ADVERTISEMENT

ಇಂಡಿ| ಲಚ್ಯಾಣದ ರೈಲ್ವೆ ಗೇಟ್‌ಲ್ಲಿ ನಿತ್ಯ ಸರ್ಕಸ್: ಎಚ್ಚೆತ್ತುಕೊಳ್ಳದ ಇಲಾಖೆ

ಎ.ಸಿ.ಪಾಟೀಲ
Published 9 ಜನವರಿ 2026, 2:34 IST
Last Updated 9 ಜನವರಿ 2026, 2:34 IST
<div class="paragraphs"><p>ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಅಂಕುಡೊಂಕಾದ ರೈಲ್ವೆ ಫಾಟಕ್, ಫಾಟಕ್ ಕೆಳಗೆ ಕಬ್ಬಿಣದ ಹಳಿ ಇಟ್ಟು ಕಾಲು ಭಾಗದ ರಸ್ತೆ ಬಂದ್ ಮಾಡಿದ ನೋಟ.&nbsp;</p></div>

ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಅಂಕುಡೊಂಕಾದ ರೈಲ್ವೆ ಫಾಟಕ್, ಫಾಟಕ್ ಕೆಳಗೆ ಕಬ್ಬಿಣದ ಹಳಿ ಇಟ್ಟು ಕಾಲು ಭಾಗದ ರಸ್ತೆ ಬಂದ್ ಮಾಡಿದ ನೋಟ. 

   

ಇಂಡಿ: ತಾಲ್ಲೂಕಿನ ಲಚ್ಯಾಣ ಗ್ರಾಮದ ನಡು ಭಾಗದಲ್ಲಿ ಹಾದು ಹೋದ ರೈಲ್ವೆ ಮಾರ್ಗಕ್ಕೆ ಅಪಘಾತ ತಡೆಯಲು ಅಳವಡಿಸಲಾದ ರೈಲ್ವೆ ಗೇಟ್ ಫಾಟಕ್ ಮೂಲಕ ವಾಹನ ಸವಾರರು ಸಂಚರಿಸುವುದು ಈ ಭಾಗದ ಜನರಿಗೆ ಈಗ ಸವಾಲಾಗಿ ಪರಿಣಮಿಸಿದೆ.

ಬಹುದಿನಗಳಿಂದ ಅಂಕುಡೊಂಕಾದ ಫಾಟಕ್ ಬೇಗನೇ ದುರಸ್ತಿಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ADVERTISEMENT

ಇಲ್ಲಿನ ಸಿದ್ಧಲಿಂಗ ಮಹಾರಾಜರ ಕಮರಿಮಠದ ಸಮೀಪದಲ್ಲೆ ಗ್ರಾಮಕ್ಕೆ ಹೊಂದಿಕೊಂಡಿರುವ ಹಳೆಯ ಕಾಲದ ಈ ರೈಲ್ವೆ ಗೇಟ್‌ನಿಂದಾಗಿ ಈ ಹಿಂದೆ ಕಿರಿ ಕಿರಿಯಾಗಲಿ, ತೊಂದರೆ ಆಗಲಿ ಆಗಿರಲಿಲ್ಲ. ರೈಲುಗಳ ಓಡಾಟವೂ ಕಡಿಮೆ ಇತ್ತು. ಹೆಚ್ಚಿದ ವಾಹನಗಳ ಸಂಖ್ಯೆಯಿಂದಾಗಿ ಈ ರೈಲ್ವೆ ಕ್ರಾಸ್ ಮೂಲಕ ಈಗ ನಿತ್ಯ ನೂರಾರು ವಾಹನಗಳು, ಸಾವಿರಾರು ಜನರು ಸಂಚರಿಸುತ್ತಾರೆ. ಗ್ರಾಮದ ಜನರು, ಸಮೀಪದ ಲೋಣಿ (ಕೆ.ಡಿ) ಬರಗೂಡಿ ಗ್ರಾಮಸ್ಥರು ಇದೇ ಗೇಟ್ ದಾಟಿ ಸಂಚರಿಸಿ 12 ಕಿ.ಮೀ. ದೂರದ ಇಂಡಿ ಪಟ್ಟಣ ತಲುಪುತ್ತಾರೆ.

ಈಚೆಗೆ ಬೈಕ್‌ಗಳ ಸಂಖ್ಯೆ ಹೆಚ್ಚಾಗಿದ್ದು, ನಿತ್ಯ ಸಾವಿರಾರು ಬೈಕ್, ಸಾರಿಗೆ ಬಸ್, ಕಬ್ಬಿನ ಟ್ಯಾಕ್ಟರ್, ಖಾಸಗಿ ವಾಹನಗಳು ಈ ಗೇಟ್ ಮೂಲಕ ಸಂಚರಿಸುತ್ತಿವೆ. ಈಚೆಗೆ ಜೋಡಿ ರೈಲು ಮಾರ್ಗ, ಈ ಮಾರ್ಗದಲ್ಲಿ ವಿದ್ಯುತ್ ಅಳವಡಿಸಿದ ದಿನದಿಂದ ಅಂತೂ ಈ ಭಾಗದಲ್ಲಿ ಗೂಡ್ಸ ರೈಲು ವಾಹನಗಳ ಓಡಾಟದ ಸಂಖ್ಯೆ ಹೆಚ್ಚಿದೆ. ಕೂಡಗಿ ಶಾಖೋತ್ಪನ್ನ ಘಟಕಕ್ಕೆ ನಿತ್ಯ ಕಲ್ಲಿದ್ದಲು ಪೂರೈಕೆ ಗೂಡ್ಸ ರೈಲು ಹಗಲಿರುಳು ಸಂಚಿಸುತ್ತವೆ. ಇದೇ ಗ್ರಾಮದ ರೈಲು ನಿಲ್ದಾಣದಲ್ಲಿ ಅಧಿಕ ಸಮಯದವರೆಗೆ ಗೂಡ್ಸ ರೈಲುಗಳ ನಿಲುಗಡೆಯಾಗುತ್ತಿದೆ.

