ವಿಜಯಪುರ: ‘ಅಸಮಾನತೆ, ಕಂದಾಚಾರಗಳಂತಹ ಆಚರಣೆಗಳಿಂದ ನರಳುತ್ತಿದ್ದ ಜಗತ್ತಿಗೆ ಜ್ಞಾನದ ಬೆಳಕಾಗಿ, ಶಾಂತಿ, ಸಮಾನತೆಯ ದಾರಿ ತೋರಿದವರು ಭಗವಾನ್ ಬುದ್ಧರು’ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ‘ಭಗವಾನ್ ಬುದ್ಧ ಜಯಂತಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಬುದ್ಧ-ಬಸವ-ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಅನುಸರಣೆ ಮಾಡಬೇಕು. ಜಗತ್ತಿಗೆ ಶಾಂತಿ ಬೋಧಿಸಿದ ಬುದ್ಧನ ಆದರ್ಶ, ವಿಚಾರಗಳ ಬಗ್ಗೆ ಅರಿವು ಹೊಂದಬೇಕು. ಬುದ್ಧ-ಬಸವ-ಅಂಬೇಡ್ಕರ್ ಅವರ ಆದರ್ಶಗಳು ಇಡೀ ಜಗತ್ತಿಗೆ ಸಾರ್ವಕಾಲಿಕವಾಗಿವೆ’ ಎಂದರು.
‘ಭಗವಾನ ಬುದ್ಧ ನೆಮ್ಮದಿ ಜೀವನಕ್ಕೆ ಮೂಲಗಳಾದ ಸತ್ಯ ಮತ್ತು ಅಹಿಂಸೆಗಳಂತಹ ಎಂಟು ಸನ್ಮಾರ್ಗಗಳನ್ನು ಪ್ರಪಂಚಕ್ಕೆ ಸಾರಿದ್ದಾರೆ. ಅವರ ಅಷ್ಟಾಂಗ ಮಾರ್ಗಗಳನ್ನು ಅನುಸರಿಸುವ ಅಗತ್ಯತೆ ಇಂದಿನ ಪೀಳಿಗೆಗಳಿದೆ’ ಎಂದರು.
ಸಂಶೋಧಕಿ ಅನ್ನಪೂರ್ಣ ಬೆಳ್ಳೆನವರ ಮಾತನಾಡಿ, ‘ಬುದ್ಧನ ಜೀವನ ಚರಿತ್ರೆಯ ಕುರಿತು ವಿಸ್ತಾರವಾಗಿ ಮಾಹಿತಿ ನೀಡಿ, ಅನೇಕ ಶಾಂತಿ ತತ್ವಗಳನ್ನು ಬುದ್ಧ ನೀಡಿದ್ದಾರೆ. ಅವರು ನೀಡಿದ ಪಂಚಶೀಲ ತತ್ವಗಳನ್ನು ಪಾಲಿಸುವ ಮೂಲಕ ಜೀವನ ಸಾರ್ಥಕತೆ ಹೊಂದಬೇಕು’ ಎಂದರು.
ವಕೀಲರಾದ ಕೆ.ಎಫ್. ಅಂಕಲಗಿ ಮಾತನಾಡಿ, ‘ಎಲ್ಲ ವೈಭೋಗವನ್ನು ತ್ಯಜಿಸಿ ಜ್ಞಾನ ಮಾರ್ಗವನ್ನು ತೋರಿಸಿದ ಭಗವಾನ್ ಬುದ್ಧ, ಬಾಲ್ಯದಲ್ಲಿಯೇ ತಮ್ಮ ಅರಮನೆಯ ಸೇವಕರನ್ನು ಬಂಧುಗಳಾಗಿ ಕಾಣುವ ಗುಣ ಹೊಂದುವ ಮೂಲಕ ಜನಾನುರಾಗಿಯಾಗಿದ್ದರು’ ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ್ ಮಾರಿಹಾಳ, ಮಹಾನಗರ ಪಾಲಿಕೆಯ ಉಪ ಆಯುಕ್ತ ನಾರಾಯಣಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಬುದ್ಧ ನಿರ್ಮಾಣ ಸಮಿತಿಯ ಅಧ್ಯಕ್ಷ ರಾಜಶೇಖರ ಎಡಹಳ್ಳಿ, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಮುಖಂಡರು ಇದ್ದರು.
ಮೆರವಣಿಗೆ: ನಗರದ ಬುದ್ಧ ವಿಹಾರದಲ್ಲಿ ಭಗವಾನ್ ಬುದ್ಧ ಭಾವಚಿತ್ರ ಮೆರವಣಿಗೆಗೆ ವಿಜಯಪುರ ತಹಶೀಲ್ದಾರ್ ಪ್ರಶಾಂತ ಚನಗೊಂಡ ಹಾಗೂ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ನಿಂಗಪ್ಪ ಗೋಠೆ ಚಾಲನೆ ನೀಡಿದರು. ಮೆರವಣಿಗೆಯು ವಿವಿಧ ಕಲಾ ತಂಡಗಳೊಂದಿಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದವರೆಗೆ ಸಾಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.