
ಮುದ್ದೇಬಿಹಾಳದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದ ಅಸ್ಕಿ ಫೌಂಡೇಷನ್ ಅಧ್ಯಕ್ಷ ಸಿ.ಬಿ. ಅಸ್ಕಿ ಮೃತರ ಕುಟುಂಬಗಳಿಗೆ ಫೌಂಡೇಷನ್‌ದಿಂದ ₹50 ಸಾವಿರ ಧನಸಹಾಯ ನೀಡಿದರು
ಮುದ್ದೇಬಿಹಾಳ: ತಾಲ್ಲೂಕಿನ ಶಿರೋಳ ರಸ್ತೆಯಲ್ಲಿರುವ ಕೆಬಿಜೆಎನ್‌ಎಲ್ ಎಡದಂಡೆ ಕಾಲುವೆಗೆ ಜಾರಿ ಬಿದ್ದಿದ್ದ ಮೂವರ ಪೈಕಿ ಇನ್ನಿಬ್ಬರ ಮೃತದೇಹಗಳು ಬುಧವಾರ ಬೆಳಿಗ್ಗೆ ಪತ್ತೆಯಾಗಿವೆ.
ಅಗ್ನಿಶಾಮಕ ಹಾಗೂ ಪೊಲೀಸ್ ಇಲಾಖೆಯ ಜಂಟಿ ಕಾರ್ಯಾಚರಣೆ ವೇಳೆ ಬೆಳಿಗ್ಗೆಯೇ ಬಸಮ್ಮ ಕೊಣ್ಣೂರ ಹಾಗೂ ರವಿ ಕೊಣ್ಣೂರ ಮೃತದೇಹಗಳನ್ನು ಹೊರಕ್ಕೆ ತೆಗೆದು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಕಳಿಸಲಾಯಿತು.
ಬಟ್ಟೆ ತೊಳೆಯಲೆಂದು ಹೋಗಿದ್ದ ಬಸಮ್ಮ ಕಾಲು ಜಾರಿ ಬಿದ್ದಾಗ ಆಕೆಯನ್ನು ರಕ್ಷಿಸಲು ಹೋದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಮೃತರ ತಂದೆ ಚೆನ್ನಪ್ಪ ಮಕ್ಕಳ ಸಾವಿನಲ್ಲಿ ಯಾವುದೇ ಸಂಶಯವಿಲ್ಲ. ಅವರು ಕಾಲುವೆಗೆ ಕಾಲು ಜಾರಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ನೆರವು: ಎಡದಂಡೆ ಕಾಲುವೆಯ ಅಕ್ಕಪಕ್ಕದಲ್ಲಿ ಒಂದು ಕಿ.ಮೀ ವರೆಗೆ ರಕ್ಷಣಾ ಗೋಡೆ ನಿರ್ಮಿಸಬೇಕು ಎಂದು ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಆಗ್ರಹಿಸಿದರು.
ಕಾಲುವೆಯಲ್ಲಿ ಬಿದ್ದು ಮೃತಪಟ್ಟ ಕೊಣ್ಣೂರ ಕುಟುಂಬದವರಿಗೆ ಸಾಂತ್ವನ ಹೇಳಿ ಮಾತನಾಡಿದ ಅವರು, ಇದನ್ನು ಅಪಾಯದ ವಲಯ ಎಂದು ಗುರುತಿಸಿ ರಕ್ಷಣಾ ಗೋಡೆ ನಿರ್ಮಿಸಲು ಕ್ರಮ ಜರುಗಿಸಬೇಕು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.