ಪರಿಣಾಮ ಈ ಸ್ಥಳದಲ್ಲಿ ಮೇಲಿಂದ ಮೇಲೆ ರೈಲ್ವೆ ಗೇಟ್ ಹಾಕಲಾಗುತ್ತದೆ. ಇದರಿಂದ ಆಸ್ಪತ್ರೆಗೆ, ಶಾಲೆ ಕಾಲೇಜುಗಳಿಗೆ, ಸಂತೆ ಪೇಟೆಗೆ ದ್ವಿಚಕ್ರ, ತ್ರಿಚಕ್ರ ವಾಹನಗಳ ಮೂಲಕ ಲಗುಬಗೆಯಿಂದ ಸಂಚರಿಸುವ ಪ್ರಯಾಣಿಕರಿಗೆ ಭಾರಿ ತೊಂದರೆಯಾಗಿದೆ.

ಈ ರೈಲ್ವೆ ಗೇಟ್ ಬಳಿ ಎಡ ಹಾಗೂ ಬಲ ಬದಿಯಲ್ಲಿ ಜಾರು ರಸ್ತೆ ಇದೆ. ರೈಲ್ವೆ ಗೇಟ್ ತೆರೆದ ಬಳಿಕ ಹರಸಾಹಸದಿಂದ ಎತ್ತರದ ರೈಲ್ವೆ ಗೇಟ್ ತಲುಪಿದ ಎಲ್ಲ ವಾಹನಗಳು ದಾಟುವಾಗ ಈ ಗೇಟ್ಗೆ ಪಶ್ಚಿಮ ಭಾಗದಲ್ಲಿ ಅಳವಡಿಸಲಾದ ಕಬ್ಬಿಣದ ಹಾರೆಯ ಪಾಟಕ್ ಡೊಂಕಾಗಿದೆ. ಇದು ಎತ್ತರದ ವಾಹನಗಳಿಗೆ ನಿತ್ಯ ತಾಕುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈ ಹಾರಿಯ ಕೆಳಭಾಗದಲ್ಲಿ ಹಲವು ತಿಂಗಳುಗಳಿಂದ ಕಾಲು ಭಾಗದ ರಸ್ತೆ ಬಂದ್ ಮಾಡಲಾಗಿದೆ. ಇದರಿಂದ ವಾಹನ ಸವಾರರಿಗೆ ಸಂಚರಿಸಲು ತೊಂದರೆಯಾಗುತ್ತಿದೆ ಎಂದು ಲಚ್ಯಾಣ ಗ್ರಾಮದ ಶಿವಪುತ್ರ ವಾಡಿ ದೂರಿದ್ದಾರೆ.

ಇದು ಅತ್ಯಂತ ಹಳೆಯದಾದ ಅಂದರೆ ಮೀಟರ್ ಗೇಜ್ ಇದ್ದಾಗಿನಿಂದಲೂ ಗುರುತಿಸಲಾದ ಕ್ರಾಸಿಂಗ್ ಸ್ಥಳವಾಗಿದೆ. ಈ ಸ್ಥಳದಲ್ಲಿ ನಿತ್ಯ ವಾಹನಗಳ ದಟ್ಟಣೆ ಹೆಚ್ಚಿರುತ್ತದೆ. ಪ್ರಸ್ತುತ ಕಬ್ಬು ಸಾಗಾಟದ ಸೀಜನ್ ಇರುವುದಿರಿಂದ ಕಬ್ಬಿನ ಟ್ಯಾಕ್ಟರ್ ವಾಹನಗಳ ಓಡಾಟ ಹೆಚ್ಚಿದೆ. ಆದ್ದರಿಂದ ಅವಘಡ ಸಂಭವಿಸುವ ಮುನ್ನ ಸಂಬಂಧಿಸಿದ ದಕ್ಷಿಣ ಪಶ್ವಿಮ ರೈಲ್ವೆ ವಿಭಾಗೀಯ ನಿಯಂತ್ರಕರು ಬೇಗನೇ ಈ ರೈಲ್ವೆ ಫಾಟಕ್ ಬದಲಾಯಿಸಿ ಹೊಸ ಫಾಟಕ್ ಅಳವಡಿಸಿ ವಾಹನ ಸವಾರರಿಗೆ ಅನುಕೂಲ ಕಲ್ಪಿಸಬೇಕು ಎಂದು ಲಚ್ಯಾಣ, ಲೋಣಿ ಕೆ.ಡಿ. ಬರಗೂಡಿ, ಪಡನೂರ, ಅಹಿರಸಂಗ ಗ್ರಾಮಗಳ ಜನರು, ರೈಲು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.