ADVERTISEMENT

ಅನಕ್ಷರಸ್ಥ, ಅಂಧ, ಅಸ್ವಸ್ಥ ಮತದಾರರಿಗೆ ನೆರವು  

ವಿಧಾನ ಪರಿಷತ್ ಚುನಾವಣೆ; ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿ ಸಭೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 11:46 IST
Last Updated 2 ಡಿಸೆಂಬರ್ 2021, 11:46 IST
ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಚುನಾವಣಾಧಿಕಾರಿ ಪಿ.ಸುನೀಲ್‌ಕುಮಾರ್ ಮಾತನಾಡಿದರು
ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಚುನಾವಣಾಧಿಕಾರಿ ಪಿ.ಸುನೀಲ್‌ಕುಮಾರ್ ಮಾತನಾಡಿದರು   

ವಿಜಯಪುರ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆಗೆ ಡಿ.10ರಂದು ನಡೆಯುವ ಮತದಾನ ಸಂದರ್ಭದಲ್ಲಿ ಅನಕ್ಷರಸ್ಥ, ಅಂಧ ಹಾಗೂ ಅಸ್ವಸ್ಥ ಮತದಾರರು ಅಗತ್ಯವಿದ್ದರೆ ಜೊತೆಗಾರರೊಬ್ಬರ ನೆರವು ಪಡೆಯಬಹುದಾಗಿದೆ ಎಂದು ಚುನಾವಣಾಧಿಕಾರಿ ಪಿ.ಸುನೀಲ್‌ಕುಮಾರ್ ತಿಳಿಸಿದ್ದಾರೆ.

ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಮತದಾನದ ವೇಳೆ ಜೊತೆಗಾರರೊಬ್ಬರ ನೆರವು ಪಡೆಯ ಬಯಸುವವರುಡಿ.6ರ ಒಳಗಾಗಿ ಚುನಾವಣಾ ಅಧಿಕಾರಿಗಳಿಗೆ ಲಿಖಿತವಾಗಿ ಮನವಿ ಸಲ್ಲಿಸಿ, ಅನುಮತಿ ಪಡೆಯಬೇಕು ಎಂದು ಅವರು ತಿಳಿಸಿದರು.

ADVERTISEMENT

ಮತದಾರರಿಗೆ ನೆರವಾಗುವ ಸಂಬಂಧಪಟ್ಟ ಜೊತೆಗಾರರು ಇನ್ನೊಬ್ಬ ಸದಸ್ಯರಿಗೆ ಅಥವಾ ಮತದಾರರಿಗೆ ಜೊತೆಗಾರರಾಗಬಾರದು ಎಂದರು.

ಚುನಾವಣೆಯಲ್ಲಿ ಮತಚಲಾಯಿಸುವ ಮತದಾರರು ತಪ್ಪದೇ ಕೋವಿಡ್-19 ಲಸಿಕೆ ಪಡೆಯುವಂತೆ ಅವರು ತಿಳಿಸಿದರು.

ಚುನಾವಣೆ ಮತದಾನ ಸಂದರ್ಭದಲ್ಲಿ ಸಂಬಂಧಪಟ್ಟ ಮತದಾರರು ಎಪಿಕ್ ಕಾರ್ಡ್ ಅಥವಾ ಭಾವಚಿತ್ರವುಳ್ಳ ಇತರೆ ಗುರುತಿನ ಚೀಟಿ ಅಥವಾ ಸ್ಥಳೀಯ ಸಂಸ್ಥೆಗಳಿಂದ ಸದಸ್ಯರೆಂದು ನೀಡಲಾಗುವ ಗುರುತಿನ ಚೀಟಿಯೊಂದಿಗೆ ಮತ ಚಲಾಯಿಸಲು ಅವಕಾಶ ಇದೆ ಎಂದರು.

ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ಡಮ್ಮಿ ಬ್ಯಾಲೆಟ್ ಪೇಪರ್ ಮುದ್ರಿಸಲು ಅಭ್ಯಂತರವಿಲ್ಲ. ಆದರೆ, ಚುನಾವಣಾ ಆಯೋಗದ ಬ್ಯಾಲೆಟ್ ಪೇಪರ್‌ ಬಣ್ಣ ಮತ್ತು ಗಾತ್ರಕ್ಕೆ ಹೋಲಿಕೆಯಾಗಿರಬಾರದು. ಶ್ವೇತ ಮತ್ತು ಗುಲಾಬಿ (ಪಿಂಕ್) ಬಣ್ಣ ಹೊರತುಪಡಿಸಿ ಬ್ರೌನ್, ಹಳದಿ ಹಾಗೂ ಗ್ರೇ ಬಣ್ಣದಲ್ಲಿ ಮುದ್ರಿಸುವ ಮೂಲಕ ಗೊಂದಲವನ್ನು ನಿವಾರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಅಭ್ಯರ್ಥಿಗಳು ಡಮ್ಮಿ ಬ್ಯಾಲೆಟ್ ಪೇಪರ್‌ನಲ್ಲಿ ತಮ್ಮ ಸ್ಥಾನವನ್ನು ಗೊತ್ತು ಪಡಿಸಬಹುದಾಗಿದೆ. ಆದರೆ, ಇತರೆ ಅಭ್ಯರ್ಥಿಗಳ ಅಧೀಕೃತ ಹೆಸರು ಮತ್ತು ಚಿಹ್ನೆಯನ್ನು ಬಳಸಕೂಡದು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮತದಾರರಿಗೆ ಸಂಬಂಧಿಸಿದ ರಾಜಕೀಯ ಪಕ್ಷ ಮತ್ತು ಅಭ್ಯರ್ಥಿಗಳಿಂದ ಶ್ವೇತ ಬಣ್ಣದ ಗುರುತಿನ ಚೀಟಿಗಳನ್ನು ನೀಡಬಹುದಾಗಿದೆ. ಅಭ್ಯರ್ಥಿಗಳ ಹೆಸರು, ಅಭ್ಯರ್ಥಿಯ ಪಕ್ಷ ಹಾಗೂ ಚಿಹ್ನೆ, ಘೋಷಣೆ ಮತ್ತು ಮತದಾನ ಕೇಂದ್ರ ವ್ಯಾಪ್ತಿಯಲ್ಲಿ ಶೂನ್ಯ ಅವಧಿಯಲ್ಲಿ ಪ್ರಚಾರಕ್ಕೆ ಮತ್ತು ಮತದಾನಕ್ಕೆ ಆಮಿಷ ಒಡ್ಡುವಂತಹ ವಿಷಯ ಇರಬಾರದು ಎಂದರು.

ಮತದಾನ ಕೇಂದ್ರದ ನೂರು ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಘೋಷಣೆ ಮತ್ತು ಮತದಾರರಿಗೆ ಆಮಿಷ ಒಡ್ಡುವಂತಹ ಗುರುತಿನ ಚೀಟಿ ಹಂಚುವುದು ಕಂಡುಬಂದಲ್ಲಿ ಚುನಾವಣಾ ಅಕ್ರಮ ಎಂದು ಪರಿಗಣಿಸಿ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸೂಚನೆ ನೀಡಿದರು.

ಚುನಾವಣೆ ಮುಂಚಿತವಾಗಿ 48 ಅಥವಾ 72 ಗಂಟೆ ಶೂನ್ಯ ಅವಧಿ ಎಂದು ಪರಿಗಣಿಸಲಾಗುವುದು. ಶೂನ್ಯ ಅವಧಿಯಲ್ಲಿ ಸಾಮೂಹಿಕ ಪ್ರಚಾರಕ್ಕೆ ಅವಕಾಶ ಇರುವುದಿಲ್ಲ. ಮನೆ ಮನೆ ಪ್ರಚಾರಕ್ಕೆ ಮಾತ್ರ ಅವಕಾಶವಿರಲಿದೆ ಎಂದು ಅವರು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.