ADVERTISEMENT

ಮುದ್ದೇಬಿಹಾಳ | ಯುಜಿಡಿ: ಗೋಳು ಕೇಳುವವರಾರು?

ಸರ್ಕಾರದಿಂದ ಕೋಟ್ಯಂತರ ರೂಪಾಯಿ ಅನುದಾನ, 13 ವರ್ಷ ಗತಿಸಿದರೂ ನಿಲ್ಲದ ಗೋಳಾಟ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 5:30 IST
Last Updated 25 ಫೆಬ್ರುವರಿ 2026, 5:30 IST
ಮುದ್ದೇಬಿಹಾಳ ಪಟ್ಟಣದ ವಿದ್ಯಾನಗರದ ಜೆ.ಸಿ. ಶಾಲೆಯ ಹತ್ತಿರ  ಒಳಚರಂಡಿಯಿಂದ ನೀರು ಉಕ್ಕಿ  ಹರಿಯುತ್ತಿದೆ
ಮುದ್ದೇಬಿಹಾಳ ಪಟ್ಟಣದ ವಿದ್ಯಾನಗರದ ಜೆ.ಸಿ. ಶಾಲೆಯ ಹತ್ತಿರ  ಒಳಚರಂಡಿಯಿಂದ ನೀರು ಉಕ್ಕಿ  ಹರಿಯುತ್ತಿದೆ   

ಮುದ್ದೇಬಿಹಾಳ: ಪಟ್ಟಣದಲ್ಲಿ ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಿಸಲಾಗಿರುವ ಒಳ ಚರಂಡಿ ವ್ಯವಸ್ಥೆ ಹದಗೆಟ್ಟಿದ್ದು, ಎಲ್ಲೆಂದರಲ್ಲಿ ಕೊಳಚೆ ನೀರು ಮ್ಯಾನ್‌ಹೋಲ್‌ಗಳಲ್ಲಿ ಉಕ್ಕಿ ಹರಿಯುತ್ತಿದ್ದು, ಸಾರ್ವಜನಕರಿಗೆ ತೊಂದರೆಯಾಗಿದೆ. 

ಪಟ್ಟಣದ ಮಾರುತಿ ನಗರ, ಹೂಡ್ಕೋ ಬಡಾವಣೆ, ಕಿಲ್ಲಾ ಗಲ್ಲಿ, ವಿದ್ಯಾನಗರ ಸೇರಿದಂತೆ ಹಲವು ಗಲ್ಲಿಗಳಲ್ಲಿ ಈ ಒಳಚರಂಡಿ ಚೇಂಬರ್ ತುಂಬಿಕೊಂಡು ಅದರಿಂದ ಕಲುಷಿತ ನೀರು ರಸ್ತೆಯ ಮೇಲೆ ಹರಿದು, ದುರ್ವಾಸನೆ ಹರಡುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಈ ಕುರಿತು ಹಲವು ಬಾರಿ ಪುರಸಭೆ, ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗುತ್ತಿಲ್ಲ ಎಂದು ಅನೇಕ ಬಡಾವಣೆಗಳ ನಿವಾಸಿಗಳು ಆರೋಪಿಸಿದ್ದಾರೆ.

ADVERTISEMENT

ಯೋಜನೆ ಮಾಹಿತಿ:

2013–18 ರಲ್ಲಿ ಅಂದಿನ ಕಾಂಗ್ರೆಸ್ ಶಾಸಕ ಸಿ.ಎಸ್.ನಾಡಗೌಡ ಅವರು ಪಟ್ಟಣವನ್ನು ಸುಂದರವಾಗಿರಿಸಲು ₹50  ಕೋಟಿ ವೆಚ್ಚದಲ್ಲಿ ಈ ಯೋಜನೆಗೆ ಚಾಲನೆ ನೀಡಿದ್ದರು. ಬಳಿಕ ಬಿಜೆಪಿ ಶಾಸಕರಾದ ಎ.ಎಸ್.ಪಾಟೀಲ ನಡಹಳ್ಳಿ ಅವರು ಇದಕ್ಕೆ ಮತ್ತಷ್ಟು ಅನುದಾನ ಒದಗಿಸಿದರು. ಸುಮಾರು 13 ವರ್ಷ ಗತಿಸಿದರೂ, ಕೋಟ್ಯಂತರ ರೂಪಾಯಿ ಹಣ ನೀಡಿದರೂ ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲ.

ಶಾಸಕರು ಅನುದಾನ ತಂದರೂ ಅಧಿಕಾರಿಗಳಿಂದ ಅವೈಜ್ಞಾನಿಕವಾಗಿ ಈ ಯೋಜನೆಯ ಕಾಮಗಾರಿ ನಡೆದಿದೆ. ಚೇಂಬರ್ ನಿಂದ ಚೇಂಬರ್‌ಗೆ ಹಾಕುವ ಪೈಪ್‌ಗಳು ಸಣ್ಣ ಗಾತ್ರದಲ್ಲಿ ಹಾಕಿದ ಪರಿಣಾಮ ಈ ಸಮಸ್ಯೆ ಉದ್ಭವವಾಗಿದೆ. ಬೇರೆ ನಗರ, ಪಟ್ಟಣಗಳಿಗೆ ಹೋಲಿಸಿದರೆ ಮುದ್ದೇಬಿಹಾಳ ಪಟ್ಟಣದ ಒಳಚರಂಡಿ ಯೋಜನೆಯ ಪೈಪ್‌ಗಳು ಸಣ್ಣ ಗಾತ್ರದಲ್ಲಿ ಇವೆ.. ಅಲ್ಲದೇ ನಿರ್ಮಾಣವಾಗದ ಚೇಂಬರ್‌ಗಳು ಕಳಪೆಯಾಗಿರುವ ಕಾರಣ ಭಾರಿ ವಾಹನಗಳ ಓಡಾಟಕ್ಕೆ ಕುಸಿದು ಬಿದ್ದಿವೆ ಎಂಬ ಆರೋಪ ಕೇಳಿ ಬಂದಿದೆ.

