
ನಾಲತವಾಡದಲ್ಲಿ ಮಾರಾಟಕ್ಕಿರುವ ಫೈಬರ್ ಹಲಗೆಗಳು
ನಾಲತವಾಡ: ಹೋಳಿ ಹಬ್ಬಕ್ಕೆ ನಾಲತವಾಡ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳು ಸಜ್ಜುಗೊಳ್ಳುತ್ತಿದೆ. ಹೋಳಿ ಹುಣ್ಣಿಮೆ ಹಿನ್ನೆಲೆ ಓಣಿಗಳಲ್ಲಿ, ಗಲ್ಲಿಗಳಲ್ಲಿ ಹೋಳಿ ಸಂಘಟನೆಗಳು ರಚನೆಯಾಗಿವೆ. ಪಟ್ಟಣದೆಲ್ಲೆಡೆ ಅಮಾವಾಸ್ಯೆಯ ಮರುದಿನದಿಂದಲೇ ಹಲಗೆಗಳು ಸದ್ದುಮಾಡುತ್ತಿವೆ.
ಹೋಳಿ ಹುಣ್ಣಿಮೆಗೆ ಮೆರುಗು ನೀಡುವ ಹಲಗೆ ಬಾರಿಸುವ ಸಂಭ್ರಮ ಸಂಜೆಯಿಂದ ರಾತ್ರಿಯವರೆಗೆ ಮುಂದುವರಿದಿರುತ್ತದೆ. ಬಾಲಕರು, ಯುವಕರು, ಹಿರಿಯರು ಹಲಗೆ ಬಾರಿಸಿ ಖುಷಿ ಪಡುತ್ತಾರೆ.
ಹಲಗೆ ಬಾರಿಸುವ ಬಹುತೇಕ ಜನರ ಕೈಗಳಲ್ಲಿ ಸಂಪ್ರದಾಯಿಕ ಹಲಗೆಗಳು ಕಂಡು ಬಂದರೆ, ಕೆಲವರು ಫೈಬರ್ ಹಲಗೆಗಳನ್ನು ಬಾರಿಸುತ್ತಾರೆ. ಬಣ್ಣದೋಕುಳಿವರೆಗೂ ಹಲಗೆ ಬಾರಿಸುವುದು ಮುಂದುವರೆಯುತ್ತದೆ. ಕಾಮದಹನದ ನಂತರ ಬಣ್ಣದಾಟ ಆಡಿ ಬಾಲಕರು, ಯುವಕರು ತಮ್ಮ ಹಲಗೆಗಳಿಗೆ ಒಂದು ವರ್ಷದ ತನಕ ವಿರಾಮ ನೀಡುತ್ತಾರೆ.
ಹಿಂದೆ ಎಮ್ಮೆ, ಕೋಣಗಳ ಚರ್ಮದಿಂದ ತಯಾರಿಸಿದ ಹಲಗೆಗಳು ಸಿಗುತ್ತಿದ್ದವು. ಇತ್ತೀಚೆಗಿನ ಫೈಬರ್ ಹಲಗೆಗಳಿಗೆ ಬೇಡಿಕೆ ಹೆಚ್ಚಿದೆ. ಈ ಹಿಂದೆ ಅಂಬೇಡ್ಕರ್ ನಗರದಲ್ಲಿ ಕೆಲವು ಕುಟುಂಬದವರು ಹೋಳಿ ಹುಣ್ಣಿಮೆಗಾಗಿ ಹಲಗೆಗಳನ್ನು ತಯಾರಿಸಿ ಮಾರಾಟ ಮಾಡುವ ಕಾಯಕ ಮಾಡುತ್ತಿದ್ದರು. ಅವುಗಳ ತಯಾರಿಕಾ ವಿಧಾನ ಸುಲಭದ್ದಲ್ಲ. ಹಾಗೂ ಬೆಲೆಯೂ ಅಧಿಕವಾಗಿರುವುದರಿಂದ ಸಾಂಪ್ರದಾಯಕ ಹಲಗೆಗಳಿಗೆ ಬೇಡಿಕೆ ಕಡಿಮೆಯಾಗಿದೆ.
ಮಾರುಕಟ್ಟೆಯಲ್ಲಿ ಫೈಬರ್ ಹಲಗೆಗಳು ₹100ರಿಂದ ₹3000 ಬೆಲೆಯಲ್ಲಿ ಮಾರಾಟವಾಗುತ್ತಿವೆ.
ರಂಗಿನಾಟ, ಕಾಮ ದಹನ: ವಿವಿಧ ಓಣಿಗಳ ಹುಡುಗರು ಮನೆಗಳಲ್ಲಿನ ಕುಳ್ಳು, ಕಟ್ಟಿಗೆ, ನಿಚ್ಚಣಿಕೆ, ಸಾರ್ವಜನಿಕರ ಮನೆಯ ಕಟ್ಟಿಗೆಯನ್ನು ಕದ್ದು ತಂದು, ಒಂದೆಡೆ ಹಾಕುತ್ತಾರೆ. ಅವುಗಳನ್ನೆಲ್ಲ ಒಟ್ಟುಗೂಡಿಸಿ, ಧಾರ್ಮಿಕ ವಿಧಿಯಂತೆ ಕಾಮಣ್ಣನನ್ನು ವಿವಿಧ ಬಡಾವಣೆಗಳಾದ ದೇಶಮುಖ ಓಣಿ, ರಡ್ಡೇರ ಪೇಟೆ, ಗಣಪತಿ ಚೌಕದ, ವೀರೇಶ್ವರ ವೃತ್ತದಲ್ಲಿ ಕಾಮಣ್ಣನ ದಹನ ಪ್ರಕ್ರಿಯೆ ನಡೆಯುತ್ತದೆ. ಮರುದಿನ ಹಿರಿ, ಕಿರಿಯರೆನ್ನದೆ ಬಣ್ಣದ ರಂಗು ರಂಗಿನ ಆಟವಾಡುತ್ತಾರೆ.
ನಾಲತವಾಡದಲ್ಲಿ ಹೋಳಿ ಹುಣ್ಣಿಮೆಯನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಈ ವರ್ಷ ಹಲಗೆ ಸದ್ದು ಹೆಚ್ಚಾಗಿದೆ. ರಾತ್ರಿಯಿಡೀ ಹಲಗೆ ವಾದನ ಕೇಳಿಬರುತ್ತಿದೆ. ಇದು ಪರೀಕ್ಷೆ ಬರೆಯಲು ಅಣಿಯಾದ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು.ಮಂಜುನಾಥ ಕಟ್ಟಿಮನಿ, ಯುವ ಧುರಿಣರು ನಾಲತವಾಡ
ಹೋಳಿ ಹುಣ್ಣಿಮೆ ಶಾಂತಿ ಸೌಹಾರ್ದತೆ ಸಾರುತ್ತದೆ. ಇದನ್ನು ಸಂಭ್ರಮದಿಂದ ಆಚರಿಸಬೇಕೆಂದು ಸೂಚಿಸಿದ್ದೇವೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ನಿಶ್ಚಿತ.- ಸಂಜಯ ತಿಪರೆಡ್ಡಿ, ಪಿಎಸ್ಐ, ಮುದ್ದೇಬಿಹಾಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.