ADVERTISEMENT

ಮುದ್ದೇಬಿಹಾಳ | ಹದಗೆಟ್ಟ ರಸ್ತೆ: ಸಂಚಾರಕ್ಕೆ ತೊಂದರೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 2:30 IST
Last Updated 1 ಮಾರ್ಚ್ 2026, 2:30 IST
ಮುದ್ದೇಬಿಹಾಳ ಆದರ್ಶ ವಿದ್ಯಾಲಯಕ್ಕೆ ತೆರಳುವ ತಿರುವು ರಸ್ತೆಯಲ್ಲಿ ಬಸ್ ಸಂಚಾರ
ಮುದ್ದೇಬಿಹಾಳ ಆದರ್ಶ ವಿದ್ಯಾಲಯಕ್ಕೆ ತೆರಳುವ ತಿರುವು ರಸ್ತೆಯಲ್ಲಿ ಬಸ್ ಸಂಚಾರ   

ಮುದ್ದೇಬಿಹಾಳ: ಪಟ್ಟಣದ ಹೊರವಲಯದಲ್ಲಿರುವ ಆದರ್ಶ ವಿದ್ಯಾಲಯ ಬಿದರಕುಂದಿಗೆ ಹೋಗುವ ರಸ್ತೆ ಸಂಪೂರ್ಣ ಕಿತ್ತು ಹದಗೆಟ್ಟು ಹೋಗಿದೆ. ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ದುರಸ್ತಿಗೊಳ್ಳದ ರಸ್ತೆ ವಿದ್ಯಾರ್ಥಿಗಳ ಸುಗಮ ಸಂಚಾರಕ್ಕೆ ಕುತ್ತು ತರುವ ಆತಂಕ ಮೂಡಿಸಿದೆ.

ಆದರ್ಶ ವಿದ್ಯಾಲಯ ಬಿದರಕುಂದಿ ಶಾಲೆಯಲ್ಲಿ 519 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ನೂತನವಾಗಿ ಪ್ರಾರಂಭಗೊಂಡ ಆದರ್ಶ ಪದವಿಪೂರ್ವ ಮಹಾವಿದ್ಯಾಲಯದಲ್ಲಿ 20 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹತ್ತಿರದಲ್ಲಿಯೇ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯೂ ಇದೆ. ಈ ಎಲ್ಲ ವಿದ್ಯಾರ್ಥಿಗಳು ನಿತ್ಯ ಇದೇ ಮಾರ್ಗವಾಗಿ ಸಂಚರಿಸುತ್ತಾರೆ.

ನಿತ್ಯ ಮುದ್ದೇಬಿಹಾಳ ಸಾರಿಗೆ ಘಟಕದಿಂದ 5 ಬಸ್‌ ಸಂಚಾರ ಮಾಡುತ್ತವೆ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಜಲ್ಲಿ ಕಲ್ಲುಗಳು ಎದ್ದು ಸಂಚಾರಕ್ಕೆ ತೊಂದರೆ ಆಗಿದೆ. ಮಕ್ಕಳನ್ನು ಶಾಲೆಗೆ ಬಿಡಲು ಪ್ರತಿದಿನ ನೂರಾರು ಪಾಲಕರು ದ್ವಿಚಕ್ರ ವಾಹನ ಮೂಲಕ ಸಂಚರಿಸುತ್ತಾರೆ. ಹಲವು ಬಾರಿ ದ್ವಿಚಕ್ರ ವಾಹನ ಸ್ಕಿಡ್ ಆಗಿ ಬಿದ್ದ ಉದಾಹರಣೆಗಳಿವೆ. ಶೀಘ್ರ ರಸ್ತೆ ದುರಸ್ತಿ ಪಡಿಸುವಂತೆ ಪಾಲಕರು ಸ್ಥಳೀಯ ಶಾಸಕ  ಸಿ‌.ಎಸ್.ನಾಡಗೌಡ ಮತ್ತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ವಿನಂತಿಸಿಕೊಂಡಿದ್ದಾರೆ ಆದರೂ ಪ್ರಯೋಜನವಾಗಿಲ್ಲ.

ADVERTISEMENT
ಮುದ್ದೇಬಿಹಾಳ ಬಿದರಕುಂದಿ ಆದರ್ಶ ವಿದ್ಯಾಲಯಕ್ಕೆ ಮಾರುತಿ ನಗರದ ಮೂಲಕ ತರಳುವ ರಸ್ತೆಯಲ್ಲಿ ಜಲ್ಲಿ ಕಲ್ಲು ಎದ್ದು ಹದಗೆಟ್ಟಿರುವುದು
ರಸ್ತೆ ದುರಸ್ತಿ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆಯುವಂತೆ ಆದರ್ಶ ವಿದ್ಯಾಲಯದ ಮುಖ್ಯಶಿಕ್ಷಕರಿಗೆ ತಿಳಿಸುತ್ತೇನೆ. ನಾನು ಕೂಡ ಶಾಸಕರ ಗಮನಕ್ಕೆ ತರುತ್ತೇನೆ
ಬಿ.ಎಸ್.ಸಾವಳಗಿ ಕ್ಷೇತ್ರ ಶಿಕ್ಷಣಾಧಿಕಾರಿ ಮುದ್ದೇಬಿಹಾಳ
ರಸ್ತೆ ನಿರ್ಮಾಣ ಕುರಿತು ಶಾಸಕ ಸಿ.ಎಸ್.ನಾಡಗೌಡರಿಗೆ ಮನವಿ ನೀಡಿದ್ದೇವೆ. ತಿರುವು ರಸ್ತೆ ಇರುವುದರಿಂದ ಬಸ್ಸುಗಳು ಹೋಗಲು ತೊಂದರೆ ಆಗುತ್ತಿದೆ. ಅಲ್ಲದೆ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಸೂಕ್ತ ಶೌಚಾಲಯದ ವ್ಯವಸ್ಥೆ ಇಲ್ಲ
ಯಲ್ಲಪ್ಪ ಮ್ಯಾಗೇರಿ ಎಸ್.ಡಿ.ಎಂ.ಸಿ ಸದಸ್ಯ ಆದರ್ಶ ವಿದ್ಯಾಲಯ ಮುದ್ದೇಬಿಹಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.