ADVERTISEMENT

ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಅಧಿವೇಶನದಲ್ಲಿ ಧ್ವನಿ ಎತ್ತಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 5:07 IST
Last Updated 9 ಡಿಸೆಂಬರ್ 2025, 5:07 IST
ಗುರುಲಿಂಗಪ್ಪ ಅಂಗಡಿ
ಗುರುಲಿಂಗಪ್ಪ ಅಂಗಡಿ   

ವಿಜಯಪುರ: ‘ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಬೆಳಗಾವಿ ಅಧಿವೇಶನದಲ್ಲಿ ಜಿಲ್ಲೆಯ ಇಬ್ಬರು ಸಚಿವರು, ಶಾಸಕರು ಧ್ವನಿ ಎತ್ತಬೇಕು, ಒಂದು ವೇಳೆ ಬರಿಗೈಯಲ್ಲಿ ಜಿಲ್ಲೆಗೆ ಬಂದರೆ ಜನರಿಂದ ಪ್ರತಿರೋಧ ಎದುರಿಸಬೇಕಾಗುತ್ತದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಎಚ್ಚರಿಕೆ ನೀಡಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತ‌ನಾಡಿದ ಅವರು, ‘ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಪಕ್ಷಾತೀತವಾಗಿ ಹೋರಾಟ ನಡೆದಿದೆ. ಆದರೂ ಸರ್ಕಾರ ಗಂಭೀರವಾಗಿ ಪರಿಗಣಿಸದಿರುವುದು ಖಂಡನೀಯ’ ಎಂದರು.

‘ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತಮ್ಮ ವೈಯಕ್ತಿಕ ಹಿತಾಶಕ್ತಿಗಾಗಿ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಬಗ್ಗೆ ಜಿಲ್ಲೆಯ ಇನ್ನುಳಿದ ಸಚಿವರು, ಶಾಸಕರು ಸದನದಲ್ಲಿ ಗಟ್ಟಿ ಧ್ವನಿ ಎತ್ತಲೇಬೇಕು’ ಎಂದು ಆಗ್ರಹಿಸಿದರು.

ADVERTISEMENT

ಯತ್ನಾಳ ಹೊಂದಾಣಿಕೆ: ‘ಶಾಸಕ ಯತ್ನಾಳ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಾರೆ. ಆದರೆ, ಇವರು ವಿಜಯಪುರದಲ್ಲಿ ಸಚಿವ ಎಂ.ಬಿ.ಪಾಟೀಲ ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದು ಜಗಜ್ಜಾಹೀರು’ ಎಂದು ಆರೋಪಿಸಿದರು.

‘ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಜಯಪುರಕ್ಕೆ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾದ ಪರಿಣಾಮ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿದ್ದವು. ಶಾಸಕ ಯತ್ನಾಳ ಅವರು ವಿಜಯಪುರ ಸುಂದರ ಮಾಡಿದ್ದೇನೆ ಎಂದು ಹೇಳಿಕೊಂಡು ಅಡ್ಡಾಡುತ್ತಿದ್ದರು. ಆದರೆ, ಸದ್ಯ ಕಾಂಗ್ರೆಸ್‌ ಸರ್ಕಾರದಿಂದ ವಿಜಯಪುರಕ್ಕೆ ನಯಾ ಪೈಸೆ ಅನುದಾನ ಬರುತ್ತಿಲ್ಲ, ಅಭಿವೃದ್ಧಿ ಕುಂಟಿತವಾಗಿದೆ. ಯತ್ನಾಳ ಅವರು ಈಗ ವಿಜಯಪುರಕ್ಕೆ ಅನುದಾನ ತಂದು ಅಭಿವೃದ್ಧಿ ಮಾಡಲಿ ನೋಡೋಣ’ ಎಂದು ಸವಾಲು ಹಾಕಿದರು.

