ADVERTISEMENT

ಕೊಠಡಿ ಒಂದು, ತರಗತಿ ಏಳು!: ಚಿಕ್ಕಮಣ್ಣೂರ ಗ್ರಾಮದ ಸರ್ಕಾರಿ ಶಾಲೆಯ ದುಃಸ್ಥಿತಿ

ಇಂಡಿ ತಾಲ್ಲೂಕು ಚಿಕ್ಕಮಣ್ಣೂರ ಗ್ರಾಮದ ಸರ್ಕಾರಿ ಶಾಲೆಯ ದುಃಸ್ಥಿತಿ

ಎ.ಸಿ.ಪಾಟೀಲ
Published 19 ಜೂನ್ 2025, 5:18 IST
Last Updated 19 ಜೂನ್ 2025, 5:18 IST
ಇಂಡಿ ತಾಲ್ಲೂಕಿನ ಚಿಕ್ಕಮಣ್ಣೂರ ಗ್ರಾಮದ ಭೀಮ ನಗರದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲಾ ಕೊಠಡಿಗಳ ದುಃಸ್ಥಿತಿ
ಇಂಡಿ ತಾಲ್ಲೂಕಿನ ಚಿಕ್ಕಮಣ್ಣೂರ ಗ್ರಾಮದ ಭೀಮ ನಗರದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲಾ ಕೊಠಡಿಗಳ ದುಃಸ್ಥಿತಿ   

ಇಂಡಿ (ವಿಜಯಪುರ ಜಿಲ್ಲೆ): ತಾಲ್ಲೂಕಿನ ಚಿಕ್ಕಮಣ್ಣೂರ ಗ್ರಾಮದ ಭೀಮನಗರದಲ್ಲಿರುವ ಸರ್ಕಾರಿ ಶಾಲೆ ದುಃಸ್ಥಿತಿಯಲ್ಲಿದೆ. ಇಲ್ಲಿ ಒಂದರಿಂದ ಏಳನೆಯ ತರಗತಿಯವರೆಗೆ ವರ್ಗಗಳಿವೆ. ಆದರೆ, ಶಾಲೆಯಲ್ಲಿ ಸುಸ್ಥಿಯಲ್ಲಿರುವುದು ಒಂದೇ ಕೊಠಡಿ.

ಈ ಒಂದು ಕೊಠಡಿಯಲ್ಲಿಯೇ ಎಲ್ಲ ತರಗತಿಗಳ ಒಟ್ಟು 105 ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಮಾಡಲಾಗುತ್ತಿದೆ. ಆವರಣದಲ್ಲಿ ಒಟ್ಟು ಆರು ಕೊಠಡಿಗಳಿದ್ದು ಎರಡು ಕೊಠಡಿಗಳು ಸಂಪೂರ್ಣವಾಗಿ ಬಿದ್ದಿವೆ, ಇನ್ನೆರಡು ಕೊಠಡಿಗಳು ಮಳೆಗಾಲದಲ್ಲಿ ಬಳಕೆಗೆ ಯೋಗ್ಯವಾಗಿಲ್ಲ. ಸಂಪೂರ್ಣ ಸೋರಿಕೆಯಾಗಿ ಮಳೆನೀರು ಸಂಗ್ರಹವಾಗಿರುತ್ತದೆ. ಇನ್ನೊಂದು ಕೊಠಡಿಯ ಚಾವಣಿ ಸಿಮೆಂಟ್‌ ಉದುರಿ ಬೀಳುತ್ತಿದೆ. ಹೀಗಾಗಿ ಒಂದೇ ಕೊಠಡಿಯಲ್ಲಿ ಎಲ್ಲ ವಿದ್ಯಾರ್ಥಿಗಳು ಓದುವ ಅನಿವಾರ್ಯತೆ ಎದುರಾಗಿದೆ.

ಏಕಕಾಲದಲ್ಲಿ ಎಲ್ಲ ಮಕ್ಕಳಿಗೂ ಮತ್ತು ಶಿಕ್ಷಕರಿಗೆ ಪಾಠ ಪ್ರವಚನ ಸಾಧ್ಯವಾಗದ ಕಾರಣ, ಕೊಠಡಿಯಲ್ಲಿ ಒಂದು ತರಗತಿ, ಎರಡು ತರಗತಿಗಳಿಗೆ ಕೊಠಡಿಗೆ ಹತ್ತಿರದ ಕಾಂಪೌಂಡ್‌ನೊಳಗೆ ಮತ್ತು ಎರಡು ತರಗತಿಗಳಿಗೆ ಗಿಡದ ಕೆಳಗೆ ತರಗತಿ ತೆಗೆದುಕೊಳ್ಳಲಾಗುತ್ತದೆ. ಮಳೆಯಾದರೆ ಬಹುತೇಕ ವಿದ್ಯಾರ್ಥಿಗಳನ್ನು ಮನೆಗಳಿಗೆ ಕಳುಹಿಸಲಾಗುತ್ತದೆ. ಹಾಜರಿದ್ದ ವಿದ್ಯಾರ್ಥಿಗಳಿಗೆಲ್ಲ ಒಂದೇ ಕೊಠಡಿಯಲ್ಲಿ ಪಾಠ ಹೇಳಿಕೊಡಲಾಗುತ್ತದೆ.

