ADVERTISEMENT

ಅವಹೇಳನಕಾರಿ ಪೋಸ್ಟ್‌ಗೆ ಕಾನೂನು ಕ್ರಮ: ದೂಳಗೌಡ ಪಾಟೀಲ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 5:32 IST
Last Updated 29 ಡಿಸೆಂಬರ್ 2025, 5:32 IST
ತಾಲ್ಲೂಕಿನ ಬಾವನ ಸೌಂದತ್ತಿ ಗ್ರಾಮದಲ್ಲಿ ರವಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಪಂಚಾಯತಿಯಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ದಾಖಲೆಗಳನ್ನು ಪ್ರದರ್ಶಿಸಿದರು.
ತಾಲ್ಲೂಕಿನ ಬಾವನ ಸೌಂದತ್ತಿ ಗ್ರಾಮದಲ್ಲಿ ರವಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಪಂಚಾಯತಿಯಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ದಾಖಲೆಗಳನ್ನು ಪ್ರದರ್ಶಿಸಿದರು.   

ರಾಯಬಾಗ: ಬಾವನಸೌಂದತ್ತಿ ಗ್ರಾಮ ಪಂಚಾಯಿತಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಹಾಗೂ ಅವಾಚ್ಯ ಶಬ್ದಗಳನ್ನು ಬಳಸಿ ನಿಂದನೆ ನಡೆಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮ ಪಂಚಾಯಿತಿ ಸದಸ್ಯ ದೂಳಗೌಡ ಪಾಟೀಲ ಎಚ್ಚರಿಸಿದರು.

ತಾಲೂಕಿನ ಬಾವನಸೌಂದತ್ತಿ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಭಾನುವಾರ ಮಾತನಾಡಿದ ಅವರು, ಸ್ವಹಿತಾಸಕ್ತಿಯಿಂದ ನಡೆದುಕೊಳ್ಳುತ್ತಿರುವ ಗ್ರಾಮದ ರಮೇಶ ಬೆಣ್ಣೆ ಎಂಬ ವ್ಯಕ್ತಿ ಪಂಚಾಯಿತಿಯಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಸರಿಯಾದ ಮಾಹಿತಿ ಪಡೆಯದೇ, ವಿನಾಕಾರಣ ಗ್ರಾಮ ಪಂಚಾಯಿತಿ ಹಾಗೂ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಹಾಗೂ ನಿಂದನೆ ಮಾಡುತ್ತಿರುವುದನ್ನು ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರೆಲ್ಲರೂ ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದರು.

ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳುವವರಿಗೆ ಯಾವುದೇ ಅಡ್ಡಿಯಿಲ್ಲ. ಗ್ರಾಮಕ್ಕೆ ಭೇಟಿ ನೀಡಿ ಪಂಚಾಯಿತಿಯಿಂದ ಕೈಗೊಂಡಿರುವ ಕಾಮಗಾರಿಗಳನ್ನು ಪರಿಶೀಲಿಸಿ, ಬೇಕಾದ ಮಾಹಿತಿ ಪಡೆಯಲು ಸಂಪೂರ್ಣ ಅವಕಾಶವಿದೆ. ಆದರೆ ಯಾವುದೇ ಪುರಾವೆ ಇಲ್ಲದೆ ಪಂಚಾಯಿತಿ ಹಾಗೂ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಸುಳ್ಳು ಆರೋಪ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ADVERTISEMENT

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸವದತ್ತಿವಾಡಿಯ ರಮೇಶ ಬೆಣ್ಣೆ ತನ್ನ ಕಾನೂನುಬಾಹಿರ ಕೆಲಸಗಳನ್ನು ಮಾಡಿಕೊಡದೇ ಇರುವ ಕಾರಣಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾನೆ ಎಂದು ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ ಹಾಗೂ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳನ್ನು ಮಾಡುತ್ತಿರುವ ಖಾಸಗಿ ವ್ಯಕ್ತಿಯು ಜ.15ರ ಒಳಗಾಗಿ ಆರೋಪ ಸಾಬೀತುಪಡಿಸಿದಲ್ಲಿ, ವೈಯಕ್ತಿಕವಾಗಿ ₹1 ಲಕ್ಷ ಬಹುಮಾನ ನೀಡುವುದಾಗಿ ಗ್ರಾಮ ಪಂಚಾಯಿತಿ ಸದಸ್ಯ ಅನೀಲ ಹಂಜೆ ಘೋಷಿಸಿದರು.

ಪಂಚಾಯತಿ ಅಧ್ಯಕ್ಷ ರಾಮಚಂದ್ರ ಕಾಟೆ, ಉಪಾಧ್ಯಕ್ಷ ಅಜಾದ ತಾಶಿವಾಲೆ, ಸಿ.ಬಿ.ಕೆ.ಎಸ್.ಎಸ್.ಕೆ. ಉಪಾಧ್ಯಕ್ಷ ತಾತ್ಯಾಸಾಹೇಬ ಕಾಟೆ, ಪಿಡಿಒ ಎಸ್.ಎಸ್. ನ್ಯಾಮಗೌಡ ಸೇರಿದಂತೆ ಅನೀಲ ಹಂಜೆ, ಜಿನೇಶ್ವರ ಮಗದುಮ್ಮ, ಎ.ಟಿ. ಕೂಗೆ, ಅಜೀತ ಕಾಮಗೌಡ, ಕುಂತಿನಾಥ ಮಗದುಮ್ಮ, ರಾಜಗೌಡ ಪಾಟೀಲ, ಕಾಕಾಸಾಹೇಬ ತಡಾಕೆ, ರಾಜು ಖಾಂಡೇಕರ, ಭೈರು ಚೌಗಲೆ, ರಾವಸಾಹೇಬ ಖಾಂಡೇಕರ, ಅಣ್ಣಾಸಾಹೇಬ ಮಗದುಮ್ಮ, ಕೇದಾರಿ ಡೊಂಗರೆ, ಸಂತೋಷ ಮಂಗಸೂಳೆ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.