
ಬಸವರಾಜ್ ಸಂಪಳ್ಳಿ
ವಿಜಯಪುರ: ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮಾರ್ಗಗಳ ಮೂಲಕ ಕಳೆದ ಬುಧವಾರದಿಂದ ಬೆಂಗಳೂರು- ವಿಜಯಪುರ ರೈಲು ಸಂಚಾರ ತಾತ್ಕಾಲಿಕವಾಗಿ ಆರಂಭವಾಗಿರುವುದು ಜಿಲ್ಲೆಯ ಪ್ರಯಾಣಿಕರಿಗೆ ಖುಷಿ ತಂದಿರುವ ನಡುವೆಯೇ ಈ ವಿಷಯವಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಮತ್ತು ಸಂಸದ ರಮೇಶ ಜಿಗಜಿಣಗಿ ‘ಕ್ರೆಡಿಟ್’ಗಾಗಿ ಪೈಪೋಟಿ ನಡೆಸಿದ್ದಾರೆ.
ಬೆಂಗಳೂರು- ವಿಜಯಪುರ ನಡುವೆ ಸಂಚರಿಸುವ ರೈಲುಗಳು ಇಂದಿಗೂ ಹುಬ್ಬಳ್ಳಿ ಮತ್ತು ಗದಗ ಎರಡೂ ಕಡೆ ನಗರದೊಳಗೆ ಇರುವ ರೈಲು ನಿಲ್ದಾಣಗಳಿಗೆ ಹೋಗಿ, ಅಲ್ಲಿ ಎಂಜಿನ್ ಬದಲಾವಣೆಗೆ ತುಂಬಾ ಹೊತ್ತು ನಿಲ್ಲಬೇಕು. ಇದರಿಂದ ರೈಲು ಪ್ರಯಾಣ ಅವಧಿ ಸುಮಾರು 14 ಗಂಟೆ ದೀರ್ಘವಾಗುತ್ತಿದೆ.
ಈ ಕುರಿತು ಹಲವು ವರ್ಷಗಳಿಂದ ವಿಜಯಪುರ, ಬಾಗಲಕೋಟೆ ಜಿಲ್ಲೆಯ ಪ್ರಯಾಣಿಕರ ಒತ್ತಾಯ, ಹೋರಾಟ, ಜನಪ್ರತಿನಿಧಿಗಳ ಪ್ರಯತ್ನದ ಫಲವಾಗಿ ರೈಲ್ವೆ ಇಲಾಖೆಯು ಇದೀಗ ಎರಡೂ ಕಡೆ ಬೈಪಾಸ್ ನಿರ್ಮಿಸಿ, ರೈಲ್ವೆ ಪ್ರಯಾಣ ಅವಧಿ ತಗ್ಗಿಸಿದೆ.
ಹುಬ್ಬಳ್ಳಿ ಮತ್ತು ಗದಗ ಎರಡೂ ಕಡೆ ಬೈಪಾಸ್ ನಿರ್ಮಾಣವಾಗಿರುವುದರಿಂದ ವಿಜಯಪುರ–ಬೆಂಗಳೂರು ನಡುವೆ ಸಂಚರಿಸುವ ರೈಲುಗಳು ಕಳೆದ ಬುಧವಾರದಿಂದ ಬೈಪಾಸ್ ಮೂಲಕ ಸಂಚಾರ ಆರಂಭಿಸಿವೆ. ಇದರಿಂದ ಸುಮಾರು 4 ತಾಸು ಪ್ರಯಾಣ ಅವಧಿ ಕಡಿತವಾಗಿದ್ದು, ಪ್ರಯಾಣಿಕರಿಗೆ ಅನುಕೂಲವಾಗಿದೆ. ಆದರೆ, ಈ ಕಾರ್ಯವನ್ನು ‘ನಾವೇ ಮಾಡಿಸಿದ್ದು’ ಎಂದು ಸಚಿವ, ಸಂಸದರು ಪರಸ್ಪರ ಹೇಳಿಕೆ ನೀಡುವ ಮೂಲಕ ‘ಲಾಭ’ ಪಡೆಯಲು ಹವಣಿಸುತ್ತಿದ್ದಾರೆ.
