ADVERTISEMENT

ಸಾರಿಗೆ ನೌಕರರ ಮುಷ್ಕರ: ಬಸ್ ಸಂಚಾರ ಸ್ಥಗಿತ, ಪ್ರಯಾಣಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 7:43 IST
Last Updated 7 ಏಪ್ರಿಲ್ 2021, 7:43 IST
ಪ್ರಯಾಣಿಕರ ಪರದಾಟ
ಪ್ರಯಾಣಿಕರ ಪರದಾಟ   

ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ಆರಂಭಿಸಿರುವುದರಿಂದ ಜಿಲ್ಲೆಯಾದ್ಯಂತ ಬಸ್ ಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.

ಬೆಂಗಳೂರು, ಮಂಗಳೂರು, ಉಡುಪಿ, ಗೋವಾ, ಮುಂಬೈ, ಶ್ರೀಶೈಲ, ಸೊಲ್ಲಾಪುರ ಸೇರಿದಂತೆ ವಿವಿಧೆಡೆಗಳಿಂದ ಮಂಗಳವಾರ (ನಿನ್ನೆ) ಹೊರಟಿರುವ ಲಾಂಗ್ ರೂಟ್ ಬಸ್ಸುಗಳು ಇಂದು ಮಧ್ಯಾಹ್ನದವರೆಗೂ ಒಂದೊಂದಾಗಿ ಡಿಪೋಕ್ಕೆ ಮರಳುತ್ತಿವೆ. ನಗರ ಸಾರಿಗೆ ಬಸ್ ಗಳು ಸೇರಿದಂತೆ ಉಳಿದ ಎಲ್ಲ ಮಾರ್ಗಗಳ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿವೆ.

ದೂರದ ನಗರ, ಹಳ್ಳಿಗಳಿಗೆ ತೆರಳಲು ಆಗದೆ ಪ್ರಯಾಣಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ನಿನ್ನೆ ರಾತ್ರಿಯಿ‌ಂದಲೇ ಬಸ್ ಗಳ ಸಂಚಾರ ವಿರಳವಾಗಿರುವುದರಿಂದ ಅನೇಕ ಪ್ರಯಾಣಿಕರು ಬಸ್ ನಿಲ್ದಾಣದಲ್ಲೇ ಸಿಲುಕಿಕೊಂಡಿದ್ದಾರೆ.

ADVERTISEMENT

ಆಟೊ, ಟಂಟಂ ಮತ್ತು ಖಾಸಗಿ ಮಿನಿ ಬಸ್ ಗಳು ಹೆಚ್ಚಿನ ದರವನ್ನು ಪ್ರಯಾಣಿಕರಿಂದ ವಸೂಲಿ ಮಾಡುತ್ತಿವೆ. ಊರುಗಳಿಗೆ ತೆರಳಲೇ ಬೇಕಾದವರು ಹೆಚ್ಚಿನ ಹಣ ತೆತ್ತು ಖಾಸಗಿ ವಾಹನಗಳಲ್ಲಿ ಸಂಚರಿಸುತ್ತಿದ್ದಾರೆ.

ರಸ್ತೆಗಳಲ್ಲಿ ಖಾಸಗಿ ವಾಹನಗಳ ಸಂಚಾರ ಹೆಚ್ಚಾಗಿ ಕಂಡುಬರುತ್ತಿವೆ. ಬಸ್ ನಿಲ್ದಾಣಗಳು ಬಸ್, ಪ್ರಯಾಣಿಕರು ಇಲ್ಲದೆ ಬಣಗುಡುತ್ತಿವೆ‌.

ವಿಜಯಪುರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ ವಿಜಯಪುರ ಜಿಲ್ಲಾ ವಿಭಾಗೀಯ ಸಂಚಾಲಕ ನಾರಾಯಣಪ್ಪ ಕುರುಬರ ಅವರು ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ, ಪ್ರಯಾಣಿಕರು, ಸಾರಿಗೆ ಸಂಸ್ಥೆ ನೌಕರರೊಂದಿಗೆ ಮಾತುಕತೆ ನಡೆಸಿದರು.

ಸಾರಿಗೆ ನೌಕರರ ಮುಷ್ಕರ ಶಾಂತಿಯುತವಾಗಿ ನಡೆಯುತ್ತಿದ್ದು, ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.