ADVERTISEMENT

ಕೊಲ್ಹಾರ: ಬಳೂತಿಯಲ್ಲಿದೆ ಭವ್ಯ ಬಸವೇಶ್ವರ ವೃತ್ತ

ಗ್ರಾಮದ ಹೃದಯ ಭಾಗದಲ್ಲಿ ನಿರ್ಮಾಣ; ಹಬ್ಬಕ್ಕೆ ಅಲಂಕಾರ

ಬಸವರಾಜ ಎಸ್.ಉಳ್ಳಾಗಡ್ಡಿ
Published 19 ಅಕ್ಟೋಬರ್ 2019, 19:30 IST
Last Updated 19 ಅಕ್ಟೋಬರ್ 2019, 19:30 IST
ಕೊಲ್ಹಾರ ತಾಲ್ಲೂಕಿನ ಬಳೂತಿ ಗ್ರಾಮದಲ್ಲಿರುವ ಬಸವೇಶ್ವರ ವೃತ್ತ
ಕೊಲ್ಹಾರ ತಾಲ್ಲೂಕಿನ ಬಳೂತಿ ಗ್ರಾಮದಲ್ಲಿರುವ ಬಸವೇಶ್ವರ ವೃತ್ತ   

ಕೊಲ್ಹಾರ: ವಚನಕ್ರಾಂತಿಯ ಮೂಲಕ ಜಗತ್ತಿಗೆ ಸಮಾನತೆಯ ಸಂದೇಶ ಸಾರಿದವರು ಮಹಾನ್ ಮಾನವತಾವಾದಿ, ವಿಶ್ವಗುರು ಬಸವೇಶ್ವರರು. ಅವರ ಭಾವೈಕ್ಯತೆಯ ಸಂದೇಶದ ಪ್ರತೀಕವಾಗಿ ತಾಲ್ಲೂಕಿನ ಬಳೂತಿ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಭವ್ಯವಾದ ಅಶ್ವಾರೋಹಿ ಬಸವೇಶ್ವರ ಮೂರ್ತಿಯನ್ನು ಸ್ಥಾಪಿಸಿ, ಅಪರೂಪದ ಬಸವೇಶ್ವರ ವೃತ್ತವನ್ನು ನಿರ್ಮಿಸಿದ್ದಾರೆ.

ಬಳೂತಿ ಗ್ರಾಮದ ಸರ್ವಧರ್ಮೀಯರೂ ಒಟ್ಟುಗೂಡಿ ಗ್ರಾಮದ ಹೃದಯ ಭಾಗದಲ್ಲಿ ಬಸವೇಶ್ವರರ ವೃತ್ತ ಸ್ಥಾಪಿಸುವ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ. ಈ ಮೊದಲು ಆ ವೃತ್ತದಲ್ಲಿದ್ದ ಚಿಕ್ಕ ಬಸವಣ್ಣನ ಮೂರ್ತಿಯನ್ನು ಬದಲಾಯಿಸಿ, ಗ್ರಾಮದ ವಿವಿಧ ಸಂಘಸಂಸ್ಥೆಗಳಿಂದ ಸಂಗ್ರಹಿಸಿದ ಹಣದಲ್ಲಿ ಗ್ರಾಮದ ಗುರು-ಹಿರಿಯರು ಹಾಗೂ ಸಮಸ್ತ ಗ್ರಾಮಸ್ಥರು ಸೇರಿಕೊಂಡು ಕಳೆದ ನಾಲ್ಕು ವರ್ಷಗಳ ಹಿಂದೆ ಈ ಸುಂದರ ಅಶ್ವಾರೋಹಿ ಬಸವೇಶ್ವರ ವೃತ್ತ ಅಭಿವೃದ್ಧಿಗೊಳಿಸಿದರು. ₹1 ಲಕ್ಷ ವೆಚ್ಚದಲ್ಲಿ ಪಂಢರಾಪುರದ ಖ್ಯಾತ ಶಿಲ್ಪಿಗಳಿಂದ ಕೆತ್ತಿಸಿದ ಏಕಶಿಲಾ ಅಮೃತಶಿಲೆಯ ಅಶ್ವಾರೋಹಿ ಬಸವೇಶ್ವರ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಮೂರ್ತಿಯ ಸುತ್ತ ಮಂಟಪ ನಿರ್ಮಾಣ ಮಾಡಿ, ಬಣ್ಣ ಹಚ್ಚಿಸಿ ಚಿಕ್ಕ ಕಳಶವನ್ನು ಇಟ್ಟಿದ್ದಾರೆ. ಒಟ್ಟು ಸುಮಾರು ₹3 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಬಸವೇಶ್ವರ ವೃತ್ತವನ್ನು ಗಿರಿಸಾಗರದ ಶ್ರೀಗಳ ಅಮೃತಹಸ್ತದಿಂದ ಉದ್ಘಾಟನೆಗೊಳಿಸಿದರು.

