ADVERTISEMENT

ಮುದ್ದೇಬಿಹಾಳ | ಹೊಲಕ್ಕೆ ಕಾಲುವೆ ನೀರು ಮರೀಚಿಕೆ

ಕೆಬಿಜೆಎನ್‌ಎಲ್ ಎಡದಂಡೆ ಕಾಲುವೆಯಲ್ಲಿ ಆಗದ ಜಂಗಲ್ ಕಟಿಂಗ್

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 4:59 IST
Last Updated 31 ಡಿಸೆಂಬರ್ 2025, 4:59 IST
ಮುದ್ದೇಬಿಹಾಳ ತಾಲ್ಲೂಕು ಯರಝರಿ ಭಾಗದಲ್ಲಿ ಬರುವ ಕೆಬಿಜೆಎನ್‌ಎಲ್ ಎಡದಂಡೆ ಕಾಲುವೆ ಅಕ್ಕಪಕ್ಕದಲ್ಲಿ ವ್ಯಾಪಕವಾಗಿ ಮುಳ್ಳುಕಂಟಿಗಳು ಬೆಳೆದಿವೆ
ಮುದ್ದೇಬಿಹಾಳ ತಾಲ್ಲೂಕು ಯರಝರಿ ಭಾಗದಲ್ಲಿ ಬರುವ ಕೆಬಿಜೆಎನ್‌ಎಲ್ ಎಡದಂಡೆ ಕಾಲುವೆ ಅಕ್ಕಪಕ್ಕದಲ್ಲಿ ವ್ಯಾಪಕವಾಗಿ ಮುಳ್ಳುಕಂಟಿಗಳು ಬೆಳೆದಿವೆ   

ಮುದ್ದೇಬಿಹಾಳ: ಒಣಬೇಸಾಯದ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ನಿರ್ಮಿಸಿರುವ ಕಾಲುವೆಯಿಂದ ಹೊಲಗಳಿಗೆ ನೀರು ಪಡೆದುಕೊಳ್ಳಲು ರೈತರು ಪರದಾಡುತ್ತಿರುವ ಪರಿಸ್ಥಿತಿ ಮುದ್ದೇಬಿಹಾಳ ತಾಲ್ಲೂಕಿನ ಯರಝರಿ– ಹಂಡರಗಲ್ ಗ್ರಾಮದಲ್ಲಿ ಕಂಡು ಬಂದಿದೆ.

ಕೃಷ್ಣಾ ಭಾಗ್ಯ ಜಲ ನಿಗಮದ ಅಡಿಯಲ್ಲಿ ಬರುವ ಎಡದಂಡೆ ಮುಖ್ಯಕಾಲುವೆಯಲ್ಲಿ ಅಕ್ಕಪಕ್ಕದಲ್ಲಿ ವ್ಯಾಪಕವಾಗಿ ಮುಳ್ಳುಕಂಟಿಗಳು (ಜಂಗಲ್) ಬೆಳೆದಿದ್ದು, ರೈತರು ಜಮೀನುಗಳಿಗೆ ನೀರು ಹಾಯಿಸಿಕೊಳ್ಳಲು ಕಷ್ಟಪಡಬೇಕಾಗಿದೆ. ಅಧಿಕಾರಿಗಳು ಮಾತ್ರ ಜಂಗಲ್ ಬೆಳೆದೇ ಇಲ್ಲವೇನೋ ಎಂಬಂತೆ ತಮ್ಮ ಪಾಡಿಗೆ ಪ್ರತಿ ವರ್ಷ ಮುಂಗಾರು-ಹಿಂಗಾರು ಹಂಗಾಮಿನಲ್ಲಿ ನೀರು ಹರಿಸಿ ಮೌನವಾಗಿ ಕೂರುತ್ತಿರುವುದು ಅನ್ನದಾತನಿಗೆ ಸಂಕಷ್ಟವನ್ನೊಡ್ಡಿದೆ.

ಹಿಂಗಾರು ಹಂಗಾಮಿನಲ್ಲಿ ಬೆಳೆದಿರುವ ಜೋಳ, ಕಡಲೆ, ತೊಗರಿ, ಕುಸುಬೆ, ಗೋಧಿ, ಅಜವಾನ ಮೊದಲಾದ ಬೆಳೆಗಳಿಗೆ ನೀರು ಹರಿಸಿಕೊಳ್ಳಲು ಪರದಾಟ ಅನುಭವಿಸುತ್ತಿದ್ದಾರೆ.

