ವಿಜಯಪುರ:‘ಕಾಂಗ್ರೆಸ್ ಪಕ್ಷದಲ್ಲಿ ಯಾವ ಕ್ರಾಂತಿಯೂ ನಡೆಯಲ್ಲ, ನಮ್ಮದು ಸ್ವಾತಂತ್ರ್ಯ ಕ್ರಾಂತಿಯಲ್ಲಿ ಭಾಗವಹಿಸಿರುವ ಪಕ್ಷ ಮಾತ್ರ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಸಚಿವ ಕೆ.ಎನ್. ರಾಜಣ್ಣ ಅವರ ‘ಸೆಪ್ಟೆಂಬರ್ ಕ್ರಾಂತಿ’ ಹೇಳಿಕೆ ಕುರಿತು ನಗರದಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್‌ನಲ್ಲಿ ಯಾವುದೇ ಕ್ರಾಂತಿ ಆಗುವುದಿದ್ದರೂ ಅದು ಹೈಕಮಾಂಡ್, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು ಸೇರಿ ಮಾಡುತ್ತಾರೆ' ಎಂದರು.
‘ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಚಿವ ಸಂಪುಟ ಪುನರ್ ರಚನೆ ಕುರಿತು ಸದ್ಯ ಯಾವುದೇ ಚರ್ಚೆ ನಡೆದಿಲ್ಲ. ಈ ಕುರಿತು ಹೈಕಮಾಂಡ್ ತೀರ್ಮಾನಿಸಲಿದೆ’ ಎಂದರು.
‘ಸಚಿವ ರಾಜಣ್ಣ ಹಿರಿಯರಿದ್ದಾರೆ. ಯಾವ ಅರ್ಥದಲ್ಲಿ ಸೆಪ್ಟೆಂಬರ್ ಕ್ರಾಂತಿ ಎಂದಿದ್ದಾರೋ ಗೊತ್ತಿಲ್ಲ. ಬಹುಷ್ಯ ಬಿಜೆಪಿ, ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರ್ಪಡೆ ಆಗಬಹುದೇನೋ, ಕಾಂಗ್ರೆಸ್‌ನಲ್ಲಿ ಈಗ ಯಾವುದೇ ಕ್ರಾಂತಿಯೂ ಇಲ್ಲ’ ಎಂದರು.
ಆಕಾಂಕ್ಷಿಯಲ್ಲ:
‘ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ, ಕೇಳಿಯೂ ಇಲ್ಲ, ಪಕ್ಷ ಜವಾಬ್ದಾರಿ ಕೊಟ್ಟರೆ ವಿಚಾರ ಮಾಡೋಣ’ ಎಂದರು.
‘ಕ್ರಾಂತಿ ಆಗುವಂಥದ್ದು ಏನೂ ಇಲ್ಲ’
ಮಡಿಕೇರಿ: ‘ಸೆಪ್ಟೆಂಬರ್‌ನಲ್ಲಿ ಕ್ರಾಂತಿ ಆಗುವಂಥದ್ದು ಏನೂ ಇಲ್ಲ. ಸಚಿವ ಕೆ.ಎನ್.ರಾಜಣ್ಣ ಯಾವ ಕಾರಣಕ್ಕೆ, ಯಾವ ಸಂದರ್ಭದಲ್ಲಿ ಈ ಮಾತನ್ನು ಹೇಳಿದರು ಎಂಬುದು ಗೊತ್ತಿಲ್ಲ’ ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್. ಬೋಸರಾಜು ತಿಳಿಸಿದರು.
‘ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಇದೆ, ಮುಖ್ಯಮಂತ್ರಿ ಇದ್ದಾರೆ, ಪಕ್ಷದ ಅಧ್ಯಕ್ಷರೂ ಇದ್ದಾರೆ. ನಮ್ಮ ಪಕ್ಷದ್ದು ಹೈಕಮಾಂಡ್ ಹೇಳಿದಂತೆ ನಡೆಯುವ ಪದ್ದತಿ. ಪಕ್ಷಕ್ಕೆ ಯಾವುದೇ ತೊಂದರೆ ಯಾಗುವ ಲಕ್ಷಣಗಳಿಲ್ಲ’ ಎಂದು ಶುಕ್ರವಾರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.