ವಿಜಯಪುರ: ‘ಕಾಂಗ್ರೆಸ್ ಶಾಸಕ ವಿಠಲ ಕಟಕದೊಂಡ ಅವರ ನಿರ್ಲಕ್ಷ್ಯ ಧೋರಣೆಯಿಂದ ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರ ಕಳೆದ ಎರಡೂವರೆ ವರ್ಷದಲ್ಲಿ ಸಂಪೂರ್ಣ ಅಭಿವೃದ್ಧಿ ವಂಚಿತವಾಗಿ, ಹೀನಾಯ ಪರಿಸ್ಥಿತಿ ತಲುಪಿದೆ’ ಎಂದು ಬಿಜೆಪಿ ಮುಖಂಡ, ವಿಜಯಪುರ ಮಹಾನಗರ ಪಾಲಿಕೆ ಮಾಜಿ ಸದಸ್ಯ ರವೀಂದ್ರ ಲೋಣಿ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಭಿವೃದ್ಧಿ ಮಾಡುವ ಇಚ್ಛೆ ಕ್ಷೇತ್ರದ ಶಾಸಕರಿಗೆ ಇಲ್ಲ, ಯಾವುದೇ ವಿಶೇಷ ಅನುದಾನ ತರುತ್ತಿಲ್ಲ, ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳು ಕುಂಟಿತವಾಗಿವೆ, ರಸ್ತೆಗಳು ಹದಗೆಟ್ಟು ಹೋಗಿವೆ, ಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿಲ್ಲ, ಕ್ಷೇತ್ರಕ್ಕೆ ಒಳಪಟ್ಟ ಮಹಾನಗರ ಪಾಲಿಕೆ ವಾರ್ಡ್‌ಗಳ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಮಳೆಯಿಂದ ಜನರು ಸಮಸ್ಯೆಗೆ ಒಳಗಾದರೂ ಶಾಸಕರು ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ, ಯಾವುದೇ ಜನಪರ ಕೆಲಸಗಳು ಆಗುತ್ತಿಲ್ಲ, ಶಾಸಕರು ಜನರ ಕೈಗೆ ಸಿಗುತ್ತಿಲ್ಲ, ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ವಾಗ್ದಾಳಿ ನಡೆಸಿದರು.
‘ಶಾಸಕ ವಿಠಲ ಕಟಕದೋಂಡ ಅವರು ಸದಾ ಕಾಲ ಜಿಲ್ಲಾ ಉಸ್ತುವಾರಿ ಸಚಿವರ ಜೊತೆಯೇ ಸುತ್ತುತ್ತಿರುತ್ತಾರೆ. ಆದರೂ ಕ್ಷೇತ್ರದ ಯಾವುದೇ ಕೆಲಸ ಆಗುತ್ತಿಲ್ಲ ಏಕೆ’ ಎಂದು ಪ್ರಶ್ನಿಸಿದರು.
‘ಅಹಿಂದ ಮುಖ್ಯಮಂತ್ರಿ ಎಂದೇ ಗುರುತಿಸಿಕೊಂಡಿರುವ ಸಿದ್ದರಾಮಯ್ಯ ಅವರೂ ಸಹ ನಾಗಠಾಣ ಮೀಸಲು ಕ್ಷೇತ್ರದ ಬಗ್ಗೆ ಒಲವು ಹೊಂದಿಲ್ಲ. ಶಾಸಕರು ಮುಖ್ಯಮಂತ್ರಿಗೆ ಮನವಿ ಮಾಡಿ ಅನುದಾನ ತರುವ ಪ್ರಯತ್ನವನ್ನೂ ಮಾಡಿಲ್ಲ’ ಎಂದು ಆರೋಪಿಸಿದರು.
‘ಬಿಜೆಪಿಯಿಂದ ಕಾಂಗ್ರೆಸ್‌ಗೆ ಹೋಗಿ ಶಾಸಕರಾಗಿರುವುದರಿಂದ ವಿಠಲ ಕಟಕದೋಂಡ ಅವರಿಗೆ ಆ ಪಕ್ಷದಲ್ಲಿ ಅಗತ್ಯ ಸಹಕಾರ ಸಿಗುತ್ತಿಲ್ಲ ಎನಿಸುತ್ತಿದೆ’ ಎಂದು ಕಾಲೆಳೆದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ವಿಠಲ ಕಟಕದೋಂಡ ಅವರೇ ಎರಡನೇ ಬಾರಿ ಶಾಸಕರಾಗಿದ್ದೀರಿ ಇನ್ನೂ ಮೂರು ವರ್ಷ ಅಧಿಕಾರವಧಿ ಇದೆ. ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಿ ಜನರ ಸಂಕಷ್ಟಕ್ಕೆ ಸ್ಪಂದಿಸಿ. ಇಲ್ಲವಾದರೆ ಜನ ತಕ್ಕ ಪಾಠ ಕಲಿಸಲಿದ್ದಾರೆರವೀಂದ್ರ ಲೋಣಿ ಬಿಜೆಪಿ ಮುಖಂಡ ವಿಜಯಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.