ADVERTISEMENT

ಸಿಎಂ ಆಗುವ ಕನಸು ಬಿಚ್ಚಿಟ್ಟ ಶಾಸಕ ಯತ್ನಾಳ; ಸಂಕ್ರಮಣಕ್ಕೆ ಐತಿಹಾಸಿಕ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2020, 17:41 IST
Last Updated 25 ಡಿಸೆಂಬರ್ 2020, 17:41 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ವಿಜಯಪುರ: ‘ಸಂಕ್ರಾಂತಿಗೆ ಸಚಿವ ಸಂಪುಟ ವಿಸ್ತರಣೆ ಮಾತ್ರವಲ್ಲ, ಮಹತ್ವದ ಬದಲಾವಣೆಯಾಗಲಿದೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಕರ ಸಂಕ್ರಾಂತಿಗೆ ಸೂರ್ಯ ತನ್ನ ಪಥವನ್ನು ಬದಲಾಯಿಸಿ ಉತ್ತರಾಯಣ ಆರಂಭವಾಗಲಿರುವುದರಿಂದ ಉತ್ತರ ಕರ್ನಾಟಕಕ್ಕೆ ಒಳಿತಾಗಲಿದೆ’ ಎಂದರು.

‘ನಾನು ಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ. ಮಂತ್ರಿ ಸ್ಥಾನದಲ್ಲಿ ನನ್ನ ಹೆಸರಿಲ್ಲ. ಇನ್ನು ಮುಂದೆ ಸಚಿವ ಸಂಪುಟ ವಿಸ್ತರಣೆಯಲ್ಲಿ ನನ್ನ ಹೆಸರಿದೆ ಎಂದು ಮಾಧ್ಯಮದವರು ಸುದ್ದಿ ಮಾಡಬೇಡಿ’ ಎಂದು ಮನವಿ ಮಾಡಿದರು.

ADVERTISEMENT

‘ಯಾರಾರ ಹಣೆಬರಹ ಏನೇನಿದೆಯೋ ಗೊತ್ತಿಲ್ಲ. ವಿಜಯಪುರಕ್ಕೆ ಇಷ್ಟು ವರ್ಷಗಳ ಕಾಲ ಆಗಿರುವ ಅನ್ಯಾಯ ಸರಿಯಾಗಲಿದೆ’ ಎಂದು ಹೇಳುವ ಮೂಲಕ ಮುಖ್ಯಮಂತ್ರಿಯಾಗುವ ಕನಸನ್ನು ಪರೋಕ್ಷವಾಗಿ ವ್ಯಕ್ತಪಡಿಸಿದರು.

ವಿಜಯಪುರಕ್ಕೆ ಶಾ: ವಿಜಯಪುರದಲ್ಲಿ ನೂತನವಾಗಿ ಆರಂಭವಾಗಿರುವ ಐಆರ್‌ಬಿ ಬೆಟಾಲಿಯನ್‌ ಉದ್ಘಾಟನೆ ಸಂಬಂಧ ಜನವರಿ 16ಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿಜಯಪುರಕ್ಕೆ ಬರಲಿದ್ದಾರೆ. ಅವರು ಬರುವ ಮೊದಲೇ ಭಾರಿ ಬದಲಾವಣೆಯಾಗಲಿದೆ ಎಂದು ಹೇಳಿದರು.

ಶಾಲೆ ಆರಂಭಕ್ಕೆವಿರೋಧ
‘ಮಕ್ಕಳ ಆರೋಗ್ಯ ಹಾಗೂ ಭವಿಷ್ಯ ಮುಖ್ಯ. ಶಾಲೆ ಆರಂಭಕ್ಕೆ ತರಾತುರಿ ಬೇಡ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

‘ನಾನು ಶಿಕ್ಷಣ ಸಂಸ್ಥೆಯೊಂದರ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ. ಒಂದು ವರ್ಷ ಶಿಕ್ಷಣ ಸಂಸ್ಥೆಗಳಿಗೆ ಹಾನಿಯಾದರೂ ಸಹಿಸಿಕೊಳ್ಳಬಹುದು. ಆದರೆ, ಮಕ್ಕಳ ಮೇಲೆ ಯಾವುದೇ ದುಷ್ಪರಿಣಾಮ ಆಗಬಾರದು’ ಎಂದರು.

ಕೋವಿಡ್‌ನಿಂದ ಮಕ್ಕಳಿಗೆ ಯಾವುದೇ ತೊಂದರೆ ಇಲ್ಲ ಎಂಬುದನ್ನು ವೈದ್ಯರು ಖಚಿತ ಪಡಿಸಿದರೆ ಹಾಗೂ ವಿವಿಧ ಕ್ಷೇತ್ರಗಳ ತಜ್ಞರ ಅಭಿಪ್ರಾಯ ಪಡೆದ ಬಳಿಕ ಶಾಲೆ ಆರಂಭದ ಬಗ್ಗೆ ನಿರ್ಣಯ ಮಾಡಬೇಕು ಎಂದರು.

‘ಹಿಂದಿನ ಕಾಲದಲ್ಲಿ ದಂಪತಿಗೆ ನಾಲ್ಕರಿಂದ ಹತ್ತಾರು ಮಕ್ಕಳಿರುತ್ತಿದ್ದವು. ಆದರೆ, ಇಂದಿನ ಕಾಲದಲ್ಲಿ ದಂಪತಿಗೆ ಒಂದೋ, ಎರಡೋ ಮಕ್ಕಳಿರುತ್ತವೆ. ಹೀಗಾಗಿ ಮಕ್ಕಳನ್ನು ಅತ್ಯಂತ ಜೋಪಾನವಾಗಿ ಬೆಳೆಸಿರುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

ಸ್ವಾಗತ: ರಾತ್ರಿ ಕರ್ಫ್ಯೂ ಹಿಂಪಡೆದ ಸರ್ಕಾರದ ಕ್ರಮವನ್ನು ಸ್ವಾಗತಿಸಿದ ಯತ್ನಾಳ, ಮುಖ್ಯಮಂತ್ರಿ ಅವರು ಯಾವುದೇ ನಿರ್ಣಯವನ್ನು ಯಾರದೊ ಒಬ್ಬರ ಮಾತು ಕೇಳಿ ತೆಗೆದುಕೊಳ್ಳಬಾರದು. ಇನ್ನು ಮುಂದೆ ಸಚಿವರು, ಶಾಸಕರು, ಸಾರ್ವಜನಿಕರು, ಮಾಧ್ಯಮಗಳ ಅಭಿಪ್ರಾಯ ಮತ್ತು ವಿಶ್ವಾಸವನ್ನು ತೆಗೆದುಕೊಂಡು ನಿರ್ಣಯಿಸಬೇಕು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.