
ಚಡಚಣ: ಸಾರ್ವಜನಿಕ ಕ್ಷೇತ್ರದಲ್ಲಿ ಸಾಮಾಜಿಕ ಬದ್ಧತೆ, ಕಾಳಜಿಯಿಂದ ಕೆಲಸ ಮಾಡಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ತಾಲ್ಲೂಕಿನ ಲೋಣಿ ಬಿ.ಕೆ ಗ್ರಾಮದಲ್ಲಿ ಭಾನುವಾರ ಶ್ರೀ ಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ವಿಜ್ಞಾನ ಭವನದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಶಿಕ್ಷಣ, ಕುಡಿಯುವ ನೀರು, ಆಸ್ಪತ್ರೆ ವಿಷಯದಲ್ಲಿ ರಾಜಕಾರಣ ಮಾಡದಿದ್ದರೆ ಸುಸಜ್ಜಿತ ಸಮಾಜ ನಿರ್ಮಿಸಲು ಸಾಧ್ಯ. ನಿಸ್ವಾರ್ಥ ಮನೋಭಾವದಿಂದ ಸುಮಾರು 50 ವರ್ಷಗಳ ಹಿಂದೆ ಯಾವುದೇ ಸೌಲಭ್ಯವಿಲ್ಲದ ಕಾಲದಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿದ ಬಿ.ಎಂ.ಕೋರೆ ಅವರು ಸಮಾಜಕ್ಕೆ ಆದರ್ಶ ಪ್ರಾಯರಾಗಿದ್ದಾರೆ. ಮಹಿಳೆಯರಿಗೆ ಏನಾದರೂ ಸಹಾಯ ಮಾಡಬೇಕೆಂದು ಗೃಹಲಕ್ಷ್ಮಿ ಯೋಜನೆ ಜೊತೆಗೆ ಗೃಹಲಕ್ಷ್ಮಿ ಬ್ಯಾಂಕ್ ಸ್ಥಾಪನೆ ಗುರಿ ಹೊಂದಲಾಗಿದೆ .ಸದ್ಯದಲ್ಲೇ ಗೃಹಲಕ್ಷ್ಮೀ ಯೋಜನೆಯ 24 ನೇ ಕಂತು ಬಿಡುಗಡೆಗೊಳಿಸಲಾಗುತ್ತಿದೆ. ಮಕ್ಕಳ ಭವಿಷ್ಯಕ್ಕಾಗಿ ನಮ್ಮ ಕ್ಷೇತ್ರದಲ್ಲಿ ಡಿಜಿಟಲ್ ಡೆಟಾಕ್ಸ್ ಯೋಜನೆಯಡಿ ರಾತ್ರಿ 7 ರಿಂದ 9 ಗಂಟೆಯವರೆಗೆ ಎಲ್ಲರೂ ಮೊಬೈಲ್, ಟಿವಿ ಬಂದ್ ಮಾಡಿ ಮಕ್ಕಳ ಓದಿನೆಡೆಗೆ ಗಮನ ನೀಡುವಂತೆ ಮಾಡಲಾಗುತ್ತಿದೆ ಎಂದರು.
ಸಾಂಸ್ಕೃತಿಕ ಭವನ ಉದ್ಘಾಟನೆ ನೆರವೇರಿಸಿದ ಜವಳಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಬಿ.ಎಂ.ಕೋರೆ ಅವರಿಗೆ ಯಾವುದೇ ಉನ್ನತ ಸ್ಥಾನಮಾನ ದೊರಕದಿರುವದು ದುರದೃಷ್ಟಕರ ಎಂದು ವಿಷಾದಿಸಿದರು.
ಶೈಕ್ಷಣಿಕ ಸಮಾವೇಶದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಕುಲಪತಿ ವಿಜಯಾ ಕೋರಿಶೆಟ್ಟಿ,ಬಾಲ ವಿಕಾಸ ಅಕಾಡೆಮಿಯ ಸಂಗಮೇಶ ಬಬಲೇಶ್ವರ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಪಂಚಪ್ಪ ಕಲಬುರ್ಗಿ, ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ವಿ.ಸಿ.ನಾಗಠಾಣ ಮಾತನಾಡಿದರು.
ಬೀದರ್‌ನ ಸಿದ್ದಾರೂಢ ಆಶ್ರಮದ ಶ್ರೀ ಶಿವಕುಮಾರ ಸ್ವಾಮೀಜಿ ಆಶಿರ್ವಚನ ನೀಡಿದರು. ಆಳೂರು ಸಿದ್ಧಾರೂಢ ಆಶ್ರಮದ ಶ್ರೀ ಶಂಕರಾನಂದ ಮಹಾಸ್ವಾಮಿಗಳು,ತದ್ದೇವಾಡಿಯ ಮಹಾಂತೇಶ ಸ್ವಾಮೀಜಿ, ಶಾಸಕ ವಿಠ್ಠಲ ಕಟಕದೊಂಡ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ರಾಜುಗೌಡ ಪಾಟೀಲ,ಆನಂದ ಕೋರೆ, ಸಿದ್ಧೇಶ್ವರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಿ.ಎಂ.ಕೋರೆ,ಎಂ.ಆರ್.ಪಾಟೀಲ, ಡಾ.ಎಂ.ಎಸ್.ಮದಬಾವಿ, ಡಾ.ವಿ.ಡಿ.ಐಹೊಳ್ಳಿ, ಡಾ.ಎಸ್.ಕೆ.ಕೊಪ್ಪ, ಡಾ.ಸಂಗಮೇಶ ಮೇತ್ರಿ, ಹಾಸಂಪೀರ ವಾಲೀಕಾರ, ಜಂಬೂನಾಥ ಕಂಚ್ಯಾಣಿ, ಡಾ.ಮಲ್ಲಿಕಾರ್ಜುನ ಉಟಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.