ADVERTISEMENT

ಈಶ್ವರಪ್ಪರನ್ನು ಸಿಎಂ ಮಾಡದಿದ್ದರೆ ಬಿಜೆಪಿಗೆ ತಕ್ಕ ಪಾಠ: ಹಾಲುಮತ ಸಮಾಜದ ಎಚ್ಚರಿಕೆ

ವಿಜಯಪುರ ಜಿಲ್ಲಾ ಹಾಲುಮತ ಸಮಾಜದ ಮುಖಂಡರು, ಸ್ವಾಮೀಜಿಗಳ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 15:58 IST
Last Updated 24 ಜುಲೈ 2021, 15:58 IST
ವಿಜಯಪುರ ನಗರದಲ್ಲಿ ಶನಿವಾರ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಹಾಲುಮತ ಸಮಾಜದ ಮುಖಂಡರು ಹಾಗೂ ವಿವಿಧ ಮಠಾಧೀಶರು  
ವಿಜಯಪುರ ನಗರದಲ್ಲಿ ಶನಿವಾರ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಹಾಲುಮತ ಸಮಾಜದ ಮುಖಂಡರು ಹಾಗೂ ವಿವಿಧ ಮಠಾಧೀಶರು     

ವಿಜಯಪುರ: ಬಿ.ಎಸ್.ಯಡಿಯೂರಪ್ಪನವರನ್ನೇ ಮುಖ್ಯಮಂತ್ರಿಯನ್ನಾಗಿ ಇನ್ನುಳಿದ ಅವಧಿಗೂ ಮುಂದುವರಿಸಬೇಕು. ಒಂದು ವೇಳೆ ಬದಲಾವಣೆ ಮಾಡುವುದೇ ಆದರೆ ಹಿರಿಯ ಮುಖಂಡ ಕೆ.ಎಸ್‌.ಈಶ್ವರಪ್ಪ ಅವರನ್ನು ಪರಿಗಣಿಸಬೇಕು. ಇಲ್ಲವಾದರೆ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ವಿಜಯಪುರ ಜಿಲ್ಲಾ ಹಾಲುಮತ ಸಮಾಜದ ಮಠಾಧೀಶರು, ಮುಖಂಡರು ಎಚ್ಚರಿಕೆ ನೀಡಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಕಣಾಪುರ ಗುರುಪೀಠದ ಸೋಮೇಶ್ವರ ಸ್ವಾಮೀಜಿ, ಯಡಿಯೂರಪ್ಪ ಅವರನ್ನು ಇನ್ನೆರಡು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಸಿ ಗೌರವಯುತವಾಗಿ ನಡೆಸಿಕೊಂಡು ಬೀಳ್ಕೊಡಬೇಕು ಎಂಬುದು ನಮ್ಮ ಇಚ್ಛೆಯಾಗಿದೆ ಎಂದರು.

ಯಡಿಯೂರಪ್ಪ ಅವರನ್ನು ಬದಲಾಯಿಸುವುದೇ ಅಂತಿಮವಾದರೆ ಅವರಿಗೆ ರಾಜ್ಯದಲ್ಲಿ ಪಕ್ಷ ಕಟ್ಟಲು ಹೆಗಲಿಗೆ ಹೆಗಲಾಗಿ ದುಡಿದ ಹಿರಿಯ ಮುಖಂಡ ಕೆ.ಎಸ್‌.ಈಶ್ವರಪ್ಪ ಅವರನ್ನು ಪ್ರಥಮವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಹುಲಜಂತಿ ಗುರುಪೀಠದ ಮಹಾಲಿಂಗ ಮಹಾರಾಯರು ಮಾತನಾಡಿ, ಬಿಜೆಪಿಯಲ್ಲಿ ಇದುವರೆಗೆ ಲಿಂಗಾಯತರಾದ ಯಡಿಯೂರಪ್ಪ, ಜಗದೀಶ ಶೆಟ್ಟರ್‌, ಒಕ್ಕಲಿಗರಾದ ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ಹಿಂದುಳಿದ ವರ್ಗದವರಿಗೆ ಆದ್ಯತೆ ನೀಡಿಲ್ಲ. ಈಗಲಾದರೂ ಹಿರಿಯ ಮುಖಂಡ ಈಶ್ವರಪ್ಪನವರನ್ನು ಪರಿಗಣಿಸಬೇಕು ಎಂದರು.

ವಿಜಯಪುರ ಜಿಲ್ಲಾ ಹಾಲುಮತ ಸಮಾಜದ ಅಧ್ಯಕ್ಷ ರಾಜು ಕಂಬಾಗಿ, ಪಕ್ಷದ ಅಧ್ಯಕ್ಷರಾಗಿ, ಉಪ ಮುಖ್ಯಮಂತ್ರಿಯಾಗಿ, ಸಚಿವರಾಗಿ ಈಶ್ವರಪ್ಪ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅವನ್ನು ಸಿಎಂ ಮಾಡಿದರೆ ರಾಜ್ಯವನ್ನು ಅಭಿವೃದ್ಧಿ ‍ಪಥದಲ್ಲಿ ಕೊಂಡೊಯ್ಯಲಿದ್ದಾರೆ. ಬಿಜೆಪಿ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಹಾಲುಮತ ಸಮಾಜದ ಮುಖಂಡರಾದ ರಾಜು ಬಿರಾದಾರ, ಚಂದ್ರಶೇಖರ ಬಗಲಿ, ಶಿಲ್ಪಾ ಕುದರಗೊಂಡ, ರವಿ ಕಿತ್ತೂರು, ಸಾಬು ಮಾಶ್ಯಾಳ, ಅಥಣಿ ಹನುಮಾಪುರದ ಅಮರೇಶ್ವರ ಮಹಾರಾಜ, ನಾಗರಾಳದ ಅಮೋಘಸಿದ್ಧೇಶ್ವರ ಮಠದ ಮಹಾರಾಜರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.