ಶಿಕ್ಷೆಯಾಗಲಿ: ‘ಪಂಚಮಸಾಲಿ ಸಮಾಜದವರು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಮೀಸಲಾತಿಗಾಗಿ ಕಳೆದ ವರ್ಷದ ಬೆಳಗಾವಿ ಅಧಿವೇಶನದ ವೇಳೆ ಹೋರಾಟ ನಡೆಸುತ್ತಿರುವಾಗ ಲಾಠಿ ಚಾರ್ಜ್ ಮಾಡಲಾಯಿತು. ಈ ಬಗ್ಗೆ ತನಿಖೆಯಾಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು’ ಎಂದು ಒತ್ತಾಯಿಸಿದರು.

‘ರೈತರಿಗೆ ಬೆಳೆ ಪರಿಹಾರ ನೀಡದೆ ರಾಜ್ಯ ಸರ್ಕಾರ ಅನ್ಯಾಯ ಮಾಡಿದೆ. ದ್ರಾಕ್ಷಿ ಬೆಳೆಗಾರರಿಗೆ ವಿಮೆ ಹಣ ಪಾವತಿಯಾಗಿಲ್ಲ. ಈ ಬಗ್ಗೆ ಸರ್ಕಾರದ ಗಮನಸೆಳೆಯಬೇಕು’ ಎಂದು ಆಗ್ರಹಿಸಿದರು.

‘ಹನಿ ನೀರಾವರಿಗೆ ಅಗತ್ಯ ಇರುವ ಸ್ಪಿಂಕ್ಲರ್, ಡ್ರಿಪ್, ಕೃಷಿ ಯಂತ್ರೋಪಕರಣಗಳು ರೈತರಿಗೆ ರಿಯಾಯಿತಿ ದರದಲ್ಲಿ ಲಭಿಸುತ್ತಿಲ್ಲ, ಕೃಷಿ ಇಲಾಖೆಗೆ ಬೀಗ ಹಾಕುವ ಪರಿಸ್ಥಿತಿ ಎದುರಾಗಿದೆ, ಜಿಲ್ಲೆಗೆ ಘೋಷಣೆಯಾಗಿರುವ ಫುಡ್ ಪಾರ್ಕ್ ನಿರ್ಮಾಣವಾಗಿಲ್ಲ, ಬಾಕಿ ಪಾವತಿಯಾಗದೇ ಇರುವುದರಿಂದ ಗುತ್ತಿಗೆದಾರರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಎಸ್ ಸಿ, ಎಸ್.ಟಿ‌‌‌ ಫಲಾನುಭವಿಗಳಿಗೆ ಕೊಳವೆಬಾವಿ ಕೊರೆಯಿಸಲು, ವಿದ್ಯುತ್ ಸಂಪರ್ಕ ಕಲ್ಪಿಸಲು ಅನುದಾನ ಬಿಡುಗಡೆಯಾಗುತ್ತಿಲ್ಲ, ಈ ಬಗ್ಗೆ ಜನಪ್ರತಿನಿಧಿಗಳು ಅಧಿವೇಶನದಲ್ಲಿ ಧ್ವನಿ ಎತ್ತಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಸುರೇಶ ಬಿರಾದಾರ, ಚಿದಾನಂದ ಚಲುವಾದಿ, ಭೀಮಾಶಂಕರ ಹದನೂರ, ಈರಣ್ಣ ರಾವೂರ, ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸಪ್ನ ಕಣಮುಚನಾಳ, ಸುಶ್ಮಿತಾ ವಾಡಕರ, ರಾಜಶೇಖರ ಡೊಳ್ಳಿ, ವಿಜಯ್ ಜೋಶಿ ಇದ್ದರು.

ಜಿಲ್ಲೆಯ ನ್ಯಾಯಯುತ ಬೇಡಿಕೆ ಸಮಸ್ಯೆಗಳಿಗೆ ಅಧಿವೇಶನದಲ್ಲಿ ಧ್ವನಿ ಎತ್ತಿ ಪರಿಹಾರ ಕಂಡುಕೊಳ್ಳದಿದ್ದರೆ ಸಚಿವರು ಶಾಸಕರು ಜನನಾಯಕರಾಗಲು ಯೋಗ್ಯರಲ್ಲ
ಗುರುಲಿಂಗಪ್ಪ ಅಂಗಡಿಅಧ್ಯಕ್ಷ ಬಿಜೆಪಿ ಜಿಲ್ಲಾ ಘಟಕ ವಿಜಯಪುರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.