ವಿಜಯಪುರ: ‘ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಮುಸ್ಲಿಂ ವಿರೋಧಿ ಹೇಳಿಕೆ, ಕೋಮು ಪ್ರಚೋದನಕಾರಿ ಭಾಷಣಗಳಿಂದ ಸಮಾಜದ ಸಹನೆಯ ಶಕ್ತಿ ಮೀರಿದೆ, ಜನ ರೋಸಿ ಹೋಗಿದ್ದಾರೆ. ಸಮಾಜದವರು ರೀತಿಯಲ್ಲೂ ಸಿದ್ಧರಾಗಿದ್ದಾರೆ, ಇನ್ನು ಮುಂದೆ ಯತ್ನಾಳ ತಿರುಗಾಡುವುದು ಕಷ್ಟವಾಗಲಿದೆ’ ಎಂದು ಮುಸ್ಲಿಂ ಮುಖಂಡರು ಎಚ್ಚರಿಕೆ ನೀಡಿದರು.
ನಗರದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ಅಬ್ದುಲ್ ರಜಾಕ್ ಹೊರ್ತಿ ಮತ್ತು ಎಂ.ಸಿ.ಮುಲ್ಲಾ, ‘ಯತ್ನಾಳ ಅವರು ಸಮಾಜದ ಸಾಮರಸ್ಯ ಕೆಡಿಸುವ ಹೇಳಿಕೆ ನೀಡುವುದಕ್ಕೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ತಡೆಯೊಡ್ಡಬೇಕು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
‘ಇಸ್ಲಾಂ ಧರ್ಮ, ಸಮುದಾಯದ ಹೆಣ್ಣು ಮಕ್ಕಳ ವಿರುದ್ಧ ಅವಹೇಳನಕೇರಿ ಹೇಳಿಕೆ ನೀಡುವುದನ್ನು ಶಾಸಕ ಬಸನಗೌಡ ಪಾಟೀಲ ಮುಂದುವರಿಸಿದರೆ ಅವರು ಇನ್ನು ಮುಂದೆ ಎಲ್ಲೇ ಹೋದರೂ ಅಲ್ಲಿ ಅವರಿಗೆ ಮುತ್ತಿಗೆ ಹಾಕುತ್ತೇವೆ, ಕಪ್ಪು ಬಟ್ಟೆ ಪ್ರದರ್ಶನ ಮಾಡುತ್ತೇವೆ, ಅವರ ಭಾಷಣಕ್ಕೆ ತಡೆಯೊಡ್ದುತ್ತೇವೆ, ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧರಾಗಿದ್ದೇವೆ, ಮುಂದಾಗಬಹುದಾದ ಅಹಿತಕರ ಘಟನೆಗಳಿಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಾರಣವಾಗಬೇಕಾಗುತ್ತದೆ’ ಎಂದು ಹೇಳಿದರು.
‘ಇದುವರೆಗೆ ಹಲವು ಬಾರಿ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಲಿಲ್ಲ, ಇದನ್ನೇ ದುರುಪಯೋಗ ಮಾಡಿಕೊಂಡು ಮತ್ತೆ ಮತ್ತೆ ಕೋಮು ಸೌಹಾರ್ದ ಕೆಡಿಸುವ ಹೇಳಿಕೆ, ಅವಹೇಳನಕಾರಿ ಹೇಳಿಕೆ ನೀಡುವುದನ್ನು ಮುಂದುವರಿಸಿದ್ದಾರೆ’ ಎಂದು ಹೇಳಿದರು.
‘ಯತ್ನಾಳ ಅವರು ನಗರದಲ್ಲಿ ಮುಸ್ಲಿಮರು ಹೆಚ್ಚಿರುವ ವಾರ್ಡ್‌ಗಳಲ್ಲಿ ಯಾವುದೇ ಕೆಲಸ ಮಾಡಲು ಬಿಡುತ್ತಿಲ್ಲ, ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡುತ್ತಿಲ್ಲ, ಅಷ್ಟೊಂದು ಮುಸ್ಲಿಂ ದ್ವೇಷ ಮಾಡುತ್ತಿದ್ದಾರೆ. ಆದರೆ, ಅದೇ ಮುಸ್ಲಿಂ ಸದಸ್ಯರಿಬ್ಬರ ಸಹಕಾರದಿಂದ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಏರಲು ನೆರವಾಯಿತು ಎಂಬುದನ್ನು ಮರೆಯಬಾರದು’ ಎಂದರು.