ADVERTISEMENT

ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಗಡ್ಡಿಲಿಂಗ ಪೂಜಾರಿ ಅವರು ಈ ಶಾಲೆಗೆ ಕೊಠಡಿಗಳನ್ನು ಕಟ್ಟಿಸಿ ಕೊಡುವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ, ಪಿಡಿಒ, ತಾಲ್ಲೂಕು ಪಂಚಾಯಿತಿ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ.

ಇಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಅಧಿಕಾರಿಗಳು ಹೇಳುವಂತೆ, ‘ಇಂಡಿ ಮತಕ್ಷೇತ್ರದ 106 ಶಾಲೆಗಳಲ್ಲಿಯ 185 ಕೊಠಡಿಗಳು ಹಾಳಾಗಿವೆ. ಅವುಗಳನ್ನು ನೆಲಸಮಗೊಳಿಸಿ, ಹೊಸ ಕೊಠಡಿಗಳನ್ನು ಕಟ್ಟಬೇಕಿದೆ. 27 ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. 18 ಶಾಲೆಗಳಲ್ಲಿ ಶೌಚಾಲಯವಿಲ್ಲ. 73 ಶಾಲೆಗಳಲ್ಲಿಯ ಶೌಚಾಲಯಗಳು ಹಾಳಾಗಿದ್ದು, ಅವುಗಳನ್ನು ರಿಪೇರಿ ಮಾಡಬೇಕಿದೆ. 212 ಶಾಲೆಯಗಳಲ್ಲಿಯ 563 ಕೊಠಡಿಗಳು ರಿಪೇರಿ ಮಾಡಬೇಕಿದೆ. 55 ಶಾಲೆಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲ. ಮತಕ್ಷೇತ್ರದಲ್ಲಿ ಒಟ್ಟು 83 ಹೆಚ್ಚುವರಿ ಕೊಠಡಿಗಳ ಅಗತ್ಯವಿದ್ದು, ಇವೆಲ್ಲ ಕೆಲಸಗಳಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ’ ಎನ್ನುತ್ತಾರೆ.

ಶೀಘ್ರದಲ್ಲಿ ಶಾಲಾ ಕೊಠಡಿಗಳನ್ನು ನಿರ್ಮಿಸಿ ಕೊಡಬೇಕು. ಇಲ್ಲದಿದ್ದರೆ ಎಸ್.ಡಿ.ಎಂ.ಸಿ ಸದಸ್ಯರು ಮತ್ತು ಪಾಲಕರ ಒಟ್ಟಾಗಿ ಶಿಕ್ಷಣ ಇಲಾಖೆ ಕಚೇರಿ ಎದುರು ಧರಣಿ ನಡೆಸುತ್ತೇವೆ 
–ಗಡ್ಡಿಲಿಂಗ ಪೂಜಾರಿ ಚಿಕ್ಕಮಣ್ಣುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎಸ್‌ಡಿ ಎಂಸಿ ಅಧ್ಯಕ್ಷ
ಹಿಂದಿನ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಹಲವಾರು ಬಾರಿ ಲಿಖಿತ ಮತ್ತು ಮೌಖಿಕ ಮನವಿ ಮಾಡಿದ್ದೇವೆ. ಸೌಜನ್ಯಕ್ಕೂ ಶಾಲೆಯ ಪರಿಸ್ಥಿತಿಯ ಕುರಿತು ಅವರು ಮೇಲಾಧಿಕಾರಿಗಳಿಗೆ ಪತ್ರ ಬರೆದಿಲ್ಲ
–ಬಾದಶಾಹ ಶೇಖ್‌ ಚಿಕ್ಕಮಣ್ಣೂರ ಗ್ರಾಮದ ಪ್ರೌಢ ಶಾಲೆಯ ಎಸ್ ಡಿ ಎಂ ಸಿ ಸದಸ್ಯ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.