ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಗುರುವಾರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮದಲ್ಲಿ ಕರಪತ್ರ ಬಿಡುಗಡೆ ಮಾಡಿದರು
– ಪ್ರಜಾವಾಣಿ ಚಿತ್ರ
ವಿಜಯಪುರ: ಸಾರ್ವಜನಿಕ ಸುರಕ್ಷತೆಗಾಗಿ ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ವಿನೂತನವಾಗಿ ಆರಂಭಿಸಿರುವ ‘ಮನೆ ಮನೆಗೆ ಪೊಲೀಸ್’ ಉಪಕ್ರಮಕ್ಕೆ ಉತ್ತರ ವಲಯ ಐಜಿಪಿ ಚೇತನ್ ಸಿಂಗ್ ರಾಥೋಡ್ ಚಾಲನೆ ನೀಡಿದರು.
ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಗುರುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಪೊಲೀಸ್ ಠಾಣೆಗಳ ‘ಇ–ಬೀಟ್’ ವ್ಯವಸ್ಥೆ ಅನ್ವಯ ವಿಂಗಡಿಸಲಾದ ಪ್ರದೇಶದಲ್ಲಿರುವ ಮನೆಗಳ ಪಟ್ಟಿ ಮಾಡಿಕೊಂಡು ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು ಭೇಟಿ ನೀಡಿ, ಆಹವಾಲು ಆಲಿಸಲಿದ್ದಾರೆ ಎಂದರು.
ಮನೆ–ಮನೆಗೆ ಭೇಟಿ ನೀಡುವುದರಿಂದ ಅಪರಾಧ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ. ಜನರಲ್ಲಿ ಸುರಕ್ಷತಾ ಮನೋಭಾವ ಮೂಡಲಿದೆ. ಸೈಬರ್ ಅಪರಾಧಗಳ ಅರಿವು ಮೂಡಿಸಲಾಗುವುದು, ಪೊಲೀಸ್ ಇಲಾಖೆ ನೆರವು ಪಡೆಯುವ ವಿಧಾನ ಸೇರಿದಂತೆ ಇಲಾಖೆಯ ಸಮಗ್ರ ಸೇವೆಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಹೇಳಿದರು.
ಅಪರಾಧಗಳ ಸ್ವರೂಪ ಈಗ ಡಿಜಿಟಲ್ ರೂಪ ಪಡೆದಿದೆ, ಡಿಜಿಟಲ್ ಅರೆಸ್ಟ್ ಮೂಲಕ ಹೆದರಿಸಿ ಹಣ ಕೀಳುವ, ಮೋಸ ಮಾಡುವ ಕೃತ್ಯಗಳು ಹೆಚ್ಚಾಗಿವೆ. ಬಣ್ಣದ ಮಾತು ಹೇಳಿ ಅನೇಕ ರೀತಿಯಲ್ಲಿ ಮೋಸ ನಡೆಯುತ್ತಿದ್ದು, ಈ ಕುರಿತು ಪೊಲೀಸರು ಮನೆ–ಮನೆಗೆ ಭೇಟಿ ವೇಳೆ ಜಾಗೃತಿ ಮೂಡಿಸಲಿದ್ದಾರೆ ಎಂದರು.
ಈ ಹಿಂದೆ ದೂರುದಾರರು ಠಾಣೆಗೆ ಬಂದು ದೂರು ನೀಡಿದಾಗ ಅದನ್ನು ದಾಖಲಿಸಿ ಮುಂದಿನ ಕ್ರಮಕ್ಕೆ ಮುಂದಾಗುತ್ತಿದ್ದರು, ಈಗ ಪೊಲೀಸರು ಸಾರ್ವಜನಿಕರ ಮನೆಗೆ ಹೋಗಿ ಅಹವಾಲು ಆಲಿಸುವ ನಿಟ್ಟಿನಲ್ಲಿ ಪೊಲೀಸ್ ವ್ಯವಸ್ಥೆ ಸ್ನೇಹಮಯಿಯಾಗಿದೆ, ಪೊಲೀಸರು ಮನೆಗೆ ಬಂದಾಗ ಅವರೊಂದಿಗೆ ಆತ್ಮೀಯವಾಗಿ ಮಾತನಾಡಿ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಸಮಾಜದ ಸುರಕ್ಷತೆ ಹಾಗೂ ಸ್ವಾಸ್ಥ್ಯ ಕಾಪಾಡುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದೆ, ಸಮಾಜದಲ್ಲಿ ಆಗಬಹುದಾದ ಅಪರಾಧ ಪ್ರಕರಣಗಳನ್ನು ತಡೆಗಟ್ಟಲಿದ್ದಾರೆ ಎಂದರು.