ADVERTISEMENT

ಗೆದ್ದಲಮರಿ ಕಡೆಯಿಂದ ಯರಝರಿ ಕಡೆಗೆ ಬರುವ ಕೆಬಿಜೆಎನ್‌ಎಲ್ ಎಡದಂಡೆ ಕಾಲುವೆ ಮುಂದೆ ನೇಬಗೇರಿ ಕಡೆಗೆ ಸಾಗುತ್ತಿದ್ದು, ಇದರ ಅಕ್ಕಪಕ್ಕದಲ್ಲಿ ವ್ಯಾಪಕವಾಗಿ ಮುಳ್ಳು ಕಂಟಿ ಬೆಳೆದು ನಿಂತಿದೆ. ಆದರೆ, ಅಧಿಕಾರಿಗಳು ಮಾತ್ರ ಇದರ ಸ್ವಚ್ಛತೆಗೆ ಕ್ರಮ ಕೈಗೊಂಡಿಲ್ಲ ಎಂಬ ದೂರುಗಳು ರೈತರಿಂದ ಕೇಳಿ ಬಂದಿವೆ. ಎರಡ್ಮೂರು ವರ್ಷಗಳ ಹಿಂದೆ ಕಾಲುವೆ ಜಂಗಲ್ ಕಟಿಂಗ್ ಮಾಡಿದ್ದು ಬಿಟ್ಟರೆ ಈವರೆಗೂ ಮಾಡಿಲ್ಲ ಎಂದು ರೈತರು ದೂರಿದ್ದಾರೆ.
 
ಶಿಥಿಲ ಕಾಲುವೆ, ಬಸಿ ಇಡುವ ಜಮೀನು:

ಯರಝರಿ, ಗೆದ್ದಲಮರಿ ಭಾಗದಲ್ಲಿ ಬರುವ ಕಾಲುವೆ ಅಲ್ಲಲ್ಲಿ ಶಿಥಿಲಗೊಂಡಿದ್ದು ರೈತರ ಜಮೀನಿನೊಳಕ್ಕೆ ನೀರು ಬಸಿಯಿಟ್ಟು ಸವಳು ಜವಳು ಸಮಸ್ಯೆ ಸೃಷ್ಟಿಸಿದೆ. ಆದರೂ ಕಾಲುವೆ ಮರುನವೀಕರಣ ಕಾರ್ಯವನ್ನು ಅಧಿಕಾರಿಗಳು ಕೈಗೊಂಡಿಲ್ಲ ಎಂದು ರೈತರು ಅಲವತ್ತುಕೊಂಡಿದ್ದಾರೆ. ಆಯ್ದ ಭಾಗಗಳಲ್ಲಿ ಮಾತ್ರ ಕಾಲುವೆ ನವೀಕರಣ ಕಾರ್ಯ ಮಾಡಿ ಕೈತೊಳೆದುಕೊಂಡಿದ್ದಾರೆ. ಹೆಚ್ಚು ಹಾನಿಯಾಗಿರುವ ಭಾಗದಲ್ಲಿ ದುರಸ್ತಿ ಕಾರ್ಯವನ್ನಾದರೂ ಅಧಿಕಾರಿಗಳು ಕೈಗೊಳ್ಳಬೇಕು ಎಂಬ ಆಗ್ರಹ ರೈತರಿಂದ ಕೇಳಿ ಬಂದಿವೆ.

ಮುದ್ದೇಬಿಹಾಳ ತಾಲ್ಲೂಕು ಯರಝರಿ ಭಾಗದಲ್ಲಿ ಬರುವ ಕೆಬಿಜೆಎನ್‌ಎಲ್ ಎಡದಂಡೆ ಕಾಲುವೆ ಅಕ್ಕಪಕ್ಕದಲ್ಲಿ ವ್ಯಾಪಕವಾಗಿ ಮುಳ್ಳುಕಂಟಿಗಳು ಬೆಳೆದಿರುವುದು.

ಕೆನಾಲ್ ಅಕ್ಕಪಕ್ಕದಲ್ಲಿ ಬೆಳೆದಿದ್ದ ಮುಳ್ಳುಕಂಟಿಗಳನ್ನು ತೆರವುಗೊಳಿಸಲು ಮನವಿ ಮಾಡಿದ್ದೇವು. ಆದರೆ ಅರ್ಧಮರ್ಧವಾಗಿ ಮಾಡಿ ಹೋಗಿದ್ದಾರೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ

-ಸಾಹೇಬಗೌಡ ಮೊಕಾಶಿ ರೈತರು ಹಂಡರಗಲ್

ನೀರಿನ ಹರಿವು ಸ್ಥಗಿತಗೊಂಡ ಬಳಿಕ ಮುಳ್ಳುಕಂಟಿ ತೆರವು ಕಾರ್ಯ ಕೈಗೆತ್ತಿಕೊಳ್ಳಲು ಪ್ರಸ್ತಾವ ಸಿದ್ಧಪಡಿಸಲಾಗಿದ್ದು ಆದ್ಯತೆ ಮೇರೆಗೆ ಎಡದಂಡೆಯ ಜಂಗಲ್ ಕಟಿಂಗ್ ಕಾರ್ಯ ಕೈಗೊಳ್ಳಲಾಗುವುದು

- ಅಶೋಕ ಬಿರಾದಾರ ಎಇಇ ಎಎಲ್‌ಬಿಸಿ ಕಾಲುವೆ ವಲಯ ಕೆಬಿಜೆಎನ್‌ಎಲ್ ಆಲಮಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.