‘ಸದಾಕಾಲ ಮುಸ್ಲಿಂ, ಪಾಕಿಸ್ತಾನ ಎಂದು ಜಪಿಸುತ್ತಿರುವ ಯತ್ನಾಳ ಅವರಿಗೆ ನೈಜವಾಗಿ ಹಿಂದುಗಳ ಬಗ್ಗೆ ಯಾವುದೇ ಕಾಳಜಿ ಇಲ್ಲ, ದೇಶ ಭಕ್ತಿ ಇಲ್ಲ, ಚುನಾವಣೆಗಾಗಿ, ಮತಗಳಿಗಾಗಿ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಬಿಜೆಪಿಯಿಂದ ಈಗಾಗಲೇ ಹೊರಹಾಕಲಾಗಿದೆ. ಆದರೂ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಯತ್ನಾಳ ಹೇಳುತ್ತಿರುವುದು ಹಾಸ್ಯಾಸ್ಪದ, ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಆದರೆ, ನಮ್ಮ ಪಕ್ಷದ ಗೆದ್ದಿದೆ ಎನ್ನುವುದು ನಾಚಿಕೆಗೇಡಿನ ಸಂಗತಿ’ ಎಂದರು.
ಮುಖಂಡರಾದ ಫಯಾಜ್ ಕಲಾದಗಿ, ಹನುಮಂತ ಸಾರವಾಡ, ಶಿವಪ್ಪ ಪಾರಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಅಮಾಯಕರ ಹಿಂದೂ ಯುವಕರಿಗೆ ಮುಸ್ಲಿಂ ಯುವತಿಯರನ್ನು ಮದುವೆ ಮಾಡಿಸಿ ಮಜಾ ನೋಡುವ ಯೋಜನೆ ಬಿಟ್ಟು ನಿಮ್ಮ ಕುಟುಂಬದವರನ್ನೇ ಮುಸ್ಲಿಮರಿಗೆ ಮದುವೆ ಮಾಡಿಕೊಟ್ಟರೆ ನಾವೇ ₹1.11 ಕೋಟಿ ನೀಡಲು ಸಿದ್ಧರಿದ್ದೇವೆಹಮೀದ್ ಮುಶ್ರೀಫ್ ಕಾಂಗ್ರೆಸ್ ಮುಖಂಡ
ಬುರ್ಕಾ ದಾಡಿಯವರ ಸಹಾಯದಿಂದಲೇ ಯತ್ನಾಳ ಶಾಸಕ ಆಗಿರುವುದು. ಅವರಿಲ್ಲದೇ ಯತ್ನಾಳ ಏನೂ ಆಗಲು ಸಾಧ್ಯವಿಲ್ಲ. ಮುಸ್ಲಿಮರ ಹೆಸರು ಹೇಳಿದರೆ ಮಾತ್ರ ಮತ ಬೀಳುತ್ತವೆ ಇಲ್ಲವಾದರೆ ಒಂದು ಮತವೂ ಬೀಳುವುದಿಲ್ಲಅಬ್ದುಲ್ ರಜಾಕ್ ಹೊರ್ತ ಕಾಂಗ್ರೆಸ್ ಮುಖಂಡ
ಇನ್ನು ಮುಂದೆ ಯತ್ನಾಳನ ಮುಸ್ಲಿಂ ವಿರೋಧಿ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಾಗಲಿ ದೂರು ನೀಡುವುದಾಗಲಿ ಬೈಯ್ಯುವುದಾಗಲಿ ಮಾಡುವುದಿಲ್ಲ ವಿಜಯಪುರದಲ್ಲಿ ತಿರುಗಾಡುವುದಕ್ಕೇ ಬಿಡುವುದಿಲ್ಲ ತಕ್ಕ ಪಾಠ ಕಲಿಸುತ್ತೇವೆಎಂ.ಸಿ.ಮುಲ್ಲಾ ಕಾಂಗ್ರೆಸ್ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.