ವಿಜಯಪುರ: ಇಲ್ಲಿನ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಖಾಲಿ ಇರುವ ಕುಲಪತಿ ಹುದ್ದೆಗೆ ನೂರಕ್ಕೂ ಅಧಿಕ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಪುರುಷ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಿದ್ದಾರೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗದ ಪ್ರೊ.ಲಕ್ಷ್ಮಿ, ಬೆಂಗಳೂರು ಕ್ಲಸ್ಟರ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ, ಲೇಖಕಿ ಪ್ರೊ.ಎಂ.ಎಸ್.ಆಶಾದೇವಿ, ಇದೇ ವಿಶ್ವವಿದ್ಯಾಲಯದ ತೆಲುಗು ಅಧ್ಯಯನ ವಿಭಾಗದ ಪ್ರೊ.ಜ್ಯೋತಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಪ್ರೊ.ಜಯಶ್ರೀ, ಬೆಂಗಳೂರು ವಿಶ್ವವಿದ್ಯಾಲಯದ ಸಮತಾ ದೇಶಮಾನೆ, ತುಮಕೂರು ವಿಶ್ವವಿದ್ಯಾಲಯದ ಎಂಬಿಎ ವಿಭಾಗದ ನೂರ್ ಅಫ್ಜಾ ಅರ್ಜಿ ಸಲ್ಲಿಸಿರುವವರಲ್ಲಿ ಪ್ರಮುಖರು ಆಗಿದ್ದಾರೆ.
ವಿಶ್ವವಿದ್ಯಾಲಯದ ಕುಲಪತಿ ಆಗಿದ್ದ ಪ್ರೊ. ಬಿ.ಕೆ.ತುಳಸಿಮಾಲಾ ಅವರು ಸೇವೆಯಿಂದ ನಿವೃತ್ತರಾದ ಬಳಿಕ ಪ್ರೊ. ಶಾಂತಾದೇವಿ ಟಿ. ಅವರು ಹಂಗಾಮಿ ಕುಲಪತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಘಂಟಿ ಅಧ್ಯಕ್ಷತೆಯಲ್ಲಿ ಶೋಧನಾ ಸಮಿತಿ
ಕುಲಪತಿ ನೇಮಕ ಸಂಬಂಧ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಫೆಬ್ರುವರಿ 10ರಂದು ನಿವೃತ್ತ ಕುಲಪತಿ ಮಲ್ಲಿಕಾ ಘಂಟಿ ಅವರ ನೇತೃತ್ವದಲ್ಲಿ ಶೋಧನಾ ಸಮಿತಿ ರಚಿಸಿದೆ. ಅರ್ಜಿ ಪರಿಶೀಲಿಸಿ ಯೋಗ್ಯರಾದ ಮೂವರ ಹೆಸರನ್ನು ಅಂತಿಮಗೊಳಿಸಿ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರಿಗೆ ಶಿಫಾರಸು ಮಾಡಬೇಕು. ಯುಜಿಸಿ ನಾಮನಿರ್ದೇಶಿತ ಸದಸ್ಯರಾದ ಹರಿಯಾಣದ ಕೇಂದ್ರೀಯ ವಿ.ವಿ ಕುಲಪತಿ ಪ್ರೊ.ಸುಷ್ಮಾ ಯಾದವ್ ರಾಜ್ಯಪಾಲರಿಂದ ನಾಮ ನಿರ್ದೇಶಿತ ಸದಸ್ಯರಾದ ಮಧ್ಯಪ್ರದೇಶದ ಅಹಿಲ್ಯಾದೇವಿ ವಿ.ವಿ.ಯ ವಿಶ್ರಾಂತ ಕುಲಪತಿ ಡಾ.ರೇನು ಜೈನ್ ಸಿಂಡಿಕೇಟ್ ನಾಮನಿರ್ದೇಶಿತ ಸದಸ್ಯರಾದ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿ.ವಿ.ಯ ವಿಶ್ರಾಂತ ಕುಲಪತಿ ಪ್ರೊ.ಎಲ್.ಗೋಮತಿ ದೇವಿ ಹಾಗೂ ಇಲಾಖೆಯ ಉಪ ಕಾರ್ಯದರ್ಶಿ ಶಶಿಧರ ಜಿ. ಸಮಿತಿಯಲ್ಲಿ ಇದ್ದಾರೆ.
63 ವರ್ಷ ವಯಸ್ಸಿನೊಳಗೆ ಇರುವವರು ಅರ್ಜಿ ಸಲ್ಲಿಸಲು ಅವಕಾಶವಿದೆ. ಪುರುಷರು ಅರ್ಜಿ ಸಲ್ಲಿಸಬಾರದು ಎಂಬ ನಿರ್ಬಂಧ ಇಲ್ಲ–ಪ್ರೊ.ಎಚ್.ಟಿ.ಪೋತೆ, ನಿರ್ದೇಶಕ ಕನ್ನಡ ಅಧ್ಯಯನ ವಿಭಾಗ ಗುಲಬರ್ಗಾ ವಿಶ್ವವಿದ್ಯಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.