ಗೊಂದಲದ ಉತ್ತರ: ಪ್ರತಿ ಗಲ್ಲಿಗಳಲ್ಲಿ ಸಂಪೂರ್ಣವಾಗಿ ಕಾಮಗಾರಿ ಆಗದಿದ್ದರೂ ಅದಕ್ಕೆ ಈಗಾಗಲೇ ಸಾರ್ವಜನಿಕರು ತಮ್ಮ ಮನೆಯಿಂದ ಶೌಚಾಲಯ, ಬಾತ್‌ ರೂಂ ಪೈಪ್‌ಗಳ ಸಂಪರ್ಕ ಮಾಡಿದ್ದಾರೆ. ಇದರಿಂದ ಚೇಂಬರ್ ತುಂಬಿಕೊಂಡು ರಸ್ತೆಯ ಮೇಲೆ, ಮನೆಯ ಮುಂದೆ ನೀರು ನಿಂತು ಗಬ್ಬುವಾಸನೆ ಬರತೊಡಗಿದೆ.

ಈ ಕುರಿತು ಪುರಸಭೆ ಅಧಿಕಾರಿಗಳಿಗೆ ಕೇಳಿದರೆ, ಒಳಚರಂಡಿ ನಿರ್ಮಾಣ ಮಾಡಿದ ಅಧಿಕಾರಿಗಳು ನಮಗೆ ಇನ್ನೂ ಅದನ್ನು ಒಪ್ಪಿಸಿಲ್ಲ ಎಂದು ಹೇಳುತ್ತಿದ್ದಾರೆ. ಈ ಅವೈಜ್ಞಾನಿಕ ಒಳಚರಂಡಿಯ ಗೋಳಿನ ಸಾರ್ವಜನಿಕರ ಸಮಸ್ಯೆ ಕೇಳುವವರು ಯಾರು ಎಂಬ ಪ್ರಶ್ನೆ ಹುಟ್ಟಿದೆ.

ಎತ್ತರದ ಚೇಂಬರ್ ನಿರ್ಮಾಣ: ಪ್ರತಿನಿತ್ಯ ಚೇಂಬರ್‌ನಿಂದ ಹರಿಯುತ್ತಿರುವ ಕಲುಷಿತ ನೀರಿಗೆ ಬೇಸತ್ತ ನಿವಾಸಿಗಳು ಸ್ವ ಖರ್ಚಿನಲ್ಲಿ ಅದೇ ಚೇಂಬರ್‌ಗೆ ಎತ್ತರವಾದ ಕಟ್ಟಡ ಕಟ್ಟಿ ನೀರು ಬಾರದಂತೆ ಕ್ರಮ ಕೈಗೊಂಡಿದ್ದಾರೆ. ನಿವಾಸಿಗಳಿಂದ ಸಂಪೂರ್ಣ ಮನೆಯ ತೆರಿಗೆ ಪಡೆಯುವ ಪುರಸಭೆ ಅಧಿಕಾರಿಗಳು ಒಳಚರಂಡಿ ಸರಿಪಡಿಸಲು ಹಿಂದೇಟು ಹಾಕುತ್ತಿರುವುದು ಖಂಡನೀಯ ಎಂದು ಸಾರ್ವಜನಿಕರು ದೂರಿದ್ದಾರೆ.

ಮುದ್ದೇಬಿಹಾಳ ಪಟ್ಟಣದ ಮಾರುತಿ ನಗರದಲ್ಲಿ ಒಳಚರಂಡಿಯಿಂದ ಬರುವ ಕಲುಷಿತ ನೀರಿಗೆ ಬೇಸತ್ತು ನಿವಾಸಿಗಳು ಚೇಂಬರ್ ಎತ್ತರಿಸಿದ್ದಾರೆ

ಒಳಚರಂಡಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು ಪಟ್ಟಣದಲ್ಲಿ ಬಹುತೇಕ ಇಂತಹ ಸಮಸ್ಯೆ ಇದೆ. ಇದನ್ನು ಬೇಗ  ದುರಸ್ತಿ ಮಾಡಬೇಕು 

– ಶಿವಪುತ್ರ ಅಜಮನಿ ನಿವಾಸಿ ಮುದ್ದೇಬಿಹಾಳ

ಒಳಚರಂಡಿ ಸುವ್ಯವಸ್ಥೆಗೆ ಕ್ರಮ 15 ದಿನಗಳ ಹಿಂದೆ ಒಳಚರಂಡಿ ಯೋಜನೆ ನಮಗೆ ಹಸ್ತಾಂತರಿಸಿದ್ದಾರೆ. ನಾನು ಪ್ರತಿ ವಾರ್ಡ್‌ವಾರು ಸರ್ವೆ ಮಾಡಿಸಿದ್ದೇವೆ. ಈಗ ₹34 ಕೋಟಿ ಹಣ ಅನುದಾನ ನೀಡಲಿದ್ದು ಆದಷ್ಟು ಬೇಗ ಒಳಚರಂಡಿ ವ್ಯವಸ್ಥೆ ಸರಿಪಡಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.