ಜನಸಂಖ್ಯೆಗನುಗುಣವಾಗಿ ಪೊಲೀಸರ ಸಂಖ್ಯೆ ಕಡಿಮೆ ಇದೆ. ಕಾರಣ ಮಾಧ್ಯಮಗಳು, ಸಾರ್ವಜನಿಕರು ಪೊಲೀಸರ ಕಣ್ಣು ಹಾಗೂ ಕಿವಿಯಾಗಿ ಕಾರ್ಯನಿರ್ವಹಿಸುವ ಅಗತ್ಯ ಇದೆ ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮನಗೌಡ ಹಟ್ಟಿ, ಶಂಕರ ಮಾರಿಹಾಳ, ಡಿವೈಎಸ್‌ಪಿ ಬಸವರಾಜ ಯಲಿಗಾರ, ಟಿ.ಎಸ್. ಸುಲ್ಫಿ, ಮಲ್ಲಯ್ಯ ಮಠಪತಿ, ಸಿಪಿಐ ರವಿ ಯಡವಣ್ಣವರ, ಮುಖಂಡರಾದ ಸೈಯ್ಯದ್ ಜೈನುಲ್ಲಾಬುದ್ದೀನ್, ವಕೀಲ ಮೊಹಮ್ಮದ್ ಗೌಸ್ ಹವಾಲ್ದಾರ್, ಮುಖಂಡರಾದ ಸಿದ್ದು ರಾಯಣ್ಣವರ, ಅಡಿವೆಪ್ಪ ಸಾಲಗಲ್, ಪ್ರೇಮಾನಂದ ಬಿರಾದಾರ, ಶರಣು ಸಬರದ, ಅಶೋಕ ಹಂಚಲಿ, ಪಾಂಡು ಸಾಹುಕಾರ ದೊಡಮನಿ, ಇರ್ಫಾನ್ ಶೇಖ್, ವಿನೋದ ಮಣ್ಣೂರ ಉಪಸ್ಥಿತರಿದ್ದರು.
ಮನೆಮನೆಗೆ ಪೊಲೀಸ್ ಭೇಟಿ ಕಾರ್ಯಕ್ರಮ ಯಶಸ್ವಿಯಾಗಬೇಕು ಎಂದಾದರೆ ಸಾರ್ವಜನಿಕರ ಸಹಕಾರ ಸಹಭಾಗಿತ್ವ ಅವಶ್ಯಕ. ಕಾನೂನು ವ್ಯವಸ್ಥೆ ಕಾಪಾಡಲು ಅಪರಾಧ ತಡೆಗಟ್ಟಲು ಪೊಲೀಸರೊಂದಿಗೆ ಕೈಜೋಡಿಸಿಚೇತನ್ ಸಿಂಗ್ ರಾಥೋಡ್ ಐಜಿಪಿ ಉತ್ತರ ವಲಯ ಬೆಳಗಾವಿ
ಪ್ರಸ್ತುತ ಪೊಲೀಸ್ ವ್ಯವಸ್ಥೆಯು ‘ಪ್ರತಿಕ್ರಿಯೆ ಸೇವೆ’ ಅಂದರೆ ಸಾರ್ವಜನಿಕರು ನೀಡುವ ದೂರುಗಳ ಆಧಾರದ ಮೇಲೆ ಬಹುತೇಕ ಪ್ರತಿಕ್ರಿಯಿಸುತ್ತಿದ್ದೇವೆ. ಈ ವ್ಯವಸ್ಥೆಯನ್ನು ಇದೀಗ ‘ಸಕ್ರಿಯ ಸೇವೆ’ಯಾಗಿ ಪರಿವರ್ತಿಸಲಾಗುತ್ತಿದೆಲಕ್ಷ್ಮಣ ನಿಂಬರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.