
ಸಿಂದಗಿ ಪಟ್ಟಣದ ಬಸವನಗರದ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲಾ ಆವರಣದಲ್ಲಿ ಬುಧವಾರ ಎಂ.ಸಿ.ಮನಗೂಳಿ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ 52 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳ ವಿತರಣಾ ಸಮಾರಂಭವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪನವರು ಉದ್ಘಾಟಿಸಿ ಮಾತನಾಡಿದರು.
ಕೋರಳ್ಳಿ ಗ್ರಾಮದಲ್ಲಿ ಸರ್ಕಾರಿ ಪಿಯು ಕಾಲೇಜು | 900 ಕರ್ನಾಟಕ ಪಬ್ಲಿಕ್ ಸ್ಕೂಲ್ ಶೀಘ್ರ | ಶಿಕ್ಷಕರ ನೇಮಕಾತಿ ಶೀಘ್ರ
ಸಿಂದಗಿ: ‘ಕ್ಷೇತ್ರದ 314 ಶಾಲೆಗಳಿಗೆ ಶುದ್ಧ ನೀರಿನ ಘಟಕ ನೀಡಲು ಮುಂದಾಗಿ ಸದ್ಯ 52 ಶಾಲೆಗಳಿಗೆ ವಿತರಣೆ ಮಾಡುತ್ತಿರುವ ಈ ಸೇವಾ ಕಾರ್ಯ ನನಗೆ ಪ್ರೇರಣೆ ನೀಡಿದೆ. ನನ್ನ ಸೊರಬ ಕ್ಷೇತ್ರದಲ್ಲಿ ನನ್ನ ತಂದೆ ಎಸ್.ಬಂಗಾರಪ್ಪನವರ ಹೆಸರಿನಲ್ಲಿರುವ ಪ್ರತಿಷ್ಠಾನದಿಂದ ಈ ಕಾರ್ಯ ಮಾಡಲಾಗುವುದು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ಪಟ್ಟಣದ ಬಸವನಗರದ ಹೆಣ್ಣು ಮಕ್ಕಳ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಬುಧವಾರ ಎಂ.ಸಿ.ಮನಗೂಳಿ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
‘ಆಧುನಿಕ ಭಗೀರಥ ಎಂದೇ ಚಿರಪರಿಚಿತರಾದ ದಿ.ಎಂ.ಸಿ.ಮನಗೂಳಿಯವರ ಆದರ್ಶ ಅವರ ಮಗ ಶಾಸಕ ಅಶೋಕ ಮನಗೂಳಿ ಮುಂದುವರೆಸಿಕೊಂಡು ಹೋಗಲು ಅವರ ತಂದೆಯವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ ಸಾಮಾಜಿಕ ಸೇವಾ ಕಾರ್ಯ ಮಾಡುತ್ತಿದ್ದಾರೆ. ಈಗ ಸರ್ಕಾರಿ ಶಾಲಾ ಮಕ್ಕಳು ಶುದ್ಧ ನೀರು ಕುಡಿಯಬೇಕು ಎಂಬ ಸದುದ್ದೇಶದಿಂದ ಸರ್ಕಾರ ಮಾಡಲಾಗದ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಶಿಕ್ಷಣ ಇಲಾಖೆ ದೊಡ್ಡದಾದ ಇಲಾಖೆ. ಹೀಗಾಗಿ ಯಾರೊಬ್ಬರೂ ಈ ಇಲಾಖೆ ಸಚಿವ ಸ್ಥಾನ ಬೇಕು ಅಂತಾ ಪಡೆದುಕೊಳ್ಳುವದಿಲ್ಲ. ನನಗೆ ಮೊದಲು ಬೇರೆ ಇಲಾಖೆ ಸಚಿವ ಸ್ಥಾನ ಕೊಟ್ಟಿದ್ದರು. ಆದರೆ ನಮ್ಮ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ ಮತ್ತು ಪಕ್ಷದ ಹಿರಿಯರಾದ ಸುರ್ಜೆವಾಲಾ ಅವರು ನನಗೆ ಶಿಕ್ಷಣ ಇಲಾಖೆ ಸಚಿವ ಸ್ಥಾನ ಕೊಡಿಸಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈ ಇಲಾಖೆ ಯೋಗ್ಯತೆ, ನಾಯಕತ್ವ ಬೆಳೆಸುತ್ತದೆ ಶ್ರದ್ಧೆಯಿಂದ ಮಾಡಲು ಹಾರೈಸಿದರು.