ಈಗ ವಿಶೇಷ ರೈಲು ಬೈಪಾಸ್ ಮೂಲಕ ಬಂದಿದೆಯಷ್ಟೆ. ಇನ್ನೂ ಕಾಯಂ ಆಗಿಲ್ಲ. ಇದರ ಜೊತೆಗೆ ಬೆಂಗಳೂರು-ವಿಜಯಪುರ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಪ್ರಾರಂಭಿಸಬೇಕಿದೆ, ಮೈಸೂರು-ಫಂಡರಫುರ ನಡುವೆ ಸಂಚರಿಸುವ ಗೋಳಗುಮ್ಮಟ ಎಕ್ಸ್‌ಪ್ರೆಸ್ ರೈಲನ್ನು ಕೂಡ ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕವೇ ಓಡಿಸಬೇಕಿದೆ. ಅಲ್ಲದೇ, ವಿಜಯಪುರ ಭಾಗದಲ್ಲಿ ನನೆಗುದಿಗೆ ಬಿದ್ದಿರುವ ಹಲವು ರೈಲ್ವೆ ಯೋಜನೆಗಳು, ವಿದ್ಯುದೀಕರಣ, ಹಳಿ ಜೋಡಣೆ, ಜೋಡಿ ಹಳಿ ನಿರ್ಮಾಣ, ಚಿತ್ರದುರ್ಗ- ಆಲಮಟ್ಟಿ ಹೊಸ ರೈಲು ಮಾರ್ಗದ ಕೆಲಸ, ಬಾಗಲಕೋಟೆ-ಕುಡಚಿ ನಡುವೆ ಆಗಬೇಕಾಗಿರುವ ಕೆಲಸಗಳು ಸಾಕಷ್ಟಿವೆ. ಇವುಗಳತ್ತ ಸಂಸದ, ಸಚಿವರು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಗಮನ ಹರಿಸುವ ಬದಲು ‘ಬೈಪಾಸ್ ರೈಲು ಸಂಚಾರ’ದ ಲಾಭಕ್ಕೆ ಮುಗಿ ಬಿದ್ದಿರುವುದು ನಗೆಪಾಟೀಲಿಗೆ ಕಾರಣವಾಗಿದೆ.
Quote - ವಿಶೇಷ ರೈಲು ಓಡಿದ ನಂತರ ಸಂಸದರು ಹೇಳಿಕೆ ನೀಡಿದ್ದಾರೆ ಜುಲೈ 23 ರಂದು ರೈಲ್ವೆ ಸಚಿವರನ್ನು ಭೇಟಿಯಾಗಿರುವ ಹಳೆಯ ಫೋಟೋ ಬಳಸಿ ಹೇಳಿಕೆ ನೀಡಿದ್ದಾರೆ. ಇದು ಅವರಿಗೆ ಶೋಭೆ ತರುವಂಥದ್ದಲ್ಲ -ಎಂ.ಬಿ.ಪಾಟೀಲಸಚಿವ
Quote - ಅನೇಕ ವರ್ಷಗಳಿಂದ ಈ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿಕೊಂಡು ಪತ್ರ ಬರೆಯಲಾಗಿತ್ತು ಈಗ ಈ ಮಹತ್ವದ ಬೇಡಿಕೆಗೆ ಕೇಂದ್ರ ಸಚಿವರು ಸ್ಪಂದಿಸಿದ್ದು ಪ್ರಯಾಣಿಕರಿಗೆ ಅನುಕೂಲವಾಗಲಿದೆ -ರಮೇಶ ಜಿಗಜಿಣಗಿ ಸಂಸದ
Cut-off box - ನಿರಂತರ ಸಭೆಗಳ ಫಲ: ಎಂ.ಬಿ.ಪಾಟೀಲ ‘ಬೆಂಗಳೂರು- ವಿಜಯಪುರ ರೈಲು ಸಂಚಾರ ಅವಧಿಯನ್ನು 14 ಗಂಟೆಯಿಂದ 10 ಗಂಟೆಗೆ ಇಳಿಸಲು ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ನಾನು ಐದು ಸಲ ನಡೆಸಿರುವ ನಿರಂತರ ಫಾಲೋ-ಅಪ್ ಸಭೆಗಳ ಫಲವಾಗಿ ಇದೀಗ ವಿಶೇಷ ರೈಲು ಓಡಿಸಲಾಗಿದೆ’ ಎಂದು ಕೈಗಾರಿಕೆ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ. ‘ನೆರೆಯ ಕಲಬುರಗಿಯಲ್ಲಿ ಅತ್ಯುತ್ತಮ ರೈಲ್ವೆ ಸೌಕರ್ಯವಿದೆ. ಭಾರತದ ಯಾವ ಭಾಗಕ್ಕೆ ಬೇಕಾದರೂ ಅಲ್ಲಿಂದ ಕಲಬುರಗಿ ಯಾದಗಿರಿ ಬೀದರ್ ರಾಯಚೂರು ಭಾಗಗಳ ಜನ ಸುಗಮವಾಗಿ ಬಂದು ಹೋಗಿ ಮಾಡಬಹುದು. ಆದರೆ ವಿಜಯಪುರ ಬಾಗಲಕೋಟೆಯಲ್ಲಿ ಯಾಕೆ ಇಂತಹ ಸೌಲಭ್ಯಗಳು ಬಂದಿಲ್ಲ? ಇದಕ್ಕೆ ನಮ್ಮ ಜಿಲ್ಲೆಯ ಸಂಸದರೇ ಉತ್ತರಿಸಬೇಕು’ ಎಂದು ಸಚಿವ ಎಂ.ಬಿ.ಪಾಟೀಲರು ಸಂಸದರ ಕಾಲೆಳೆದಿದ್ದಾರೆ.