
ಮುದ್ದೇಬಿಹಾಳ: ಈ ಭಾಗದಲ್ಲಿ ಈರುಳ್ಳಿಯ ಉತ್ತಮ ಫಸಲು ಬಂದಿದ್ದು, ಕಟಾವು ಮಾಡಿ ಮಾರುಕಟ್ಟೆಗೆ ಕಳುಹಿಸಬೇಕಾದ ಸಮಯದಲ್ಲೇ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಪಾತಾಳಕ್ಕೆ ಕುಸಿದಿದ್ದು ರೈತರು ಹೊಲದಲ್ಲಿ ಬೆಳೆದ ಬೆಳೆ ಕಟಾವು ಮಾಡಿದರೂ ಖರ್ಚು ಬರುವುದಿಲ್ಲ ಎಂದು ನಿರಾಸೆಯ ಮುಖ ಹೊತ್ತು ಬೆಳೆಯನ್ನು ಹೊಲದಲ್ಲಿಯೇ ಹರಗುತ್ತಿರುವ ದೃಶ್ಯಗಳು ಕಂಡು ಬಂದಿವೆ.
ಈರುಳ್ಳಿ ಒಳ್ಳೆಯ ಬೆಲೆ ತಂದುಕೊಡಲಿದೆ ಎಂದು ಬಿತ್ತನೆ ಮಾಡಿದ್ದ ರೈತರು ಈಗ ಯಾಕಾದರೂ ಈರುಳ್ಳಿ ಹಾಕಿದೆವು ಎಂದು ಕೊರಗುವಂತಾಗಿದೆ. ಈರುಳ್ಳಿ ದರ ತೀರಾ ಕುಸಿದಿದೆ. ಇದೀಗ ಮಾರುಕಟ್ಟೆಯಲ್ಲಿ 50 ಕೆಜಿ ಈರುಳ್ಳಿಯ ಮೂಟೆಗೆ ಕೇವಲ ₹ 1800-2200 ದಂತೆ ಮೂಟೆ ಹಾಕಿಕೊಂಡು ಬಂದರೆ ಬಾಡಿಗೆಯೇ ₹ 200 , ಬೆಳೆ ಕಟಾವು ಮಾಡುವುದಕ್ಕೆ ₹ 50 ಕೊಡಬೇಕು. ರೈತನಿಗೆ ಬೆಳೆಯ ಖರ್ಚು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮಾರುಕಟ್ಟೆಯಲ್ಲಿ ಈರುಳ್ಳಿ ಕೆಜಿಗೆ ₹ 10-20 ಲೆಕ್ಕದಲ್ಲಿ ಮಾರಾಟವಾಗುತ್ತಿದ್ದು ಈರುಳ್ಳಿ ಕೊರತೆ ಆದಾಗ ಹೊರ ರಾಜ್ಯ, ವಿದೇಶದಿಂದ ಆಮದು ಮಾಡಿಕೊಳ್ಳುವ ಸರ್ಕಾರ ನಮ್ಮ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆದಾಗ ಅದಕ್ಕೆ ಸೂಕ್ತ ಬೆಂಬಲ ಬೆಲೆ ಒದಗಿಸುವ ಕೆಲಸ ಮಾಡುತ್ತಿಲ್ಲ ಎಂಬ ಕೊರಗು ರೈತರಿಗೆ ಇದೆ. ಈ ಮೊದಲು ಒಂದು ಕೆಜಿ ಈರುಳ್ಳಿಗೆ ಇದ್ದ ದರ ಇದೀಗ ಐದು- ಹತ್ತು ಕೆಜಿಗೆ ಇದೆ. ಅಷ್ಟೊಂದು ದರ ಕುಸಿದಿದೆ ಎಂದು ಈರುಳ್ಳಿ ಬೆಳೆಗಾರರಾದ ತಾಲ್ಲೂಕಿನ ಮಲಗಲದಿನ್ನಿ ಗ್ರಾಮದ ರೈತ ಶಿವರಾಯ ಪ್ಯಾಟಿ ಹೇಳುತ್ತಾರೆ.
