ಇಂಡಿ: ‘ಬಂಗಾರ ಮತ್ತಿತರ ಎಲ್ಲ ವಸ್ತುಗಳ ಬೆಲೆ ಏರಿಕೆ, ಯುವಕ ಯುವತಿಯರು ಅತಿ ಕಡಿಮೆ ಸಂಬಳದಲ್ಲಿ ದುಡಿಯುತ್ತಿರುವುದು ಸೇರಿದಂತೆ ಹಲವಾರು ಸಮಸ್ಯೆಗಳಲ್ಲಿ ಸಿಲುಕಿರುವವರಿಗೆ ಸಾಮೂಹಿಕ ವಿವಾಹವು ಅನುಕೂಲವಾಗಿದೆ’ ಎಂದು ಯರನಾಳ ಗ್ರಾಮದ ಸಂಗನಬಸವ ಶ್ರೀ ಹೇಳಿದರು.
ತಾಲ್ಲೂಕಿನ ಲಚ್ಯಾಣ ಗ್ರಾಮದ ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಶಂಕರಲಿಂಗ ಜಾತ್ರಾ ಮಹೋತ್ಸವ ಮತ್ತು ಹನುಮಾನ್ ಗುಡಿಯ ಕಳಸಾರೋಹಣ, ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಸಾಲ ಮಾಡಿ ದುಂದು ವೆಚ್ಚ ಮಾಡದೇ ಯಾವದೇ ಜಾತಿ, ಮತ, ಪಂಥ ಎನ್ನದೇ ಹತ್ತಾರು ಪೂಜ್ಯರು, ಸಾವಿರಾರು ಜನರು, ರಾಜಕೀಯ ಮುತ್ಸದ್ದಿಗಳು ಮತ್ತು ಸತ್ಪುರುಷರ, ಬಂಧು ಬಳಗದವರ ಮಧ್ಯೆ ನಡೆಯುವ ವಿವಾಹ ಶ್ರೇಷ್ಠ’ ಎಂದರು.
ನಿವೃತ್ತ ಪ್ರಾಚಾರ್ಯ ಎ.ಪಿ. ಕಾಗವಾಡಕರ, ಹಣಮಂತ ಕಾಗವಾಡ ಮಾತನಾಡಿದರು. ಭಕ್ತಿ ಸೇವೆ ಮಾಡಿದ ದಾನಿಗಳನ್ನು ಸನ್ಮಾನಿಸಲಾಯಿತು.
ಹಳಂಗಳಿಯ ಶಿವಾನಂದ ಶ್ರೀ, ತುಂಗಳದ ಮಾತೋಶ್ರೀ ಅನುಸೂಯಾ ಅಮ್ಮ, ಹೂವಿನ ಹಿಪ್ಪರಗಿಯ ದ್ರಾಕ್ಷಾಯಿಣಿ ಅಮ್ಮ, ಚಿಕ್ಕಪಡಸಲಗಿಯ ಅಕ್ಕಮಹಾದೇವಿ ಅಮ್ಮ, ಶಾಸಕ ಯಶವಂತರಾಯಗೌಡ ಪಾಟೀಲರ ಸಹೋದರ ಬಸವಂತರಾಯಗೌಡ ಪಾಟೀಲ, ಎಂ.ಕೆ. ಬಿರಾದಾರ ಇದ್ದರು. ಇದಕ್ಕೂ ಮೊದಲು ಸಿದ್ದಲಿಂಗ ದೇವರು ಗುಡಿಯ ಕಳಸಾರೋಣ ನೆರವೇರಿಸಿದರು.
ಸಾಮೂಹಿಕ ವಿವಾಹದಲ್ಲಿ 28 ಜೋಡಿಗಳು ಮದುವೆ ಆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.