ADVERTISEMENT

ಮುಳವಾಡ ಏತ ನೀರಾವರಿಗೆ ಶ್ರಮಿಸಿರುವೆ: ಸಚಿವ ಪಾಟೀಲ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 5:30 IST
Last Updated 29 ಡಿಸೆಂಬರ್ 2025, 5:30 IST
ಆಲಮಟ್ಟಿ ಸಮೀಪದ ವಂದಾಲದಲ್ಲಿ ನಡೆದ ರಸ್ತೆ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಸಚಿವ ಶಿವಾನಂದ ‌ಪಾಟೀಲ ಮಾತನಾಡಿದರು
ಆಲಮಟ್ಟಿ ಸಮೀಪದ ವಂದಾಲದಲ್ಲಿ ನಡೆದ ರಸ್ತೆ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಸಚಿವ ಶಿವಾನಂದ ‌ಪಾಟೀಲ ಮಾತನಾಡಿದರು   

ಆಲಮಟ್ಟಿ: ‘2004ರಲ್ಲಿ ನಾನು ಬಸವನಬಾಗೇವಾಡಿ ಕ್ಷೇತ್ರದಿಂದ ಶಾಸಕನಾದ ಬಳಿಕವೇ ಮುಳವಾಡ ಏತ ನೀರಾವರಿ ಯೋಜನೆಗೆ ಚಾಲನೆ ದೊರಕಿದ್ದು’ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಸಮೀಪದ ವಂದಾಲ ಗ್ರಾಮದಲ್ಲಿ ರೈಲ್ವೇ ಸ್ಟೇಷನ್‌ವರೆಗಿನ ರಸ್ತೆ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

‘ಜಿಲ್ಲೆಯ ನೀರಾವರಿ ಯೋಜನೆ ಅನುಷ್ಠಾನದ ವಿಷಯದಲ್ಲಿ ಆಡಳಿತ ನಡೆಸಿದ ಎಲ್ಲ ಪಕ್ಷಗಳ, ಸರ್ಕಾರಗಳ ನಿರ್ಲಕ್ಷ್ಯವೂ ಇದೆ. ಕೃಷ್ಣಾ ಯೋಜನೆಯಿಂದ ಕೆಳಭಾಗದ ಜಿಲ್ಲೆಯ ಜನರು ಎರಡು ಬೆಳೆಗೆ ನೀರು ಪಡೆದರೂ, ನಮಗೆ ಕುಡಿಯಲು ನೀರು ಕೊಡಿ ಎಂದು ಗೋಗರೆಯುವ ದುಸ್ಥಿತಿ ಇತ್ತು’ ಎಂದರು.

‘ಅಂದಿನ ಶಾಸಕರಾಗಿದ್ದ ಹುಜರೆ ಹಾಗೂ ಸಂಸದರಾದ ಮುರಿಗೆಪ್ಪ ಸುಗಂಧಿ ಅವರ ಹೋರಾಟದ ಫಲವಾಗಿ ಗುಲಾಟಿ ಸಮಿತಿ ರಚನೆಗೊಂಡು ಕೃಷ್ಣಾ ಯೋಜನೆ ಬಗ್ಗೆ ಗಮನ ಹರಿಸಲಾಯಿತು. ಇದಕ್ಕಾಗಿ ಅಖಂಡ ವಿಜಯಪುರ ಜಿಲ್ಲೆಯ ಜನರು ಈ ಇಬ್ಬರು ನಾಯಕರಿಗೆ ಕೃತಜ್ಞರಾಗಿರಬೇಕು’ ಎಂದರು.

‘ನಮ್ಮ ತಲೆಮಾರಿನ ಜಿಲ್ಲೆಯ ರಾಜಕೀಯ ನಾಯಕರಲ್ಲಿ ಏನೆಲ್ಲ ಭಿನ್ನಾಭಿಪ್ರಾಯ ಇದ್ದರೂ ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ನಮ್ಮೆಲ್ಲರ ಬದ್ಧತೆ ಏಕರೂಪವಾಗಿದೆ. ಅದರಿಂದಾಗಿಯೇ ಬಸವನಾಡಿನ ನೀರಾವರಿ ಯೋಜನೆಗಳು ಅನುಷ್ಠಾನ ಕಂಡಿವೆ’ ಎಂದು ವಿವರಿಸಿದರು.

