
ಬಸವಜಯ ಮೃತ್ಯುಂಜಯ ಸ್ವಾಮೀಜಿ
ವಿಜಯಪುರ: ‘ಬೆಳಗಾವಿಯ ಸುವರ್ಣಸೌಧದ ಬಳಿ ಕಳೆದ ವರ್ಷ ಪಂಚಮಸಾಲಿ ಮೀಸಲಾತಿ ಹೋರಾಟಗಾರ ಮೇಲೆ ನಡೆದ ಲಾಠಿ ಚಾರ್ಜ್ ಪ್ರಕರಣ ಖಂಡಿಸಿ ಡಿ.10ರಂದು ಲಿಂಗಾಯತರ ಮೇಲಿನ ದೌರ್ಜನ್ಯ ದಿನವನ್ನು ಆಚರಿಸಲಾ ಗುವುದು’ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ವರ್ಷ ಬೆಳಗಾವಿಯ ಅಧಿವೇಶನ ಸಂದರ್ಭದಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟಗಾರ ಮೇಲೆ ಸರ್ಕಾರ ಪೊಲೀಸರ ಮೂಲಕ ಲಾಠಿ ಚಾರ್ಜ್ ಮಾಡಿಸಿತ್ತು. ಇದರಿಂದ ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದು, ನೋವುಂಟಾಗಿದೆ. ಈ ಘಟನೆ ನಡೆದು ಡಿ.10ಕ್ಕೆ ಒಂದು ವರ್ಷವಾಗಲಿದೆ’ ಎಂದರು.
‘ಹೀಗಾಗಿ ಹಲ್ಲೆ ಘಟನೆ ಖಂಡಿಸಿ ಬೆಳಗಾವಿಯಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ಲಿಂಗಾಯತರ ಮೇಲಿನ ದೌರ್ಜನ್ಯ ದಿನ ಆಚರಿಸುತ್ತೇವೆ. ಅಂದು ಕೈ ಹಾಗೂ ಬಾಯಿಗೆ ಕಪ್ಪುಬಟ್ಟೆ ಕಟ್ಟಿಕೊಂಡು ಬೆಳಗಾವಿಯ ಗಾಂಧಿ ಭವನದಿಂದ ಸುವರ್ಣಸೌಧದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತೇವೆ’ ಎಂದರು.
‘ಜಿಲ್ಲಾಡಳಿತ ಅವಕಾಶ ಕೊಡುವ ಸ್ಥಳದವರೆಗೆ ತೆರಳಿ, ಅಲ್ಲಿಯೇ ಸಂಜೆಯವರೆಗೂ ಮೌನ ಸತ್ಯಾಗ್ರಹ ಮಾಡುತ್ತೇವೆ. ಇದರಲ್ಲಿ ಸಾವಿರಾರು ಜನರು ಸೇರಲಿದ್ದಾರೆ. ಈ ಮೂಲಕ ನ್ಯಾಯಯುತವಾಗಿ ನಮ್ಮ ಹಕ್ಕು ಪಡೆಯುವ ಸಂದೇಶವನ್ನು ರವಾನಿಸುತ್ತೇವೆ. ಅಲ್ಲದೇ, ಎಲ್ಲ ಲಿಂಗಾಯತ ಶಾಸಕರು ಸಹ ಅಂದು ಕಪ್ಪುಬಟ್ಟೆ ಕಟ್ಟಿಕೊಂಡರೆ, ಸಮುದಾಯದ ನಂಬಿಕೆ ಉಳಿಸಿಕೊಂಡಂ ತಾಗುತ್ತದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.