ADVERTISEMENT

ಮುದ್ದೇಬಿಹಾಳ: ನಾಟಕ ನೋಡಲು ಬಂದವರು ಬದುಕಿನ ಪಯಣ ಮುಗಿಸಿದರು

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2024, 0:27 IST
Last Updated 7 ಸೆಪ್ಟೆಂಬರ್ 2024, 0:27 IST
ಮುದ್ದೇಬಿಹಾಳ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಹಾಕಿದ್ದ ಮೃತದೇಹಗಳನ್ನು ಅವರ ಸಂಬಂಧಿಕರು, ಸ್ನೇಹಿತರು ನೋಡಿದರು
ಮುದ್ದೇಬಿಹಾಳ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಹಾಕಿದ್ದ ಮೃತದೇಹಗಳನ್ನು ಅವರ ಸಂಬಂಧಿಕರು, ಸ್ನೇಹಿತರು ನೋಡಿದರು   

ಮುದ್ದೇಬಿಹಾಳ: ಜಾತ್ರೆಯಲ್ಲಿ ನಾಟಕ ನೋಡಲು ಬಂದವರು ತಮ್ಮ ಬದುಕಿನ ಪಯಣವನ್ನೇ ಮುಗಿಸಿದ್ದಾರೆ. ರಸ್ತೆಯನ್ನು ದಾಟುತ್ತಿದ್ದ ಯುವಕರ ಗುಂಪಿಗೆ ಅತೀ ವೇಗದಲ್ಲಿ ಬಂದ ಬೈಕ್‌ವೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೂವರು ಸಾವನ್ನಪ್ಪಿ ಐವರು ಗಾಯಗೊಂಡಿರುವ ಘಟನೆ ತಾಲ್ಲೂಕಿನ ಕುಂಟೋಜಿ ಗ್ರಾಮದ ಪಿಕೆಪಿಎಸ್ ಬಳಿ ಗುರುವಾರ ರಾತ್ರಿ 11.10 ಸುಮಾರಿಗೆ ನಡೆದಿದೆ.

ಘಟನೆಯಲ್ಲಿ ದೇವರಹಿಪ್ಪರಗಿ ತಾಲ್ಲೂಕು ಹಂಚಲಿಯ ಅನೀಲ ಮಲ್ಲಪ್ಪ ಕೈನೂರ (27), ಬೈಕ್ ಸವಾರ ತಾಳಿಕೋಟಿ ತಾಲ್ಲೂಕಿನ ಗೊಟಖಂಡಕಿಯ ನಿಂಗರಾಜ ದೇವೇಂದ್ರಪ್ಪ ಚೌಧರಿ (22), ಮುದ್ದೇಬಿಹಾಳ ತಾಲ್ಲೂಕಿನ ಮಲಗಲದಿನ್ನಿಯ ಉದಯಕುಮಾರ ರಮೇಶ ಪ್ಯಾಟಿ (19) ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಮಲಗಲದಿನ್ನಿಯ ರಾಯಪ್ಪ ಮಹಾಂತಪ್ಪ ಬಾಗೇವಾಡಿ (24) ಹಾಗೂ ಹಣಮಂತ ಹುಲ್ಲಪ್ಪ ಕುರಬಗೌಡರ (18) ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಮಲಗಲದಿನ್ನಿಯ ಶಾಹೀದ ಕಾಶೀಮಸಾಬ ಹುನಗುಂದ (18), ಪ್ರಶಾಂತ ಹುಲ್ಲಪ್ಪ ಕುರುಬಗೌಡರ (16) ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ADVERTISEMENT

ಘಟನೆ ವಿವರ: ಕುಂಟೋಜಿ ಶ್ರೀ ಬಸವೇಶ್ವರ ಜಾತ್ರೆಯಲ್ಲಿ ನಾಟಕ ವೀಕ್ಷಿಸಲು ಮಲಗಲದಿನ್ನಿಯಿಂದ ಕುಂಟೋಜಿ ಗ್ರಾಮಕ್ಕೆ ಬಂದಿದ್ದ ಯುವಕರು ರಸ್ತೆ ಬದಿ ವಾಹನ ನಿಲ್ಲಿಸಿ ಮೂತ್ರವಿಸರ್ಜನೆಗೆಂದು ರಸ್ತೆ ದಾಟುವ ಸಮಯದಲ್ಲಿ ತಾಳಿಕೋಟಿಯಿಂದ ಅತಿ ವೇಗದಿಂದ ಬಂದ ಬೈಕ್ ಸವಾರ ನಿಂಗರಾಜ ಚೌಧರಿ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಬೈಕ್ ಮೇಲೆ ಇದ್ದ ಇಬ್ಬರು ಹಾಗೂ ರಸ್ತೆ ಮೇಲೆ ಇದ್ದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳುಗಳಿಗೆ ರಾತ್ರಿಯೇ ತಾಲ್ಲೂಕು ಆಸ್ಪತ್ರೆಯಡಾ. ಪರಶುರಾಮ ವಡ್ಡರ ನೇತೃತ್ವದಲ್ಲಿ  ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ, ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸೈ ಸಂಜಯ ತಿಪರೆಡ್ಡಿ ಭೇಟಿ ನೀಡಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯಲ್ಲಿ ಇಬ್ಬರು ತೀವ್ರ ನಿಗಾ ಘಟಕದಲ್ಲಿದ್ದವರಲ್ಲಿ ಒಬ್ಬ ಪ್ರಜ್ಞೆ ಕಳೆದುಕೊಂಡಿದ್ದು, ಆತನೂ ಮೃತಪಟ್ಟಿದ್ದಾನೆ ಎಂದು ಶುಕ್ರವಾರ ಬೆಳಿಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದರು. ಆದರೆ ಮಧ್ಯಾಹ್ನದ ಹೊತ್ತಿಗೆ ಆತನಿಗೆ ಪ್ರಜ್ಞೆ ಬಂದಿದ್ದು ಇನ್ನೂ ಜೀವಂತವಾಗಿದ್ದಾನೆ ಎಂದು ಗಾಯಾಳುಗಳ ಹೇಳಿಕೆ ದಾಖಲಿಸಿಕೊಳ್ಳಲು ತೆರಳಿದ್ದ ಎಎಸ್‌ಐ ಅಪ್ಪಾಸಾಹೇಬ ಟಕ್ಕಳಕಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.