ಚಿಮ್ಮಲಗಿಯ ಅರಳೆಲೆ ಕಟ್ಟಿಮನಿ ಹಿರೇಮಠದ ಸಿದ್ದರೇಣುಕ ಶ್ರೀ ಸಾನ್ನಿಧ್ಯ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಇಒ ವೆಂಕಟೇಶ ವಂದಾಲ, ಪ್ರಕಾಶ ಬೀಳಗಿ, ಎಸ್.ಜಿ. ನಾಗಠಾಣ, ಜಿ.ಎಸ್.ಕಾಮನಕೇರಿ ಬಸನಗೌಡ ನರಸನಗೌಡರ, ರಾಮು ಜಗತಾಪ, ಮಲ್ಲನಗೌಡ ನರಸನಗೌಡರ, ವಂದಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರೇಶ ಗಣಾಚಾರಿ, ಪ್ರಮೋದ ಕುಲಕರ್ಣಿ, ತಮ್ಮಣ್ಣ ಬಂಡಿವಡ್ಡರ, ಚನ್ನಸಂಗಪ್ಪಗೌಡ ಪಾಟೀಲ, ಗಂಗಾಧರ ರಾಂಪೂರ, ಅಪ್ಪಣ್ಣ ಕಂಬಳಿ, ಬಸವರಾಜ ಹುಲಿಮನಿ, ಮಹಾಂತಪ್ಪ ದೊಡಮನಿ ಇದ್ದರು.

ADVERTISEMENT

ಕಬ್ಬಿನ ಬೆಲೆ ಏರಿಕೆ: ಕೇಂದ್ರದ ಕೆಲಸ

ಈಚೆಗೆ ಗುರ್ಲಾಪುರ ಕ್ರಾಸ್‌ನಲ್ಲಿ ರೈತರು ಪ್ರತಿಭಟನೆ ನಡೆಸಿದ ವೇಳೆ ನನ್ನ ಗಾಡಿಗೆ ಚಪ್ಪಲಿ ಎಸೆದು ಪ್ರತಿಭಟನಾಕಾರರೊಂದಿಗೆ ಮಲಗಿಕೊಂಡಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಹುಟ್ಟುಹಬ್ಬ ಆಚರಿಸಿದಿರಿ. ಆ ಪುಣ್ಯಾತ್ಮ ಇಲ್ಲಿ ಮಲಗುವ ಬದಲು ಪ್ರಧಾನಿ ಮೋದಿ ಮನೆ ಮುಂದೆ ಹೋಗಿ ಮಲಗಿದ್ದರೆ ಕಬ್ಬಿಗೆ ಉತ್ತಮ ಬೆಲೆ ಬರುತ್ತಿತ್ತು ಎಂದು ಸಚಿವ ಶಿವಾನಂದ ಪಾಟೀಲ ವಿಜಯೇಂದ್ರರನ್ನು ತಿವಿದರು. ‘ಕಬ್ಬಿನ ಬೆಲೆ ಏರಿಸುವುದು ಕೇಂದ್ರ ಸರ್ಕಾರದ ಕೆಲಸ. ರಾಜ್ಯದ ನೀರಾವರಿ ಯೋಜನೆಗಳ ಸಾಕಾರಗೊಳ್ಳಲು ಕೇಂದ್ರ ಸರ್ಕಾರ ಗೆಜೆಟ್ ಮಂಡಿಸಬೇಕು. ಆದರೆ ನಮ್ಮ ದುರಾದೃಷ್ಟ ರಾಜ್ಯದ 28 ಸಂಸದರ ಪೈಕಿ ಒಬ್ಬರೂ ಲೋಕಸಭಾ ಅಧಿವೇಶನದಲ್ಲಿ ವೇಳೆ ತುಟಿ ಬಿಚ್ಚಲಿಲ್ಲ’ ಎಂದರು. ಡಿಕೆಶಿ ಮುಖ್ಯಮಂತ್ರಿಯಾಗ್ತಾರಾ ಎಂಬ ಪತ್ರಕರ್ತರ ಪ್ರಶ್ನೆಗೆ ಅದೆಲ್ಲಾ ಹೈಕಮಾಂಡ್ ನೋಡಿಕೊಳ್ತದೆ ಎಂದು ಹೇಳಿ ಜಾರಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.