ADVERTISEMENT

ವಿಜಯಪುರ: ವ್ಯಾಪಾರಿ, ವೈದ್ಯರಿಗೆ ‘ಟ್ರೇಡಿಂಗ್‌’ ಪಂಗನಾಮ

ಆನ್‌ಲೈನ್ ವಂಚನೆ ಪ್ರಕರಣ ಭೇದಿಸಿದ ವಿಜಯಪುರ ಪೊಲೀಸ್‌; ದೂರುದಾರರಿಗೆ ₹1.32 ಕೋಟಿ ವಾಪಸ್‌

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 2:01 IST
Last Updated 22 ಜನವರಿ 2026, 2:01 IST
<div class="paragraphs"><p>ವಿಜಯಪುರ&nbsp;ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ನಗದನ್ನು&nbsp;ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಪರಿಶೀಲಿಸಿದರು.ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ ಇದ್ದರು.</p></div>

ವಿಜಯಪುರ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ನಗದನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಪರಿಶೀಲಿಸಿದರು.ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ ಇದ್ದರು.

   

–ಪ್ರಜಾವಾಣಿ ಚಿತ್ರ

ವಿಜಯಪುರ: ವ್ಯಾಪಾರಿಗಳಿಗೆ, ವೈದ್ಯರಿಗೆ ಟ್ರೇಡಿಂಗ್‌ ಹೆಸರಲ್ಲಿ ಪಂಗನಾಮ ಹಾಕಿರುವ ಆನ್‌ಲೈನ್‌ ವಂಚನೆ ಪ್ರಕರಣಗಳನ್ನು ಭೇದಿಸಿ, ವಂಚನೆಯಾದ ಹಣದಲ್ಲಿ ಸುಮಾರು ₹1,32,38,183 ಅನ್ನು ದೂರುದಾರರಿಗೆ ಮರಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

ADVERTISEMENT

ವಿಜಯಪುರ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಐದು ಪ್ರಮುಖ ಪ್ರಕರಣಗಳ ಮಾಹಿತಿಯನ್ನು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ನೀಡಿದರು.

ವ್ಯಾಪಾರಿಗೆ ₹2.4 ಕೋಟಿ ವಂಚನೆ:

ವಿಜಯಪುರ ನಗರದ ವ್ಯಾಪಾರಿಯೊಬ್ಬರಿಗೆ ‘ದಿ ಓಕ್ಟಾ ಟ್ರೇಡಿಂಗ್‌ ಆ್ಯಪ್‌’ ಎಂಬ ಟ್ರೇಡಿಂಗ್ ಅಪ್ಲಿಕೇಶನ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಅಂತರರಾಷ್ಟ್ರೀಯ ಮಟ್ಟದ ಡಾಲರ್, ಗೋಲ್ಡ್, ಕ್ರೂಡ್ ಆಯಿಲ್, ಕರೆನ್ಸಿ ಪೇರ್, ಟ್ರೇಡ್ ಮಾಡಿ  ಹೂಡಿಕೆ ಮಾಡಿದ ಹಣಕ್ಕೆ  ದಿನಕ್ಕೆ ಶೇ 4 ರಷ್ಟು ಲಾಭಾಂಶ ಮಾಡಿಕೊಡುತ್ತೇವೆ’ ಎಂದು ಸುಳ್ಳು ಹೇಳಿ ನಂಬಿಸಿ, ಇವರ ಕಡೆಯಿಂದ ಒಟ್ಟು ₹2,04,71,500 ಅನ್ನು ಹಾಕಿಸಿಕೊಂಡು ಆನ್‌ಲೈನ್‌ ಮೂಲಕ ವಂಚನೆ ಮಾಡಿದ್ದರು ಎಂದರು.

ಈ ಕೃತ್ಯ ಎಸಗಿದ ಆರೋಪಿಗಳಿಗೆ ಪತ್ತೆ ಮಾಡಿ ವಿಚಾರಣೆ ಕುರಿತು ಹಾಜರಾಗಲು ನೋಟಿಸ್ ಜಾರಿ ಮಾಡಿ ಆರೋಪಿಯ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿ, ಈ ಮೊದಲು ₹70 ಲಕ್ಷವನ್ನು ದೂರುದಾರರ ಖಾತೆಗೆ ಜಮಾ ಮಾಡಿಸಲಾಗಿತ್ತು. ಇದೀಗ ಮತ್ತೆ ₹65.64 ಲಕ್ಷವನ್ನು ದೂರುದಾರರ ಖಾತೆಗೆ ಜಮಾ ಮಾಡಲಾಗಿದೆ. ಈ  ಪ್ರಕರಣದಲ್ಲಿ ಇದುವರೆಗೆ ಒಟ್ಟು ₹1,35,64,000 ಗಳನ್ನು ಆರೋಪಿಗಳಿಂದ ದೂರುದಾರರಿಗೆ ಮರಳಿಸಲಾಗಿದೆ ಎಂದು ತಿಳಿಸಿದರು.