ಎರಡು ವರ್ಷಗಳ ಹಿಂದೆ ವೃತ್ತಕ್ಕೆ ಸ್ಥಳೀಯ ಪಂಚಾಯಿತಿ ವತಿಯಿಂದ ಹೈಮಾಸ್ಟ್‌ ವಿದ್ಯುತ್ ದೀಪಗಳನ್ನು ಅಳವಡಿಲಾಗಿದ್ದು, ಸಂಜೆ ಹೊತ್ತಿನಲ್ಲಿ ವಿದ್ಯುತ್ ದೀಪಗಳಿಂದ ಕಂಗೊಳಿಸುವ ಬಸವೇಶ್ವರ ವೃತ್ತ ಸುಂದರವಾಗಿ ಗೋಚರಿಸುತ್ತದೆ. ಇನ್ನು ಬಸವೇಶ್ವರ ಮೂರ್ತಿಗೆ ಗ್ರಾಮದ ಹಿರಿಯರಾದ ಕೋಮಾರಪ್ಪ ರಾವುತಪ್ಪ ಮಟ್ಟಿಹಾಳ ಪ್ರತಿದಿನ ಪೂಜೆ ನೇರವೇರಿಸುತ್ತಾ ಬಂದಿದ್ದಾರೆ.

ADVERTISEMENT

‘ಗ್ರಾಮದ ಭಾಂವಿ ಬಸವೇಶ್ವರ ಜಾತ್ರೋತ್ಸವ ಸಂದರ್ಭ, ಬಸವ ಜಯಂತಿ, ಹೊಸ ವರ್ಷ ಸೇರಿದಂತೆ ವಿವಿಧ ಹಬ್ಬ ಹರಿದಿನಗಳಲ್ಲಿ ಬಸವೇಶ್ವರ ಮೂರ್ತಿಗೆ ಗ್ರಾಮಸ್ಥರೆಲ್ಲರೂ ಸೇರಿ ವಿಶೇಷ ಪೂಜೆ ಸಲ್ಲಿಸುತ್ತೇವೆ. ವಿಶೇಷವಾಗಿ ಬಸವ ಜಯಂತಿಯಂದು ಅಶ್ವಾರೋಹಿ ಬಸವೇಶ್ವರ ಮೂರ್ತಿಗೆ ಅಭಿಷೇಕ ಮಾಡಿ ಪೂಜೆ ನೇರವೇರಿಸಲಾಗುವುದು. ಬಸವ ಜಯಂತಿ ನಿಮಿತ್ತ ಅಂದು ಅನ್ನ ಪ್ರಸಾದ ಸೇವೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಬಸವ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ’ ಎಂದು ಗ್ರಾಮದ ಹಿರಿಯರಾದ ಪಿ.ಸಿ.ಬಾವಾ, ಪರಸಪ್ಪ ಬಶೆಟ್ಟಿ ಹಾಗೂ ದುಂಡಪ್ಪ ಬನಾಗೊಂಡ ಮಾಹಿತಿ ನೀಡಿದರು.

*
ಬಸವೇಶ್ವರ ವೃತ್ತವು ಕೊಲ್ಹಾರ ತಾಲ್ಲೂಕಿನಲ್ಲೇ ಮಾದರಿ ವೃತ್ತವಾಗಿದೆ. ಗ್ರಾಮದ ಎಲ್ಲಾ ಧರ್ಮದವರು ಸೇರಿ ಭಾವೈಕ್ಯದಿಂದ ನಿರ್ಮಿಸಿರುವ ಈ ವೃತ್ತ ನಮ್ಮ ಗ್ರಾಮದ ಹೆಮ್ಮೆ.
-ನಂದಬಸಪ್ಪ ಚೌಧರಿ, ಗ್ರಾಮದ ಹಿರಿಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.