ಪ್ರತಿಷ್ಠಾನದ ಅಧ್ಯಕ್ಷ, ಶಾಸಕ ಅಶೋಕ ಮನಗೂಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆಲಮೇಲ ಗುರುಸಂಸ್ಥಾನಹಿರೇಮಠದ ಶ್ರೀಗಳು, ಸಿಂದಗಿ ಊರನಹಿರಿಯಮಠದ ಶ್ರೀಗಳು, ಅರಕೇರಿ ಶ್ರೀಗಳು ಸಾನಿಧ್ಯ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ಅರವಿಂದ ಮನಗೂಳಿ ಅಧ್ಯಕ್ಷತೆ ವಹಿಸಿದ್ದರು.
ಎಂ.ಸಿ.ಮನಗೂಳಿಯವರ ಪತ್ನಿ ಸಿದ್ದಮ್ಮಗೌಡತಿ ಮನಗೂಳಿ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ, ಶಿಕ್ಷಣ ಇಲಾಖೆ ಅಧಿಕಾರಿಗಳು, ಪ್ರತಿಷ್ಠಾನದ ಪದಾಧಿಕಾರಿಗಳು ಭಾಗವಹಿಸಿದ್ದರು.
‘ಶಿಕ್ಷಣಕ್ಕಾಗಿ ₹ 45 ಸಾವಿರ ಕೋಟಿ ಖರ್ಚು’
ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆ ಇವೆ. ಇಂಥ ಪರಿಸ್ಥಿತಿಯಲ್ಲಿ ಎರಡೂವರೆ ವರ್ಷದಲ್ಲಿ ಶೇ 80ರಷ್ಟು ಕೆಲಸ ಮಾಡಿರುವೆ ಎಂಬ ಆತ್ಮತೃಪ್ತಿ ನನಗಿದೆ. ಮಕ್ಕಳನ್ನು ದೇವರ ಸ್ಥಾನದಲ್ಲಿ ಕಾಣುವ ಮೂಲಕ ಶೈಕ್ಷಣಿಕ ಏಳ್ಗೆಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವೆ’ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಶಿಕ್ಷಣಕ್ಕಾಗಿ ಬಜೆಟ್‌ನಲ್ಲಿ ₹ 45 ಸಾವಿರ ಕೋಟಿ ಖರ್ಚು ಮಾಡಲಾಗುವುದು. ಮುಂಬರುವ ದಿನಗಳಲ್ಲಿ ಏಕಕಾಲಕ್ಕೆ 900 ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾರಂಭಿಸಲಾಗುವುದು. ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರದಿಂದ ಪ್ರಾಥಮಿಕ ಪ್ರೌಢಶಾಲೆಗಳಿಗೆ ಉಚಿತ ನೋಟಬುಕ್ ಪಿಯು ಹಂತಕ್ಕೆ ಉಚಿತ ಪಠ್ಯಪುಸ್ತಕ ನೋಟಬುಕ್ ಹಾಗೂ ಮಧ್ಯಾಹ್ನ ಬಿಸಿ ಊಟ ಪ್ರಾರಂಭಿಸಲಾಗುವುದು ಎಂದು ಪ್ರಕಟಿಸಿದರು.
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಹೀಗಾಗಿ ರಾಜ್ಯದಲ್ಲಿ 10800 ಸರ್ಕಾರಿ ಶಾಲೆಗಳ ಶಿಕ್ಷಕರು 6 ಸಾವಿರ ಅನುದಾನಿತ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು. 51 ಸಾವಿರ ಅತಿಥಿ ಶಿಕ್ಷಕರನ್ನು ಏಕಕಾಲದಲ್ಲಿ ನೇಮಕ ಮಾಡಿರುವುದು ಇತಿಹಾಸದಲ್ಲಿ ಮೊದಲು. ಶೀಘ್ರದಲ್ಲಿಯೇ 11 ಸಾವಿರ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.