ‘ಪ್ರಜಾವಾಣಿ’ಗೆ ತಿಳಿಸಿದರು.

ಮುಷ್ಕರದ ಸಂದರ್ಭದಲ್ಲಿ ಕರ್ತವ್ಯಕ್ಕೆ ಹಾಜರಾದವರಿಗೆ ನಿಗಮದ ನಿರ್ದೇಶನದಂತೆ ಮಾರ್ಚ್‌ ತಿಂಗಳ ವೇತನವನ್ನು ಬಿಡುಗಡೆ ಮಾಡಲಾಗಿದೆ. ಕೆಲಸಕ್ಕೆ ಬಾರದವರಿಗೆ ವೇತನ ನೀಡಿಲ್ಲ ಎಂದು ಅವರು ಹೇಳಿದರು.

ADVERTISEMENT

ಸದ್ಯ 156 ಬಸ್‌ಗಳು ವಿವಿಧ ತಾಲ್ಲೂಕುಗಳು ಸೇರಿದಂತೆ ಜಿಲ್ಲೆಯೊಳಗೆ ಸಂಚಾರಿಸುತ್ತಿವೆ. ಮುಷ್ಕರದ ನಡುವೆಯೂ ವಿಭಾಗಕ್ಕೆ ₹84 ಲಕ್ಷ ಆದಾಯ ಬಂದಿದೆ. ₹ 4.02 ಕೋಟಿ ನಷ್ಟವಾಗಿದೆ ಎಂದು ತಿಳಿಸಿದರು.

ಶ್ರೀಶೈಲದಿಂದ ಜಿಲ್ಲೆಗೆ ಭಕ್ತರು ಬರಲು ಅಗತ್ಯ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಹೀಗಾಗಿ ಯಾರೊಬ್ಬರಿಗೂ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ ಎಂದರು.

ನಮ್ಮ ವಿಭಾಗದ ಚಾಲಕ, ರ್ವಾಹಕರ ಸಹಕಾರದಿಂದ ಬೆಳಗಾವಿ ಉಪ ಚುನಾವಣಾ ಕಾರ್ಯಕ್ಕೆ ಜಿಲ್ಲೆಯಿಂದ 219 ಬಸ್‌ಗಳನ್ನು ಗುರುವಾರ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.

ಖಾಸಗಿ ವಾಹನಗಳ ಸಂಚಾರ: ಖಾಸಗಿ ಬಸ್, ಕ್ರೂಸರ್‌, ಆಟೊ, ಟಂಟಂಗಳು ನಗರ, ಜಿಲ್ಲೆ ಹಾಗೂ ಹೊರ ಜಿಲ್ಲೆಗಳ ನಡುವೆ ಸಂಚಾರ ಮುಂದುವರಿಸಿದ್ದು, ಸಾಮಾನ್ಯ ದರಕ್ಕಿಂತ ದುಪ್ಪಟ್ಟು ಹಣವನ್ನು ಪ್ರಯಾಣಿಕರಿಂದ ವಸೂಲಿ ಮಾಡುತ್ತಿರುವುದು ಕಂಡುಬಂದಿತು. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಊರಿಗೆ ಬಂದವರು ಮರಳಿ ವಿವಿಧ ನಗರ, ಪಟ್ಟಣಗಳಿಗೆ ತೆರಳಲು ಪರದಾಡಿದರು.

***

ಮುಷ್ಕರ ನಿರತ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವ ಬದಲು ಅವರ ಮನವೊಲಿಕೆಗೆ ಆದ್ಯತೆ ನೀಡಲಾಗಿದೆ. ನೌಕರರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು

ನಾರಾಯಣಪ್ಪ ಕುರುಬರ, ವಿಭಾಗೀಯ ನಿಯಂತ್ರಣಾಧಿಕಾರಿ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.