ಕೇಂದ್ರ ಅಧಿಸೂಚನೆ ಹೊರಡಿಸಲಿ: ಡಿ.ಕೆ. ಶಿವಕುಮಾರ್
ವಿಜಯಪುರ: ‘ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 524 ಮೀಟರ್‌ಗೆ ಹೆಚ್ಚಿಸಲು ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದೇವೆ. ಇದಕ್ಕೆ ಅಗತ್ಯ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಲು ತೀರ್ಮಾನಿಸಿದ್ದೇವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ವಿಜಯಪುರ ಜಿಲ್ಲೆಯ ಕೊಲ್ಹಾರದಲ್ಲಿ ಶುಕ್ರವಾರ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾತನಾಡಿದ ಅವರು, ‘ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 524 ಮೀಟರ್‌ಗೆ ಎತ್ತರಿಸಲು ನಮ್ಮ ಸರ್ಕಾರ ಸಂಕಲ್ಪಿಸಿದೆ. ಈ ವಿಷಯದಲ್ಲಿ ಶಾಸಕರ ಜೊತೆ ಚರ್ಚಿಸಿದ್ದು, ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಲು ತೀರ್ಮಾನಿಸಿದ್ದೇವೆ. ಈಚೆಗೆ ನಾನು ಹಾಗೂ ಮುಖ್ಯಮಂತ್ರಿ ಕೇಂದ್ರದ ಸಚಿವರನ್ನು ಭೇಟಿಯಾಗಿ, ಅಧಿಸೂಚನೆ ಹೊರಡಿಸಲು ಒತ್ತಡ ಹಾಕಿದ್ದೇವೆ. ಇದಕ್ಕಾಗಿ ಕೇಂದ್ರ ಸಚಿವರು ಸಭೆ ಕರೆದಿದ್ದರು. ಆದರೆ, ಅದು ಮುಂದೂಡಲ್ಪಟ್ಟಿದೆ’ ಎಂದರು.
‘ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವುದು ಈ ಸರ್ಕಾರದ ಸಂಕಲ್ಪ. ಇದನ್ನು ರಾಷ್ಟ್ರೀಯ ಯೋಜನೆ ಮಾಡಬೇಕು ಎಂದು ನಮ್ಮ ಸರ್ಕಾರ ಕೇಂದ್ರಕ್ಕೆ ಒತ್ತಡ ಹಾಕುತ್ತಿದೆ’ ಎಂದು ಹೇಳಿದರು.
ಅಧಿಸೂಚನೆ ಹೊರಡಿಸಲಾಗದು: ಕಾರಜೋಳ
ವಿಜಯಪುರ: ‘ಕೃಷ್ಣಾ ನದಿ ನೀರು ಹಂಚಿಕೆ ವಿವಾದದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆಗೆ ಬಾಕಿ ಇದೆ. ಅಂತಿಮ ತೀರ್ಪು ಬಾರದೇ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಲು ಆಗದು’ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
‘ರಾಜ್ಯ ಸರ್ಕಾರಕ್ಕೆ ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ. ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ವಿವಾದ ಬಗೆಹರಿಸಿಕೊಳ್ಳಲು ಯಾವುದೇ ಪ್ರಯತ್ನ ನಡೆಸಿಲ್ಲ. ಕುಂಟು ನೆಪ ಹೇಳುವುದನ್ನು ರಾಜ್ಯ ಸರ್ಕಾರ ಬಿಡಬೇಕು’ ಎಂದರು.
‘ಆಲಮಟ್ಟಿ ಜಲಾಶಯದ ಎತ್ತರವನ್ನು ಹಂತ ಹಂತವಾಗಿ ಏರಿಸುವುದು ಸರಿಯಲ್ಲ. ಸುಪ್ರೀಂ ಕೋರ್ಟ್ ತೀರ್ಪು ಬಂದ ತಕ್ಷಣವೇ ಒಮ್ಮೆಲೇ 524 ಮೀಟರ್‌ಗೆ ಎತ್ತರಿಸಬೇಕು. ಇದರಿಂದ ರಾಜ್ಯಕ್ಕೆ 130 ಟಿಎಂಸಿ ಅಡಿ ನೀರು ಮತ್ತು 15 ಲಕ್ಷ ಹೆಕ್ಟೇರ್‌ಗೆ ನೀರು ಲಭಿಸಲಿದೆ’ ಎಂದರು.
‘ಕೃಷ್ಣಾ ನದಿ ನೀರು ಹಂಚಿಕೆ ಸಂಬಂಧಿಸಿದಂತೆ ಅಂತರರಾಜ್ಯಗಳ ನಡುವೆ ವಿವಾದ ಇರುವ ಕಾರಣ ಕೇಂದ್ರ ಸರ್ಕಾರವು ಕೃಷ್ಣ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸಬಾರದು. ವಿವಾದ ಇತ್ಯರ್ಥದ ಬಳಿಕ ಕೇಂದ್ರದಿಂದ ಯೋಜನೆಗೆ ಹಣಕಾಸು ನೆರವು ಕೇಳಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.