ADVERTISEMENT

ಕುರುಬ ಸಮಾಜದ ಮುಖಂಡರ ಜನಜಾಗೃತಿ ಸಮಾವೇಶ: ಕುರುಬರಿಗೆ ಎಸ್.ಟಿ.ಮೀಸಲಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 5:40 IST
Last Updated 25 ಆಗಸ್ಟ್ 2025, 5:40 IST
ಮುದ್ದೇಬಿಹಾಳ ಪಟ್ಟಣದ ಮದರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಕುರುಬ ಸಮಾಜದ ಮುಖಂಡ ಸಭೆಯನ್ನು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಡೊಳ್ಳು ಬಾರಿಸಿ ಉದ್ಘಾಟಿಸಿದರು. ವಿಧಾನ ಪರಿಷತ್‌ ಸದಸ್ಯ ಎಚ್.ವಿಶ್ವನಾಥ, ಕೆಪಿಎಸ್‌ಇ ಮಾಜಿ ಸದಸ್ಯ ಮುಕುಡಪ್ಪ ಇದ್ದರು.
ಮುದ್ದೇಬಿಹಾಳ ಪಟ್ಟಣದ ಮದರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಕುರುಬ ಸಮಾಜದ ಮುಖಂಡ ಸಭೆಯನ್ನು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಡೊಳ್ಳು ಬಾರಿಸಿ ಉದ್ಘಾಟಿಸಿದರು. ವಿಧಾನ ಪರಿಷತ್‌ ಸದಸ್ಯ ಎಚ್.ವಿಶ್ವನಾಥ, ಕೆಪಿಎಸ್‌ಇ ಮಾಜಿ ಸದಸ್ಯ ಮುಕುಡಪ್ಪ ಇದ್ದರು.   

ಮುದ್ದೇಬಿಹಾಳ: ‘ಕುರುಬರಿಗೆ ಎಸ್.ಟಿ.ಮೀಸಲಾತಿ ಕಲ್ಪಿಸಬೇಕು’ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ ಹೇಳಿದರು.

ಪಟ್ಟಣದ ಮದರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆ ಕುರುಬ ಸಮಾಜದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಂದೆ ನಿಂತು ಎಸ್‌ಟಿ ಮೀಸಲಾತಿ ಕೇಳುವ ಗಟ್ಟಿ ಧ್ವನಿ, ಧೈರ್ಯ ಯಾರಲ್ಲೂ ಇಲ್ಲ, ಬರೀ ಜೈ ಜೈ ಎನ್ನುವುದು, ಶಾಲು ಹಾರ ಹಾಕಿ ಸನ್ಮಾನಿಸುವುದರಿಂದ ಏನು ಪ್ರಯೋಜನವಾಗದು. ಕುರುಬರಿಗೆ ಎಸ್.ಟಿ.ಮೀಸಲಾತಿ ಕೊಡಿ ಎಂದು ಕೇಳುವ ಧೈರ್ಯ ಸಮಾಜದವರಲ್ಲಿ ಬರಬೇಕು’ ಎಂದರು.

ADVERTISEMENT

‘ಹಿಂದಿನ ಬಾರಿ ಚುನಾವಣೆಯಲ್ಲಿ ಸಿದ್ಧರಾಮಯ್ಯ ಬಾದಾಮಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾಗ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಕಂಡರು. ಆದರೆ, ಬಾದಾಮಿಯ ಜನ ನಿಮಗೆ ರಾಜಕೀಯ ಜೀವನ ನೀಡಿದ್ದಾರೆ. ನಿಮಗಷ್ಟೇ ಅಲ್ಲ ಇಡೀ ಕುರುಬ ಸಮಾಜವನ್ನು ಎತ್ತಿ ಹಿಡಿದಿದ್ದಾರೆ. ಅದಕ್ಕೆ ಕೃತಜ್ಞರಾಗಿ ’ ಎಂದು ಹೇಳಿದರು.