ಪ್ಯಾಟಿ ಅವರು ತಮ್ಮ ಎರಡು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದಾರೆ. ಬೆಳೆ ಚೆನ್ನಾಗಿಯೇ ಬಂದಿತ್ತು.ಇದಕ್ಕಾಗಿ ಸುಮಾರು ₹ 50 ಸಾವಿರದಿಂದ ಒಂದು ಲಕ್ಷ ಖರ್ಚು ಮಾಡಿದ್ದಾರೆ. ಕಟಾವು ಮಾಡಿದರೆ ಸಾವಿರ ಮೂಟೆಯಾಗುತ್ತದೆ. ಆದರೆ, ಒಂದೆಡೆ ಅತಿವೃಷ್ಟಿ, ಬೆಲೆ ಕುಸಿತದ ಪರಿಣಾಮ ಅಳಿದುಳಿದ ಒಳ್ಳೆಯ ಬೆಳೆಯನ್ನು ಕಟಾವು ಮಾಡಿ, ಮಾರೋಣ ಎಂದರೆ ಮಾರುಕಟ್ಟೆಯಲ್ಲಿ ಕೇಳುವವರೇ ಇಲ್ಲದಂತಾಗಿದೆ. ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಕಟಾವು ಮಾಡಿದ ಖರ್ಚು ಸಹ ಬರುವುದಿಲ್ಲ ಎನ್ನುತ್ತಾರೆ.
ಜಿಲ್ಲೆಯಾದ್ಯಂತ ರೈತರು ಈಗ ಈರುಳ್ಳಿ ಕಟಾವು ಮಾಡಿದರೆ ಖರ್ಚು ಮೈ ಮೇಲೆ ಬರುತ್ತದೆ ಎಂದು ಹೊಲದಲ್ಲಿಯೇ ಗೊಬ್ಬರವಾದರೂ ಆಗುತ್ತದೆ ಎಂದು ಹರಗುತ್ತಿರುವ ದೃಶ್ಯ ಸರ್ವೆ ಸಾಮಾನ್ಯವಾಗಿ ಕಂಡು ಬರುತ್ತಿದೆ.ಈಚೆಗೆ ಕುಂಟೋಜಿಯ ರೈತ ಬಸಲಿಂಗಪ್ಪ ಹೂಗಾರ ಎಂಬುವರು ಈರುಳ್ಳಿ ಮಾರಾಟ ಮಾಡಿದಾಗ ಲಾಭದ ಬದಲು ಅವರ ಜೇಬಿನಿಂದಲೇ ₹ 200 ಹೆಚ್ಚು ಖರ್ಚಾಗಿತ್ತು ಎಂದು ಹೇಳಿಕೊಂಡರು.
ಹಾಕಿದ ಈರುಳ್ಳಿ ಬೆಳೆ ಚೆನ್ನಾಗಿ ಬಂದರೂ ಮಾರುಕಟ್ಟೆಯಲ್ಲಿ ದರ ಪಾತಳಕ್ಕೆ ಕುಸಿದಿರುವುದರಿಂದ ಈರುಳ್ಳಿ ಕೂಲಿಗೆ ಆಳಿನ ಪಗಾರ ಖರ್ಚು ಅಂದಾಜು 1 ಲಕ್ಷ ಮಾಡಲಾಗಿದೆ. ಈರುಳ್ಳಿಯನ್ನು ಕಟಾವು ಮಾಡದೆ ಹರಗುತ್ತಿದ್ದೇವೆ. ನಾವೇ ಬೆಳೆದಿದ್ದನ್ನು ನಾವು ಹರಗಬೇಕಾದ ಪರಿಸ್ಥಿತಿ ಬಂದಿದ್ದನ್ನು ನೋಡಿ ನೋವಾಗುತ್ತಿದೆ.ಶಂಕರಗೌಡ ಪಾಟೀಲ,ಇಂಗಳಗೇರಿ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.