
ಬಸವನ ಬಾಗೇವಾಡಿ ತಾಲ್ಲೂಕಿನ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಪ್ಪ ಯರಝರಿ ಮನೆ, ಫಾರ್ಮ್ ಹೌಸ್, ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪತ್ತೆ ಹಚ್ಚಿರುವ ಚಿನ್ನ, ಬೆಳ್ಳಿ ವಸ್ತು ಮತ್ತು ನಗದು
ವಿಜಯಪುರ: ಬಸವನ ಬಾಗೇವಾಡಿ ತಾಲ್ಲೂಕಿನ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಪ್ಪ ಯರಝರಿ ಮನೆ, ಫಾರ್ಮ್ ಹೌಸ್, ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ₹2.5 ಕೋಟಿ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವ ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕೋರ್ಟ್ ವಾರೆಂಟ್ ಪಡೆದು ಮಂಗಳವಾರ ಅಧಿಕಾರಿಗೆ ಸಂಬಂಧಿಸಿದ ಬಸವನ ಬಾಗೇವಾಡಿ ತಾಲ್ಲೂಕಿನ ಕಣಕಾಲ ಗ್ರಾಮದ ಫಾರ್ಮ್ ಹೌಸ್, ಮುದ್ದೇಬಿಹಾಳದಲ್ಲಿರುವ ಮಾವನ ಮನೆ ಮತ್ತು ಕಚೇರಿ. ವಿಜಯಪುರದ ನವರಸಪುರದಲ್ಲಿನ ಮನೆ, ಬ್ಯಾಂಕ್ ಲಾಕರ್‌ನಲ್ಲಿ ಶೋಧ ನಡೆಸಿದಾಗ ₹29.42 ಲಕ್ಷ ನಗದು, ಬೆಳ್ಳಿ, ಬಂಗಾರದ ಆಭರಣ, ವಾಹನಗಳು ಮತ್ತು ಇತರೆ ಆಸ್ತಿಗಳಿಗೆ ಸಂಬಂಧಿಸಿದ ದಾಖಲಾತಿ ಸೇರಿದಂತೆ ಅಂದಾಜು ₹2.5 ಕೋಟಿಗೂ ಹೆಚ್ಚಿನ ಅಕ್ರಮ ಆಸ್ತಿ ಗಳಿಸಿರುವುದು ಪತ್ತೆಯಾಗಿದೆ ಎಂದು ವಿಜಯಪುರ ಲೋಕಾಯುಕ್ತ ಅಧೀಕ್ಷಕ ಟಿ.ಮಲ್ಲೇಶ್ ತಿಳಿಸಿದ್ದಾರೆ.
ಬಾಗಲಕೋಟೆ ವರದಿ: ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಎಸ್.ಎಂ. ಕಾಂಬಳೆ ಅವರ ಕಚೇರಿ, ಗದಗ ಜಿಲ್ಲೆ ನರಗುಂದದಲ್ಲಿರುವ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಅಂದಾಜು ₹1.07 ಕೋಟಿ ಅಕ್ರಮ ಆಸ್ತಿ ಗಳಿಸಿರುವುದು ಪತ್ತೆ ಹಚ್ಚಿದ್ದಾರೆ.
ನರಗುಂದದ ರಾಣಿ ಚನ್ನಮ್ಮನಗರದಲ್ಲಿನ ಮನೆ, ಅವರ ಸಹೋದರ ಸುರೇಶ ಕಾಂಬಳೆ ಅವರ ಮನೆ ಮೇಲೆ ದಾಳಿ ಮಾಡಿದಾಗ 278 ಗ್ರಾಂ ಚಿನ್ನ, 494 ಗ್ರಾಂ ಬೆಳ್ಳಿ, ದ್ವಿಚಕ್ರ ವಾಹನ, 15 ನಿವೇಶನ, ಮೂರು ಮನೆಗಳ ದಾಖಲಾತಿ ಪತ್ತೆಯಾಗಿವೆ.
ಕಾರವಾರ ವರದಿ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಕೋಲಸಿರ್ಸಿ ಗ್ರಾಮದ ಕೋಲಸಿರ್ಸಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರ ಸಂಘದ ಕಾರ್ಯದರ್ಶಿ ಮಾರುತಿ ಯಶವಂತ ಸಾಳ್ವೆ ಅವರ ಹಳಿಯಾಳದ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
‘ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ದೂರಿನ ಹಿನ್ನೆಲೆಯಲ್ಲಿ ಮಾರುತಿ ಅವರ ಮನೆ, ಸಂಘದ ಕಚೇರಿ, ಶಾಪಿಂಗ್ ಕಾಂಪ್ಲೆಕ್ಸ್ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದ್ದು, ಆಸ್ತಿಗೆ ಸಂಬಂಧಿಸಿದ ಹಲವು ದಾಖಲೆ ವಶಕ್ಕೆ ಪಡೆಯಲಾಗಿದೆ’ ಎಂದು ಲೋಕಾಯುಕ್ತ ಎಸ್‌ಪಿ ಕುಮಾರಚಂದ್ರ ತಿಳಿಸಿದ್ದಾರೆ.
ಆಸ್ತಿಯ ಮೊತ್ತ ತಿಳಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.