ADVERTISEMENT

ವಿಜಯಪುರ: ಮರಳಿನ ಅಡ್ಡೆ ಮೇಲೆ ನಾಗಠಾಣ ಶಾಸಕ ದೇವಾನಂದ ಚವ್ಹಾಣ ದಾಳಿ

ದೂರು ದಾಖಲಿಸಿದೇ ಬಿಟ್ಟು ಕಳುಹಿಸಿದ ಅಧಿಕಾರಿಗಳು!

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 13:18 IST
Last Updated 4 ಡಿಸೆಂಬರ್ 2020, 13:18 IST
ಚಡಚಣ ಪಟ್ಟಣದ ಬೋರಿ ಹಳ್ಳದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಅಪಾರ ಪ್ರಮಾಣದ ಮರಳು ಅಡ್ಡೆಯನ್ನು ನಾಗಠಾಣ ಶಾಸಕ ದೇವಾನಂದ ಚವ್ಹಾಣ ಶುಕ್ರವಾರ ಪತ್ತೆ ಹಚ್ಚಿದರು 
ಚಡಚಣ ಪಟ್ಟಣದ ಬೋರಿ ಹಳ್ಳದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಅಪಾರ ಪ್ರಮಾಣದ ಮರಳು ಅಡ್ಡೆಯನ್ನು ನಾಗಠಾಣ ಶಾಸಕ ದೇವಾನಂದ ಚವ್ಹಾಣ ಶುಕ್ರವಾರ ಪತ್ತೆ ಹಚ್ಚಿದರು    

ವಿಜಯಪುರ: ಜಿಲ್ಲೆಯ ಚಡಚಣ ಪಟ್ಟಣದ ಬಾಹುಬಲಿ ಮುತ್ತಿನ ಬಟ್ಟೆ ಅಂಗಡಿ ಹಿಂದೆ ಇರುವ ಬೋರಿ ಹಳ್ಳದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಅಪಾರ ಪ್ರಮಾಣದ ಮರಳಿನ ಅಡ್ಡೆ ಮೇಲೆ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಶುಕ್ರವಾರ ದಾಳಿ ಮಾಡಿದರು.

ಈ ಸಂದರ್ಭದಲ್ಲಿಶಾಸಕರ ಜೊತೆಯಲ್ಲೇ ಇದ್ದಚಡಚಣ ತಹಶೀಲ್ದಾರ್ ಸುರೇಶ ಕುಮಾರ್, ಚಡಚಣ ಸಬ್ ಇನ್‌ಸ್ಪೆಕ್ಟರ್‌ ಸತ್ತಿಗೌಡರ ಅವರು ಅಕ್ರಮ ಮರಳು ದಂದೆಯಲ್ಲಿ ಸಿಕ್ಕಿ ಬಿದ್ದವರ ವಿರುದ್ಧ ಯಾವುದೇ ದೂರು ದಾಖಲಿಸದೇ ಹಾಗೆಯೇ ಬಿಟ್ಟು ಕಳುಹಿಸಿರುವ ಘಟನೆ ನಡೆಯಿತು.

ರಾಜಕಾರಣಿಗಳ ಕೈವಾಡ:ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಾಸಕ ದೇವಾನಂದ ಚವ್ಹಾಣ, ಭೀಮಾ ತೀರದಲ್ಲಿ ಮರಳು ಗಣಿಗಾರಿಕೆ ಅವ್ಯಾಹತವಾಗಿದ್ದು, ಇದರಲ್ಲಿ ಜಿಲ್ಲೆಯ ಪ್ರಭಾವಿ ಸಚಿವರ ಬೆಂಬಲಿಗರ ಕೈವಾಡವಿರುವುದರಿಂದ ಪ್ರಕರಣ ದಾಖಲಿಸದೇ ಬಿಡಲಾಗುತ್ತಿದೆ ಎಂದು ಆರೋಪಿಸಿದರು.

ADVERTISEMENT

ಮರಳು ಗಣಿಗಾರಿಕೆ ತಡೆಯುವಲ್ಲಿಪೊಲೀಸ್‌ ಇಲಾಖೆ ಸಂಪೂರ್ಣ ನಿಷ್ಕ್ರಿಯವಾಗಿದೆ. ಈ ಅಕ್ರಮ ದಂದೆಯಲ್ಲಿ ಪೊಲೀಸರೂ ಭಾಗಿಯಾಗಿದ್ದಾರೆ ಎಂದು ದೂರಿದರು.

ಈ ಹಿಂದೆ ವಿಜಯಪುರ ನಗರದ ಸಿಂದಗಿ ಬೈಪಾಸ್‌ ಬಳಿ ನಾನೇ ಸ್ವತಃ ಮರಳು ಸಾಗಿಸುತ್ತಿದ್ದ ಲಾರಿಯನ್ನು ಹಿಡಿದುಕೊಟ್ಟರೂ ಸಹ ದೂರು ದಾಖಲಿಸಲಿಲ್ಲ. ಅದೇ ರೀತಿ ಚಡಚಣದಲ್ಲೂ ಮಾಡಲಾಗಿದೆ ಎಂದು ಹೇಳಿದರು.

ಚಡಚಣ ಪೊಲೀಸ್‌ ಠಾಣೆ ಒಂದು ಕಡೆ, ತಹಶೀಲ್ದಾರ್‌ ಕಚೇರಿ ಇನ್ನೊಂದು ಕಡೆ ಹಾಗೂ ಮುಖ್ಯ ರಸ್ತೆ ಪಕ್ಕದಲ್ಲಿ ಹಾಡುಹಗಲೇ ಸುಮಾರು 50ರಿಂದ 60 ಮಂದಿ ಅಕ್ರಮ ಮರಳುಗಾರಿಗೆ ನಡೆಯುತ್ತಿದ್ದರೂ ಅಧಿಕಾರಿಗಳು ತಮಗೆ ಗೊತ್ತಿಲ್ಲವೆಂದು ಹೇಳುತ್ತಿರುವುದು ಅವರ ಕಾರ್ಯವೈಕರಿಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.

‘ಮರಳು ಅಡ್ಡೆ ಮೇಲೆ ಸ್ವತ ನಾನೇ ದಾಳಿ ಮಾಡಿ ಪೊಲೀಸರ ವಶಕ್ಕೆ ಒಪ್ಪಿಸಿದರೂ ದೂರು ದಾಖಲಿಸಿಕೊಳ್ಳುತ್ತಿಲ್ಲ. ಕಂದಾಯ, ಗಣಿಗಾರಿಕೆ, ಪೊಲೀಸ‌ರನ್ನು ಒಳಗೊಂಡ ಜಿಲ್ಲಾ ಟಾಸ್ಕ್‌ ಪೋರ್ಸ್‌ ಅಕ್ರಮದಲ್ಲಿ ಸಂಪೂರ್ಣ ಭಾಗಿಯಾಗಿದೆ. ಈ ಬಗ್ಗೆ ತನಿಖೆಯಾಗಬೇಕು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.