ADVERTISEMENT

ಉದ್ಯಾನ ನಿರ್ವಹಣೆ, ರಸ್ತೆ ನಿರ್ಮಾಣಕ್ಕೆ ಆಗ್ರಹ; ಪುರಸಭೆ ಕಚೇರಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 6:17 IST
Last Updated 5 ಸೆಪ್ಟೆಂಬರ್ 2025, 6:17 IST
ಮುದ್ದೇಬಿಹಾಳ ಪಟ್ಟಣದ ಪುರಸಭೆಗೆ ಆಗಮಿಸಿದ್ದ ಮಾರುತಿ ನಗರದ ನಿವಾಸಿಗಳು ವಾರ್ಡ್‌ನಲ್ಲಿ ಮೂಲ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಗುರುವಾರ ಕಚೇರಿ ವ್ಯವಸ್ಥಾಪಕ ಎಚ್.ಎ.ಡಾಲಾಯತ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಮುದ್ದೇಬಿಹಾಳ ಪಟ್ಟಣದ ಪುರಸಭೆಗೆ ಆಗಮಿಸಿದ್ದ ಮಾರುತಿ ನಗರದ ನಿವಾಸಿಗಳು ವಾರ್ಡ್‌ನಲ್ಲಿ ಮೂಲ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಗುರುವಾರ ಕಚೇರಿ ವ್ಯವಸ್ಥಾಪಕ ಎಚ್.ಎ.ಡಾಲಾಯತ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಮುದ್ದೇಬಿಹಾಳ: ಎರಡು ವರ್ಷಗಳಿಂದ ಮಾರುತಿ ನಗರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಮೂಲ ಸೌಕರ್ಯ ಕಲ್ಪಿಸಬೇಕಾಗಿದ್ದ ಪುರಸಭೆ ಆಡಳಿತ ಉದಾಸೀನ ತೋರುತ್ತಿರುವುದರಿಂದ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪಟ್ಟಣದ ಮಾರುತಿ ನಗರದ ನಿವಾಸಿಗಳು ಗುರುವಾರ ಇಲ್ಲಿನ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಯುವ ಮುಖಂಡ ಆನಂದ ತುಪ್ಪದ, ಮೂರು ವರ್ಷಗಳ ಹಿಂದೆ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರಿದ್ದಾಗ ಅಗೆದು ಬಿಟ್ಟಿರುವ ರಸ್ತೆಗಳನ್ನು ರಿಪೇರಿ ಮಾಡದೇ ಇರುವುದರಿಂದ ಗುಡ್ಡಗಾಡಿನಲ್ಲಿ ಸಂಚರಿಸುವ ಅನುಭವ ನಿವಾಸಿಗಳಿಗಾಗುತ್ತಿದೆ. ಉದ್ಯಾನವನವಂತೂ ತಿಪ್ಪೆಗುಂಡಿಯಾಗಿದೆ. ರಸ್ತೆಗಳು ಹದಗೆಟ್ಟಿದ್ದರೂ ಆಡಳಿತ ನಡೆಸುವವರು ಕಣ್ಣು ಮುಚ್ಚಿಕೊಂಡು ಕೂತಿದ್ದಾರೆ ಎಂದು ದೂರಿದರು.

ಮಾರುತಿ ನಗರದ ನಿವಾಸಿಗಳು ಮೂಲ ಸೌಕರ್ಯ ಕುರಿತು ಜಿಲ್ಲಾಧಿಕಾರಿಗಳು, ಮುಖ್ಯಾಧಿಕಾರಿಗಳು,ಹಾಲಿ ಶಾಸಕರ ಮನೆಗೆ ಹೋಗಿ ಅಳಲು ತೋಡಿಕೊಂಡರೂ ಏನೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ADVERTISEMENT

’ನಮ್ಮ ವಾರ್ಡಗೆ ಸೌಕರ್ಯ ಕಲ್ಪಿಸುವುದಿಲ್ಲ ಎಂದಾದರೆ ತೆರಿಗೆ ವಸೂಲಿ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿವಾಸಿ ಪಿ.ಎನ್.ಕುಲಕರ್ಣಿ ಮಾತನಾಡಿ, ಪುರಸಭೆಯವರು ಕಾಲಕಾಲಕ್ಕೆ ಚರಂಡಿ ಸ್ವಚ್ಛತೆ ಮಾಡುವುದಿಲ್ಲ. ಜನರು ರಾತ್ರಿ ಸಮಯದಲ್ಲಿ ಕತ್ತಲೆಯಲ್ಲಿ ಸಂಚರಿಸಬೇಕಾಗುತ್ತಿದ್ದು ಸರಿಯಾಗಿ ಬೀದಿ ದೀಪಗಳು ಇಲ್ಲ ಎಂದು ಆರೋಪಿಸಿದರು. ಒಂದು ವಾರದಲ್ಲಿ ಸಮಸ್ಯೆಗಳು ಸರಿಪಡಿಸದಿದ್ದರೆ ಪುರಸಭೆಗೆ ಬೀಗ ಜಡಿದು ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದರು.

ಪ್ರತಿಭಟನೆ ಸುದ್ದಿ ತಿಳಿದು ಆಗಮಿಸಿದ ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಹದಿನೈದು ದಿನಗಳಲ್ಲಿ ಮಾರುತಿ ನಗರದ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಹೇಳಿದರು.

ಕಚೇರಿ ವ್ಯವಸ್ಥಾಪಕ ಎಚ್.ಎ.ಡಾಲಾಯತ್ ಮನವಿ ಸ್ವೀಕರಿಸಿದರು. ನಿವಾಸಿಗಳಾದ ಎಂ.ಬಿ.ಬಿಳೇಭಾವಿ, ಮುನ್ನಾ ಅತ್ತಾರ, ಎಂ.ಎಂ.ಡಮನಿ, ಎಂ.ಎಸ್.ಮಾಲಗತ್ತಿ, ಬಿ.ಎಸ್.ದಾಸರ, ಎಂ.ಎಂ.ಸುಂಬಡ, ಬಿ.ಎಸ್.ಅಂಗಡಿ,ಎಂ.ಎಂ.ಉಪನಾಳ, ಆರ್.ಬಿ.ಹುನ್ನೂರ, ಎನ್.ಎನ್.ಖಾನ, ಕೆ.ಎ.ಹಿರೇಮಠ, ಸುರೇಶ ಕಮತ, ಮನೋಹರ ಪತ್ತಾರ, ಬಸವರಾಜ ಅಂಬಿಗೇರ, ಶಿವಾನಂದ ಚಿನಿವಾರ, ಎಂ.ಡಿ.ಮೋಮಿನ, ಉಮೇಶ ಜತ್ತಿ, ಬಸವರಾಜ ಮರೋಳ ಮೊದಲಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.