ADVERTISEMENT

ಪ್ರವಾದಿಗೆ ಅವಮಾನ ಮಾಡಿರುವ ಯತ್ನಾಳಗೆ ಏ.15 ಅಂತಿಮ ದಿನ: ಬೆದರಿಕೆ ಸಂದೇಶ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 13:24 IST
Last Updated 11 ಏಪ್ರಿಲ್ 2025, 13:24 IST
   

ವಿಜಯಪುರ: ‘ಮಹಮ್ಮದ್‌ ಪೈಗಂಬರ್‌ ಅವರಿಗೆ ಅವಮಾನ ಮಾಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ಏಪ್ರಿಲ್‌ 15 ಅಂತಿಮ ದಿನ’ ಎಂಬ ಸಂದೇಶವುಳ್ಳ ಆಡಿಯೊವೊಂದು ಶುಕ್ರವಾರ ಸಾಮಾಜಿಕ ಜಾಲತಾಣ (ವಾಟ್ಸ್‌ ಆ್ಯಪ್‌)ದಲ್ಲಿ ಹರಿದಾಡಿದೆ.

ಅನಾಮಿಕ ವ್ಯಕ್ತಿಯೊಬ್ಬರು ಉರ್ದುವಿನಲ್ಲಿ ಈ ಸಂದೇಶವನ್ನು ಹರಿಬಿಟ್ಟಿದ್ದು, ‘ವಿಜಯಪುರ ನಗರದ ಆಲಂಗೀರ್‌ ಸಭಾಂಗಣದಲ್ಲಿ ಎಂಎಂಸಿ ಸಭೆ ನಡೆದಿದ್ದು, ಮುಸ್ಲಿಂ ಸಮಾಜದ ಹಿರಿಯರೆಲ್ಲರೂ ಸೇರಿ ಯತ್ನಾಳ ಬಂಧನಕ್ಕೆ ಆಗ್ರಹಿಸಿ ಏಪ್ರಿಲ್‌ 15ರಂದು ವಿಜಯಪುರ ಬಂದ್‌ ನಡೆಸಲು ನಿರ್ಧರಿಸಿದ್ದೇವೆ. ಅಂದು ಒಂದು ಲಕ್ಷಕ್ಕೂ ಅಧಿಕ ಜನ ಸೇರಲಿದ್ದೇವೆ‘ ಎಂದು ಆಡಿಯೊದಲ್ಲಿ ತಿಳಿಸಲಾಗಿದೆ.

‘ಅಂಬೇಡ್ಕರ್‌ ವೃತ್ತದಿಂದ ರ‍್ಯಾಲಿ ಆರಂಭಿಸಿ, ಯತ್ನಾಳ ಮನೆಗೆ ಮುತ್ತಿಗೆ ಹಾಕಲಿದ್ದೇವೆ, ಅಂದು ಯತ್ನಾಳಗೆ ಅಂತಿಮ ದಿನವಾಗಲಿದೆ, ಮುಸ್ಲಿಮರು ಸಜ್ಜಾಗಿದ್ದೇವೆ’ ಎಂದು ಎಚ್ಚರಿಕೆ ನೀಡಲಾಗಿದೆ. 

ADVERTISEMENT

ಭದ್ರತೆಗೆ ಮನವಿ:

ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಸಂದೇಶ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಯತ್ನಾಳ ಅವರ ಬೆಂಬಲಿಗ ಗಿರೀಶ ಭಂಡಾರಕರ್‌ ಎಂಬುವವರು, ಯತ್ನಾಳ ಅವರಿಗೆ ಕೇಂದ್ರ ಸರ್ಕಾರ ‘ವೈ ಪ್ಲಸ್‌ ಕೆಟಗರಿ’ ಭದ್ರತೆ ಒದಗಿಸುವಂತೆ ಕೋರಿ ಪ್ರಧಾನಿ ಮೋದಿ ಅವರಿಗೆ ಇ–ಮೇಲ್‌ ಮೂಲಕ ಮನವಿ ಮಾಡಿದ್ದಾರೆ.

ಬೆದರಿಕೆ ಸಂದೇಶ ನಕಲಿ:

‘ವಿಜಯಪುರ ನಗರದಲ್ಲಿ ಯತ್ನಾಳ ವಿರುದ್ಧವಾಗಿ ಮುಸ್ಲಿಂ ಸಮಾಜದಿಂದ ಇದುವರೆಗೂ ಯಾವುದೇ ಸಭೆ ನಡೆದಿಲ್ಲ, ಏಪ್ರಿಲ್‌ 15ರಂದು ವಿಜಯಪುರ ಬಂದ್‌ಗೆ ಕರೆ ನೀಡಿಲ್ಲ, ಸಮಾಜದ ಹೆಸರು ಕೆಡಿಸಲು ಯತ್ನಾಳ ಬೆಂಬಲಿಗರು ನಕಲಿ ಆಡಿಯೊ ಸಂದೇಶ ಹರಿಬಿಟ್ಟಿದ್ದಾರೆ. ಈ ಬಗ್ಗೆ ತನಿಖೆಯಾಗಲಿ’ ಎಂದು ಮುಸ್ಲಿಂ ಸಮಾಜದ ಮುಖಂಡ, ವಕೀಲ ಆಸೀಫ್‌ವುಲ್ಲಾ ಖಾದ್ರಿ ತಿಳಿಸಿದ್ದಾರೆ.

ಎಸ್‌ಪಿ ಸ್ಪಷ್ಟನೆ:
‘ಯಾರೋ ಕಿಡಿಗೇಡಿಗಳು ಮೂರು ದಿನಗಳ ಹಿಂದೆ ಸುಳ್ಳು ಸುದ್ದಿ ಇರುವ ಆಡಿಯೊ ಹರಿಬಿಟ್ಟಿರುವುದು ಗಮನಕ್ಕೆ ಬಂದಿದೆ. ಇದಕ್ಕೆ ಯಾವುದೇ ಅಧಿಕೃತತೆ ಇಲ್ಲ. ಹೀಗಾಗಿ ಯಾರೂ ಈ ಸಂಬಂಧ ದೂರು ನೀಡಿಲ್ಲ, ಏ.15ರಂದು ವಿಜಯಪುರ ಬಂದ್‌ಗೆ ಕರೆ ನೀಡಿಲ್ಲ ಎಂದು ಈಗಾಗಲೇ ಮುಸ್ಲಿಂ ಮುಖಂಡರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಇದು ಕಿಡಿಗೇಡಿಗಳ ಕೃತ್ಯವಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.