
ಸಿಂದಗಿ: ‘ಮತಕ್ಷೇತ್ರದ ಸಿಂದಗಿ-ಆಲಮೇಲ ಅವಳಿ ತಾಲ್ಲೂಕುಗಳ 29 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು’ ಎಂದು ಶಾಸಕ ಅಶೋಕ ಮನಗೂಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಯಾ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಗೆ ನಿಯಮಿತವಾಗಿ ಭೇಟಿ ಕೊಡಬೇಕು. ಗ್ರಾಮಸ್ಥರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಬೇಕು. ಈಗಾಗಲೇ ಗ್ರಾಮ ಪಂಚಾಯಿತಿ ಆಡಳಿತದ ಅವಧಿ ಮುಗಿದ ಕಾರಣ ನೂತನವಾಗಿ ನೇಮಕಗೊಂಡ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳು ಕುಡಿಯುವ ನೀರು ಕುರಿತು ಹೆಚ್ಚಿನ ನಿಗಾ ವಹಿಸಬೇಕು ಎಂದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತೆರಿಗೆ ವಸೂಲಾತಿಯಲ್ಲಿ ಜಿಲ್ಲೆ ಶೇ 55.41 ರಷ್ಟು ಸಾಧನೆ ಮಾಡಿದೆ. ಇದರಲ್ಲಿ ಸಿಂದಗಿ ತಾಲ್ಲೂಕು ಶೇ70.26 ರಷ್ಟು ಸಾಧನೆ ಮಾಡಿದೆ. 16 ಗ್ರಾಮ ಪಂಚಾಯಿತಿಗಳ ಪೈಕಿ ತಾಲ್ಲೂಕಿನ ಯಂಕಂಚಿ ಮತ್ತು ಸುಂಗಠಾಣ ಗ್ರಾಮ ಪಂಚಾಯಿತಿಗಳು ಪ್ರಸ್ತುತ ಬೇಡಿಕೆಗನ್ವಯ ಶೇ 100 ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿದೆ ಎಂದು ತಾಲ್ಲೂಕು ಪಂಚಾಯಿತಿ ಇಒ ರಾಮು ಜಿ.ಅಗ್ನಿ ತಿಳಿಸಿದರು.
ಇದೇ ಸಂದರ್ಭದಲ್ಲಿ ತೆರಿಗೆ ವಸೂಲಾತಿಯಲ್ಲಿ ಸಾಧನೆ ಮಾಡಿದ ಯಂಕಂಚಿ ಗ್ರಾಮ ಪಂಚಾಯಿತಿ ಪಿಡಿಒ ಸಂಜೀವಕುಮಾರ ದೊಡಮನಿ, ಸುಂಗಠಾಣ ಗ್ರಾಮ ಪಂಚಾಯಿತಿಯ ಪಿಡಿಒ ಬಸವರಾಜ ಶಹಾಪುರ ಅವರನ್ನು ಶಾಸಕ ಮನಗೂಳಿ ಸನ್ಮಾನಿಸಿದರು.
ಆಲಮೇಲ ತಾಲ್ಲೂಕು ಪಂಚಾಯಿತಿ ಇಒ ಫರೀದಾ ಪಠಾಣ, ಪಂಚಾಯತ್ ರಾಜ್ ಇಲಾಖೆ ಸಹಾಯಕ ನಿರ್ದೇಶಕ ಎ.ಎ.ದುರ್ಗದ ಹಾಗೂ ಅವಳಿ ತಾಲ್ಲೂಕುಗಳ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳು, ಅಭಿವೃದ್ದಿ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.