ವೈದ್ಯನಿಗೆ ₹2.15 ಕೋಟಿ ಪಂಗನಾಮ:

ವಿಜಯಪುರ ಜಿಲ್ಲೆಯ ವೈದ್ಯರೊಬ್ಬರಿಗೆ ‘ಡಿವೋರ್ಸ್‌ ಮ್ಯಾಟ್ರಿಮೋನಿ’ ಮೂಲಕ ಪರಿಚಯ ಮಾಡಿಕೊಂಡು ಮದುವೆಯಾಗುವುದಾಗಿ ನಂಬಿಸಿ, https://m.bitcoin-vt.com ಎಂಬ ವೆಬ್‌ಸೈಟ್‌ನಲ್ಲಿ ಹಣ ಹೂಡಿಕೆ ಮಾಡಿ ಕ್ರಿಪ್ಟೋ ಟ್ರೇಡಿಂಗ್ ಮಾಡಿ ಲಾಭ ಮಾಡಿಕೊಡುವುದಾಗಿ ನಂಬಿಸಿ ದೂರುದಾರರ ಕಡೆಯಿಂದ ತಮ್ಮ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ₹2,15,50,000 ಹಾಕಿಸಿಕೊಂಡು ಮೋಸ ವಂಚನೆ ಮಾಡಿದ್ದಾರೆ ಎಂದು ತಿಳಿಸಿದರು.

ಈ ಕೃತ್ಯ ಎಸಗಿದ ಆರೋಪಿಯಿಂದ ಮತ್ತು ಆರೋಪಿಯ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿ ಒಟ್ಟು ₹25.11 ಲಕ್ಷವನ್ನು ದೂರುದಾರರಿಗೆ ಮರಳಿಸಲಾಗಿರುತ್ತದೆ ಎಂದು ಹೇಳಿದರು.

10 ಮೊಬೈಲ್‌ ಪತ್ತೆ:

ವಿಜಯಪುರ ನಗರ ಹಾಗೂ ಜಿಲ್ಲೆಯಾದ್ಯಂತ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದುಕೊಂಡ ಮೊಬೈಲ್‌ಗಳನ್ನು ಸಿ.ಇ.ಐ.ಆರ್ (CEIR) ಪೋರ್ಟಲ್ ಮುಖಾಂತರ ವಿವಿಧ ಕಂಪನಿಯ ಒಟ್ಟು ₹2.40 ಲಕ್ಷ ಮೌಲ್ಯದ 10 ಮೊಬೈಲ್‌ಗಳನ್ನು ಪತ್ತೆ ಮಾಡಿ, ಅವುಗಳನ್ನು ದೂರುದಾರರಿಗೆ ಹಿಂದಿರುಗಿಸಲಾಗಿದೆ ಎಂದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ ಇದ್ದರು.

ಆನ್‌ಲೈನ್‌ ಮೂಲಕ ಜನ ಯಾವಾವ ರೀತಿ ಮೋಸ ಹೋಗುತ್ತಾರೆ ಯಾವ ರೀತಿ ಹಣ ಕಳೆದುಕೊಳ್ಳುತ್ತಾರೆ ಎಂಬುದು ಈ ಪ್ರಕರಣಗಳಿಂದ ತಿಳಿಯುತ್ತದೆ. ಜನ ಮೋಸ ಹೋಗದೇ ಜಾಗೃತರಾಗಬೇಕು
ಲಕ್ಷ್ಮಣ ನಿಂಬರಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಜಯಪುರ

ಭೂ ಒಡೆತನ ಹಗರಣ: ಹಣ ವಶ

ವಿಜಯಪುರ: ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಭೂ ಒಡೆತನ ಯೋಜನೆಯಡಿ ಜಿಲ್ಲೆಯಲ್ಲಿ 2018ರಲ್ಲಿ ನಡೆದ ಹಗರಣದಲ್ಲಿ ಭಾಗಿಯಾದ ಆರೋಪಿ ನೌಕರರ ಬ್ಯಾಂಕ್‌ ಖಾತೆ ಸೀಜ್‌ ಮಾಡಿ ಹಣವನ್ನು ವಸೂಲಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾಗಿದ್ದ ರೇಣುಕಾ ಸಾತರ್ಲೆ ತಾಲ್ಲೂಕು ಅಭಿವೃದ್ಧಿ ಅಧಿಕಾರಿಯಾಗಿದ್ದ ಎಸ್.ಎಸ್. ಮಣಿಗಿರಿ (ನಿವೃತ್ತ) ಹಾಗೂ  ಮುಧೋಳ ಎಂ.ಟಿ. (ಮೃತಪಟ್ಟಿದ್ದಾರೆ) ಅವರು ಕರ್ತವ್ಯಲೋಪ ಮಾಡಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ₹75.90 ಲಕ್ಷ ದುರುಪಯೋಗ ಪಡಿಸಿಕೊಂಡು ಸರ್ಕಾರಕ್ಕೆ ಮೋಸ ಮಾಡಿದ್ದರು ಎಂದರು. ಪ್ರಕರಣದ ತನಿಖೆ ಪೂರ್ಣಗೊಳಿಸಿ ಆರೋಪಿಗಳ ಬ್ಯಾಂಕ್‌ ಖಾತೆಗಳನ್ನು ಫ್ರೀಜ್ ಮಾಡಿಸಿ ಖಾತೆಯಲ್ಲಿ ಸದ್ಯ ಇದ್ದ ಒಟ್ಟು ₹2755183 ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಹೆಲಿಕಾಪ್ಟರ್‌ನಲ್ಲಿ ಹಾರಿಸದೇ ದೋಖಾ