‘ನನಗೆ ಸಮಾಜದ ವಿಷಯ ಬಂದಾಗ ಯಾವ ಪಕ್ಷ, ಪಂಗಡ ಸಂಬಂಧವಿಲ್ಲ. ಬಸವರಾಜ ಬೊಮ್ಮಾಯಿ ಸಿಎಂ ಇದ್ದಾಗ ಕುರುಬರಿಗೆ ಎಸ್.ಟಿ ಮೀಸಲಾತಿ ನೀಡಬೇಕು ಎಂದು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರು. ಆದರೆ, ಅದನ್ನು ವಾಪಸ್ ಕಳಿಸಿದಾಗ ಮತ್ತೆ ಸಿದ್ಧರಾಮಯ್ಯ ಕೇಂದ್ರಕ್ಕೆ ಕಳಿಸಿಕೊಟ್ಟಿದ್ದಾರೆ. ಪ್ರಧಾನಿ ಮೋದಿ ಬಳಿ ಕುರುಬರಿಗೆ ಎಸ್.ಟಿ ಮೀಸಲಾತಿ ಯಾಕೆ ಆಗಲಿಲ್ಲ ಎಂದು ಸಿದ್ಧರಾಮಯ್ಯ ಕೇಳಬೇಕಾಗಿದೆ’ ಎಂದು ಹೇಳಿದರು.

ಕೆಪಿಎಸ್‌ಇ ಮಾಜಿ ಸದಸ್ಯ ಕೆ.ಮುಕುಡಪ್ಪ ಮಾತನಾಡಿ, ‘ನಾವು ಕುರುಬರು, ನಮಗೆ ಯಾವ ಎಂಪಿ, ಎಂಎಲ್‌ಎ ಆಗುವುದು ಬೇಡ. ಮೊದಲು ಕುರುಬರು ಎಸ್ಟಿ ಮೀಸಲು ಅಡಿ ಸೇರ್ಪಡೆ ಆಗಬೇಕು’ ಎಂದು ಹೇಳಿದರು.

ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ‘ಕುರುಬರಿಗೆ ಎಸ್.ಟಿ ಮೀಸಲಾತಿಗಾಗಿ ಜನಾಂದೋಲನ ಮಾಡುವ ಅಗತ್ಯವಿದೆ ಎಂದು ಹೇಳಿದರು.

ಸಿದ್ಧನಕೊಳ್ಳದ ಶಿವಕುಮಾರ ಸ್ವಾಮೀಜಿ, ಸರೂರು ಹಾಲುಮತ ಗುರುಪೀಠದ ಶಾಂತಮಯ ಶ್ರೀ, ಸಂಗೊಳ್ಳಿ ರಾಯಣ್ಣ ವೇದಿಕೆ ಸಂಚಾಲಕ ಪರಮೇಶ ಮಾತಿನ್‌, ಮುಂಖಂಡ ಮಂಜುನಾಥ ಲಕ್ಕವಳ್ಳಿ, ವಕೀಲ ಎಚ್.ವೈ. ಪಾಟೀಲ, ಶಿಲ್ಪಾ ಕುದರಗೊಂಡ ಮಾತನಾಡಿದರು.

ಮುಖಂಡರಾದ ಎಸ್.ಎಸ್.ಹುಲ್ಲೂರ, ಸಿದ್ದಣ್ಣ ಮೇಟಿ, ನೀಲಮ್ಮ ಮೇಟಿ, ವಕೀಲರಾದ ಪಿ.ಬಿ.ಗೌಡರ, ಬಿ.ಜಿ.ಜಗ್ಗಲ, ಬಿ.ವೈ.ಮೇಟಿ, ರೇವತಿ ಬೂದಿಹಾಳ, ಪಂಚಮಸಾಲಿ ಸಮಾಜದ ಕಾಶೀಬಾಯಿ ರಾಂಪೂರ, ಜೆಡಿಎಸ್ ಮುಖಂಡ ಬಸನಗೌಡ ಪಾಟೀಲ ಇದ್ದರು.

ಜೋಳಿಗೆ ಹಿಡಿದು ಸಮಾಜದ ಮನೆ ಮನೆಗಳಿಗೆ ಹೋಗಿ ಕಾಗಿನೆಲೆ ಕನಕ ಗುರುಪೀಠವನ್ನು ಕಟ್ಟಿದ್ದೇವೆ. ಸ್ವಾಮೀಜಿಗಳು ಎಸ್.ಟಿ ಮೀಸಲಾತಿಯ ಹೋರಾಟವನ್ನು ಮುನ್ನಡೆಸಬೇಕು. ಸಮಾಜ ನೀವು ಹೇಳಿದಂತೆ ಮುನ್ನಡೆಯಲಿದೆ
ಎಚ್.ವಿಶ್ವನಾಥ ವಿಧಾನ ಪರಿಷತ್‌ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.