ಮುದ್ದೇಬಿಹಾಳ: ಸಾಮೂಹಿಕ ವಿವಾಹಗಳು ಸಮಾಜಕ್ಕೆ ಮಾದರಿಯಾಗಿದ್ದು ಉಳ್ಳವರು ತಮ್ಮ ಮಕ್ಕಳ ಮದುವೆಗಳಲ್ಲಿ ಬಡವರ ಮದುವೆಗಳನ್ನು ಮಾಡಿಕೊಡುವ ಸಂಪ್ರದಾಯವನ್ನು ಆಚರಣೆಯಲ್ಲಿ ತರಬೇಕು ಎಂದು ಯರಝರಿ ಯಲ್ಲಾಲಿಂಗೇಶ್ವರ ಮಠದ ಮಲ್ಲಾರಲಿಂಗ ಸ್ವಾಮೀಜಿ ಹೇಳಿದರು.
ಜಟ್ಟಗಿಯ ಬೆಳ್ಳೇಶ್ವರ ಜಾತ್ರೋತ್ಸವದ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಲವು ವರ್ಷಗಳಿಂದ ಜಟ್ಟಗಿ ಬೆಳ್ಳೇಶ್ವರ ಜಾತ್ರಾ ಮಹೋತ್ಸವದಲ್ಲಿ ಗ್ರಾಮಸ್ಥರೆ ದೇಣಿಗೆ ಸಂಗ್ರಹಿಸಿ ಇಂತಹ ಧಾರ್ಮಿಕ ಕಾರ್ಯ ನಡೆಸುತ್ತಿರುವುದು ಸಮಾಜದಲ್ಲಿರುವ ಉಳ್ಳವರಿಗೆ ಮಾದರಿಯಾಗಿದೆ ಎಂದರು.
ಜಾತ್ರಾ ಕಮಿಟಿ ಅಧ್ಯಕ್ಷ ಬಿ.ಕೆ.ಬಿರಾದಾರ, ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ಎನ್.ಮದರಿ ಮಾತನಾಡಿ, ನಾವು ಮಾಡುವ ಜಾತ್ರೆಗಳು ಮತ್ತೊಬ್ಬರಿಗೆ ಭಾರವಾಗದಂತೆ ಇರಬೇಕು. ಬಡವರಿಗೆ ಅನುಕೂಲ ಕಲ್ಪಿಸುವ ಕಾರ್ಯಕ್ರಮಗಳನ್ನು ಜಾತ್ರೆಯ ಕಾರ್ಯಕ್ರಮಗಳಲ್ಲಿ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಸಿ.ಎಸ್.ನಾಡಗೌಡ, ಗೊಳಸಾರಮಠದ ಅಭಿನವ ಪುಂಡಲೀಕ ಸ್ವಾಮೀಜಿ, ಸೀತಿಮನಿಯ ವೈಶಿಷ್ಟ ಸ್ವಾಮೀಜಿ, ಜಟ್ಟಗಿಯ ಸೋಮಲಿಂಗ ಸ್ವಾಮೀಜಿ, ಬಾಗಲಕೋಟ ಶಾಸಕ ಎಚ್.ವೈ.ಮೇಟಿ, ಹುಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೈನಾ ಚವ್ಹಾಣ, ಮಾಜಿ ಅಧ್ಯಕ್ಷ ಹಣಮಂತಗೌಡ ಬಿರಾದಾರ, ಮಾಜಿ ಅಧ್ಯಕ್ಷೆ ಚೆನ್ನಮ್ಮ ಗೌಡರ, ಸದಸ್ಯರಾದ ಭೀಮಪ್ಪ ಮಾದರ, ಶಿವಾನಂದ ಲಮಾಣಿ, ವೈ.ಎಚ್.ವಿಜಯಕರ್, ಬಿ.ಎಚ್.ಶಿರೋಳ, ಕಿರಣ ಮದರಿ, ವೈ.ಕೆ.ಹಳೇಮನಿ, ಎಂ.ಎಚ್.ಚನ್ನಿ ಮೊದಲಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.