ವಿಜಯಪುರ ಜಿಲ್ಲೆಯ ವ್ಯಾಪಾರಿಯೊಬ್ಬರಿಗೆ ಜೆಟ್ ಸರ್ವ್ ಏವಿಯೇಷನ್ ಪ್ರೈ.ಲಿ.(Flyola) ಎಂಬ ವೆಬ್‌ಸೈಟ್‌ನಲ್ಲಿ ಪ್ರಯಾಗರಾಜ್‌ ವಿಮಾನ ನಿಲ್ದಾಣದಿಂದ ಪ್ರಯಾಗರಾಜ್‌ ಕುಂಭಮೇಳ ಸ್ಥಳಕ್ಕೆ ಹೆಲಿಕಾಪ್ಟರ್ ಮೂಲಕ ಹೋಗಲು ಸರ್ವಿಸ್ ಕೊಡುತ್ತೇವೆ ಎಂದು ಸುಳ್ಳು ಹೇಳಿ ನಂಬಿಸಿ ಹೆಲಿಕಾಪ್ಟರ್‌ ಸೇವೆ ನಿಡದೇ ಹಣವನ್ನು ಸಹ ಮರಳಿ ಕೊಡದೇ ಆನ್‌ಲೈನ್‌ ಮೂಲಕ ವಂಚನೆ ಮಾಡಿದ್ದರು ಎಂದು ಎಸ್‌ಪಿ ನಿಂಬರಗಿ ತಿಳಿಸಿದರು. ಜೊತೆಗೆ ವಿಮಾನದ ಟಿಕೆಟ್ ಹಣ ₹1.08 ಲಕ್ಷ ಹಾಗೂ ಪ್ರಯಾಗರಾಜ್‌ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆಗೆ ಎಂದು ಸುಮಾರು ₹1.21 ಲಕ್ಷ ಸೇರಿದಂತೆ ಒಟ್ಟು ₹4.08 ಲಕ್ಷ ವಂಚನೆ ಮಾಡಿದ್ದರು. ಈ ಕೃತ್ಯ ಎಸಗಿದ ಆರೋಪಿಗಳಿಂದ ಮತ್ತು ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿ ಒಟ್ಟು ₹408 ಅನ್ನು ಆರೋಪಿಗಳಿಂದ ದೂರುದಾರರಿಗೆ ಮರಳಿಸಲಾಗಿದೆ ಎಂದು ಹೇಳಿದರು.

ಫ್ರಾಂಚೈಸಿ ಹೆಸರಲ್ಲಿ ಮೋಸ

ವಿಜಯಪುರ ಜಿಲ್ಲೆಯ ವ್ಯಾಪಾರಿಯೊಬ್ಬರಿಗೆ ಹಾಗೂ ಅವರ ಪರಿಚಯದ  9 ಜನರಿಗೆ ‘ಇ–ಕಾಮ್’ ಡೆಲಿವರಿ ಫ್ರಾಂಚೈಸಿ ಕೊಡುತ್ತೇವೆ ಎಂದು ನಂಬಿಸಿ ಅವರಿಂದ ₹58 ಲಕ್ಷ ಪಡೆದು ಯಾವುದೇ ಫ್ರಾಂಚೈಸಿ ಕೊಡದೇ ವಂಚನೆ ಮಾಡಿದ್ದಾರೆ ಎಂದು ಎಸ್‌ಪಿ ತಿಳಿಸಿದರು. ಈ ಪ್ರಕರಣದ ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿ ಒಟ್ಟು ₹10 ಲಕ್ಷವನ್ನು ದೂರುದಾರರಿಗೆ ಮರಳಿಸಲಾಗಿರುತ್ತದೆ. ಉಳಿದ ಆರೋಪಿಗಳ ಬ್ಯಾಂಕ್ ಖಾತೆಗಳಲ್ಲಿ ಒಟ್ಟು ₹12 ಲಕ್ಷ ಫ್ರೀಜ್ ಮಾಡಿಸಿ ಕೋರ್ಟ್‌  ಆದೇಶ ಪಡೆದುಕೊಂಡಿದ್ದು ಬ್ಯಾಂಕಿನಿಂದ ಸಾಕ್ಷಿದಾರರಿಗೆ ರೀಫಂಡ್ ಮಾಡಿಸುವ ಪ್ರಕ್ರಿಯೆ ನಡೆದಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.